ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ಕೃತ್ಯಕ್ಕೆ ವ್ಯಾಪಕ ಖಂಡನೆ:ರಾಷ್ಟ್ರಮಟ್ಟಕ್ಕೂ ತಲುಪಿದ ದೌರ್ಜನ್ಯದ ಸದ್ದು

‘ಪ‍್ರಜ್ವಲ್‌ ಉಚ್ಚಾಟನೆಗೆ ಗೌಡರ ತೀರ್ಮಾನ’: ತನಿಖೆ ಚುರುಕು
Published 30 ಏಪ್ರಿಲ್ 2024, 0:04 IST
Last Updated 30 ಏಪ್ರಿಲ್ 2024, 0:04 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಪ್ರಕರಣದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಈ ಬಗ್ಗೆ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆಯನ್ನು ಚುರುಕುಗೊಳಿಸಿದೆ. 

ವಿಡಿಯೊದಲ್ಲಿ ಇದ್ದಾರೆ ಎನ್ನಲಾದ ಐವರು ಸಂತ್ರಸ್ತೆಯರನ್ನು ಕರೆಯಿಸಿಕೊಂಡಿದ್ದ ಎಸ್ಐಟಿ ತನಿಖಾ ತಂಡದ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಾಂಬಾ ಅವರು ಈ ವಿಷಯ ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿ ಟೀಕಾ ಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್‌ನ ರಾಜ್ಯ ನಾಯಕರು, ‘ಪ್ರಜ್ವಲ್‌ ವಿಷಯ ಗೊತ್ತಿದ್ದೂ ಟಿಕೆಟ್ ನೀಡಿದ್ದೇಕೆ; ಮೋದಿ ಅವರು ಪ್ರಜ್ವಲ್‌ ಪರ ಪ್ರಚಾರ ನಡೆಸಿದ್ದು ಏಕೆ’ ಎಂದು ಕುಟುಕಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆಯೇ, ಪ್ರಜ್ವಲ್ ತಂದೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, ‘ಇದು ಹಳೆಯ ವಿಡಿಯೊ; ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರು ಈಗ ಇದನ್ನು ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಇದಕ್ಕೆ ಭಿನ್ನವಾಗಿ ಪ್ರತಿಕ್ರಿಯಿಸಿರುವ, ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ‘ರೇವಣ್ಣ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ. ಪ್ರಜ್ವಲ್ ಉಚ್ಚಾಟಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಜೆಡಿಎಸ್‌ನ ಯುವ ಶಾಸಕರಾದ ಗುರಮಠಕಲ್‌ನ ಶರಣ ಕಂದಕೂರ ಹಾಗೂ ಮುಳಬಾಗಿಲಿನ ಸಮೃದ್ಧಿ ಮಂಜುನಾಥ್ ಅವರು ಪ್ರಜ್ವಲ್ ವಿರುದ್ಧ ಸಿಡಿದೆದ್ದಿದ್ದು, ‘ರಾಜ್ಯದಾದ್ಯಂತ ಹರಿದಾಡುತ್ತಿರುವ ವಿಡಿಯೊಗಳಿಂದ ತಲೆ ತಗ್ಗಿಸುವಂತಾಗಿದ್ದು, ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಮಂಗಳವಾರ (ಇದೇ 30) ಹುಬ್ಬಳ್ಳಿಯಲ್ಲಿ ಜೆಡಿಎಸ್‌ ಪ್ರಮುಖರ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಶಿಸ್ತುಕ್ರಮ ಕುರಿತು ನಿರ್ಣಯ ಘೋಷಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಬಿಜೆಪಿ ಮೌನ: ಪ್ರಜ್ವಲ್ ವಿಷಯದಲ್ಲಿ ಬಿಜೆ‍‍ಪಿ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ‘ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದು, ಸಮರ್ಥನೆ ಮಾಡಿಕೊಂಡರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರಲಿದೆ. ಹೀಗಾಗಿ, ಮೌನವೇ ಸೂಕ್ತ ಎಂಬ ತೀರ್ಮಾನ ಪಕ್ಷದ್ದಾಗಿದೆ’ ಎಂದು ಮೂಲಗಳು ಹೇಳಿವೆ. 

‘ವಿಡಿಯೊದಲ್ಲಿರುವ ನೂರಾರು ಸಂತ್ರಸ್ತೆಯರು ಹಿಂದೂಗಳಲ್ಲವೇ? ಈ ಬಗ್ಗೆ ಬಿಜೆಪಿ ಯಾಕೆ ಹೋರಾಟ ಮಾಡುತ್ತಿಲ್ಲ’ ಎಂದು ಕಾಂಗ್ರೆಸ್‌ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ವಲ್‌ಗೆ ಸಂಬಂಧಿಸಿದ್ದು ಎನ್ನಲಾಗುತ್ತಿರುವ ವಿಡಿಯೊಗಳು ವಾರದ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ತನಿಖೆಗಾಗಿ ಸರ್ಕಾರ ಎಸ್ಐಟಿ ರಚಿಸುತ್ತಿದ್ದಂತೆಯೇ ಸಂಸದರ ವರ್ತನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಾಸನ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆದಿದ್ದು, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂಬ ಹಕ್ಕೊತ್ತಾಯವೂ ಮಂಡನೆಯಾಗಿದೆ.

ದೇಶ ಬಿಟ್ಟಿದ್ದು ಹೇಗೆ: ಪ್ರಿಯಾಂಕಾ

ಸೇಡಂ (ಕಲಬುರಗಿ ಜಿಲ್ಲೆ): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರ ಕಸಿದುಕೊಳ್ಳಲಿದೆ ಎನ್ನುತ್ತಿದ್ದ ನೀವು, ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದಾತ ನಿಮ್ಮ ಮೂಗಿನ ಕೆಳಗೇ ದೇಶ ಬಿಟ್ಟು ಓಡಿಹೋಗಿರುವ ಬಗ್ಗೆ ಏನು ಹೇಳುತ್ತೀರಿ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು.

‘ಕೆಲ ದಿನಗಳ ಹಿಂದೆ ಮೂರು ದಿನಗಳ ಸಲುವಾಗಿ ನನ್ನ ಮಗಳನ್ನು ಭೇಟಿ ಮಾಡಲು ಹೋಗಿದ್ದಾಗ ಪ್ರಧಾನಿ ಹಾಗೂ ಗೃಹ ಸಚಿವರು ಪ್ರಿಯಾಂಕಾ ಗಾಂಧಿ ವಿದೇಶಕ್ಕೆ ಹೋಗಿದ್ದಾರೆ ಎಂದು ಅಪಪ್ರಚಾರ ಮಾಡಿದ್ದರು. ನಾನು ಎಲ್ಲಿಗೆ ಹೋಗುತ್ತೇನೆ, ವಿರೋಧ ಪಕ್ಷದ ನಾಯಕರು ಎಲ್ಲಿಗೆ ಹೋಗುತ್ತಾರೆ ಎಂಬುದು ಇವರಿಗೆ ಗೊತ್ತಿರುತ್ತದೆ. ಆದರೆ, ಇಂಥ ಆರೋಪಿ, ರಾಕ್ಷಸ ಈ ದೇಶವನ್ನು ಬಿಟ್ಟು ಹೋಗಿರುವುದು ಇವರಿಗೆ ಗೊತ್ತಾಗುವುದಿಲ್ಲ ಎಂಬುದನ್ನು ಹೇಗೆ ನಂಬಲು ಸಾಧ್ಯ’ ಎಂದು ಕೇಳಿದರು.

‘ಪಾಪದ ಕೊಡ ತುಂಬಿದಾಗ...’

ಹಾಸನ: ‘ಎಸ್ಐಟಿ ರಚನೆಯಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು. ಶಿಶುಪಾಲನಿಗೆ ಕೃಷ್ಣ ನೂರು ತಪ್ಪು ಮಾಡಲು ಅವಕಾಶ ಕೊಟ್ಟ. 101ನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೇಳುವ ಮೂಲಕ ಪರೋಕ್ಷವಾಗಿ ರೇವಣ್ಣ ಕುಟುಂಬದ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನಕಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು,‘ಎಲ್ಲ ರೀತಿಯಲ್ಲೂ ನ್ಯಾಯ ಸಿಗುತ್ತದೆ. ಮನವಿಯನ್ನು ಪರಿಗಣಿಸಿದ್ದೇನೆ, ಸೂಕ್ತ ತನಿಖೆಯಾಗಿ ನ್ಯಾಯ ಸಿಗುತ್ತದೆ. ಇಂತಹ ಘಟನೆಯಾದಾಗ ನಾವು ಪ್ರತಿಭಟಿಸಬೇಕು. ತಮ್ಮನ್ನು ತಾವು ರಕ್ಷಣೆ ಮಾಡುವಷ್ಟು ಮಹಿಳೆ ಮುಂದುವರಿದಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ’ ಎಂದು ಹೇಳಿದರು.

ಪ್ರಜ್ವಲ್ ಉಚ್ಚಾಟನೆಗೆ ದೇವೇಗೌಡರ ತೀರ್ಮಾನ

ಶಿವಮೊಗ್ಗ: ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತೀರ್ಮಾನಿಸಿದ್ದಾರೆ ಎಂದು ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಆ ಬಗ್ಗೆ ಅಧಿಕೃತ ಅದೇಶ ಹೊರಡಿಸಲಾಗುವುದು’ ಎಂದರು.

‘ಪ್ರಜ್ವಲ್  ಪ್ರಕರಣದಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದ ಹೆಣ್ಣು ಮಕ್ಕಳ ಪರವಾಗಿ ನಾನೂ ಧ್ವನಿ ಎತ್ತುತ್ತೇನೆ. ತಪ್ಪು ಆಗಿದ್ದರೆ ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕು ಎಂಬ ನನ್ನ ನಿಲುವು ಮುಂದುವರಿಯಲಿದೆ’ ಎಂದು ಹೇಳಿದರು. ಪ್ರಿಯಾಂಕಾ ಗಾಂಧಿ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನರೇಂದ್ರ ಮೋದಿ, ಬಿಜೆಪಿ, ದೇವೇಗೌಡರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಈ ವಿಚಾರದಲ್ಲಿ ನನ್ನ ಹಾಗೂ ನನ್ನ ತಂದೆಯ ಬಗ್ಗೆ ಯಾರೂ ಸಂಶಯಪಡಬೇಡಿ’ ಎಂದು ಮನವಿ ಮಾಡಿದರು. ‘ಪ್ರಜ್ವಲ್‌ಗೆ ಸಂಬಂಧಿಸಿದೆ ಎನ್ನಲಾದ ಪೆನ್‌ಡ್ರೈವ್ ವಿಚಾರದಲ್ಲಿ ಇಡೀ ಸಮಾಜಕ್ಕೆ ಮುಜುಗರ ಆಗಿದೆ. ಈ ವಿಚಾರದಲ್ಲಿ ಪದೇ ಪದೇ ದೇವೇಗೌಡರ ಕುಟುಂಬದ ಹೆಸರು ಎಳೆದು ತರಬೇಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT