ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಸೇವೆ–ಸುಲಿಗೆ ನಡುವಿನ ಹೋರಾಟ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ
Published 14 ಮಾರ್ಚ್ 2024, 15:03 IST
Last Updated 14 ಮಾರ್ಚ್ 2024, 15:03 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯು ನಿಸ್ವಾರ್ಥ–ಸ್ವಾರ್ಥ, ಸೇವೆ–ಸುಲಿಗೆ ಹಾಗೂ ಒಳಿತು–ಕೆಡುಕುಗಳ ನಡುವಿನ ಹೋರಾಟ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ–ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್‌ ಅವರ ಬಗ್ಗೆ ಸಂಸದ ಡಿ.ಕೆ. ಸುರೇಶ್‌ ಕೀಳಾಗಿ ಟೀಕೆ ಮಾಡಿದ್ದಾರೆ. ಮಂಜುನಾಥ್‌ ಅವರ ಸಾಧನೆಯನ್ನು ದೇಶ ಕೊಂಡಾಡುತ್ತಿದೆ. ಅವರ ಸಾಧನೆಗೆ ಸಮವಲ್ಲದ ಸಂಸದರು ನಾಲಿಗೆ ಜಾರಿಬಿಟ್ಟಿದ್ದಾರೆ. ಮಾತನಾಡುವ ಮೊದಲು ಅರಿತು ಮಾತನಾಡಬೇಕು ಎಂದರು.

‘ಬಿಜೆಪಿಯಿಂದ ಸ್ಪರ್ಧಿಸುವಂತೆ ಅವರ ಮನವೊಲಿಸಿದ್ದು ನಾನೇ. ಅಂತಹ ಸಾಧಕರು, ಸಜ್ಜನರು ರಾಜಕಾರಣಕ್ಕೆ ಬೇಕಿದೆ. ಅವರನ್ನು ಭಾರಿ ಬಹುಮತದಿಂದ ಕ್ಷೇತ್ರದ ಜನರು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಮಹಿಳಾ ಸಬಲೀಕರಣಕ್ಕೆ ದೇವೇಗೌಡರ ಕೊಡುಗೆ ಸ್ಮರಣೀಯ. ಮಹಿಳಾ ಮೀಸಲು ಜಾರಿಯಾದರೆ ವಿಧಾನಸಭೆಗೆ 80-90  ಮಹಿಳೆಯರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಸಾಮಾನ್ಯ ಮಹಿಳೆಯರೂ ಶಾಸಕರಾಗಬಹುದು ಎನ್ನುವುದಕ್ಕೆ ಶಾರದಾ ಪೂರ‍್ಯಾನಾಯ್ಕ್‌, ಕರೆಮ್ಮ ನಾಯಕ್‌ ಉದಾಹರಣೆ. ಅವರ ಸಾಧನೆ ಪಕ್ಷದ ಇತರೆ ಮಹಿಳಾ ಮುಖಂಡರಿಗೆ ಸ್ಫೂರ್ತಿ ಎಂದು ಬಣ್ಣಿಸಿದರು. 

ಪಕ್ಷದ ಪ್ರಮುಖರ ಸಮಿತಿ ಅಧ್ಯಕ್ಷ ಜಿ.ಟಿ.ದೇವೇಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಅಧ್ಯಕ್ಷೆ ಲೀಲಾದೇವಿ ಆರ್‌. ಪ್ರಸಾದ್,‌ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಉಪಸ್ಥಿತರಿದ್ದರು.

ಮಂಜುನಾಥ್‌–ಅಮಿತ್‌ ಶಾ ಶೀಘ್ರ ಭೇಟಿ:

ದೇವೇಗೌಡ ಡಾ.ಸಿ.ಎನ್‌. ಮಂಜುನಾಥ್‌ ಅವರು ಬಿಜೆಪಿಯಿಂದ ಸ್ಪರ್ಧಿಸಲು ಮಿತ್ರ ಪಕ್ಷ ಕೋರಿತ್ತು. ಅದಕ್ಕೆ ಕುಮಾರಸ್ವಾಮಿ ಸಮ್ಮತಿಸಿದ್ದರು. ಮಂಜುನಾಥ್‌ ಈಗಾಗಲೇ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ದೆಹಲಿಗೆ ತೆರಳಿ ಅಮಿತ್‌ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.  ಮಂಜುನಾಥ್‌ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಮಾಡಿದ್ದಾರೆ. ಉಚಿತ ಸೇವೆ ಒದಗಿಸಿದ್ದಾರೆ. ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ. ಅಂತಹ ಸಾಧನೆ ಮಾಡಿದ ವ್ಯಕ್ತಿ ದೇಶದಲ್ಲೇ ಅಪರೂ‍ಪ. ಅಂಥವರು ಲೋಕಸಭೆಗೆ ಆಯ್ಕೆಯಾಗಬೇಕು ಎಂದರು. ಜೆಡಿಎಸ್‌ನ ಮೂರು ಕ್ಷೇತ್ರಗಳ ಜತೆಗೆ ಬಿಜೆಪಿಯ 25 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಮೈಸೂರಿನಲ್ಲಿ ಯದುವೀರ್ ಒಡೆಯರ್‌ ತುಮಕೂರಲ್ಲಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.  

ಜಿಲ್ಲೆಗಳ ಮಧ್ಯೆ ಜಲ ವ್ಯಾಜ್ಯ: ಟೀಕೆ

ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿದ್ದು ರಾಜ್ಯದ ಜಿಲ್ಲೆಗಳ ನಡುವೆಯೂ ಜಲ ವ್ಯಾಜ್ಯ ತಂದಿಟ್ಟಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು ಹಾಸನ ಹಾಗೂ ತುಮಕೂರು ಜಿಲ್ಲೆಗಳ ನಡುವೆ ಹೇಮಾವತಿ ನೀರಿನ ಜಗಳ ತಂದಿಟ್ಟಿದೆ. ಹಾಸನ ಜಿಲ್ಲೆಯ ಜನರು ಎಂದೂ ತುಮಕೂರಿಗೆ ನೀರು ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಎರಡೂ ಜಿಲ್ಲೆಯ ಜನರ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ನಾಲೆ ಉದ್ದಕ್ಕೂ ಪೊಲೀಸ್ ಪಹರೆ ಹಾಕಿದ್ದಾರೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT