ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರನ್ನು ಮಕ್ಕಳು ಧರ್ಮಕ್ಕೆ ನೋಡಿಕೊಳ್ಳಬೇಕಿಲ್ಲ: ಹೈಕೋರ್ಟ್‌

Published 13 ನವೆಂಬರ್ 2023, 23:30 IST
Last Updated 13 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಳಿನ ಮುಸ್ಸಂಜೆಯಲ್ಲಿ ಪಯಣಿಸುವ ಅಪ್ಪ ಮತ್ತು ಅಮ್ಮನನ್ನು ಮಕ್ಕಳು ಧರ್ಮಕ್ಕೆ ನೋಡಿಕೊಳ್ಳಬೇಕಾಗಿಲ್ಲ. ಅದು ಅವರ ಕಾನೂನು ಬಾಧ್ಯತೆ, ಮಾತ್ರವಲ್ಲ ನೈತಿಕತೆಯ ಆದ್ಯ ಕರ್ತವ್ಯವೂ ಹೌದು‘ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪ್ರಕರಣವೊಂದರಲ್ಲಿ ಮಗಳು ಮತ್ತು ಅಳಿಯ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಹಿರಿಯರ ಆರೈಕೆಯ ನಿಟ್ಟಿನಲ್ಲಿ ವಿಶ್ವಸಂಸ್ಥೆ 1991ರಲ್ಲಿ ನಿರ್ಣಯವೊಂದನ್ನೂ ಕೈಗೊಂಡಿದೆ. ಪೋಷಕರನ್ನು ಪ್ರೀತಿಯಿಂದ ಆರೈಕೆ ಮಾಡುವುದು ಮಕ್ಕಳ ಕರ್ತವ್ಯ. ಪೋಷಕರಿಂದ ಸ್ಥಿರಾಸ್ತಿಯನ್ನು ಉಡುಗೊರೆ ರೂಪದಲ್ಲಿ ಪಡೆದಿದ್ದರೆ ಪ್ರೀತಿ ಇನ್ನಷ್ಟು ಹೆಚ್ಚಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪೋಷಕರ ಮೇಲೆ ಹತ್ತಿರದವರಿಂದಲೇ ನಡೆಯುವ ದೌರ್ಜನ್ಯ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಇದು ಉತ್ತಮ ಬೆಳವಣಿಗೆಯಲ್ಲ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು, ಪ್ರಾಧಿಕಾರಗಳು ಹೆಚ್ಚು ಸಂವೇದನಾಶೀಲವಾಗಿರಬೇಕು. ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದ್ದು ಈ ಬಗ್ಗೆ ಮುತುವರ್ಜಿ ವಹಿಸಬೇಕು‘ ಎಂದು ನ್ಯಾಯಪೀಠ ಕಾಳಜಿ ವ್ಯಕ್ತಪಡಿಸಿದೆ.

ಪ್ರಕರಣವೇನು?: ರಾಜಶೇಖರಯ್ಯ ಅವರ ಪುತ್ರಿ, ಆರ್‌.ಕವಿತಾ, ತುಮಕೂರು ಜಿಲ್ಲೆಯ ಬಸವಾಪಟ್ಟಣದ ನಿವಾಸಿ ಯೋಗೇಶ್‌ ಅವರನ್ನು ಮದುವೆಯಾಗಿದ್ದರು. ಮಗಳ ಮದುವೆ ನಂತರ ರಾಜಶೇಖರಯ್ಯ ತಮ್ಮ ಆಸ್ತಿಯನ್ನು 2018ರ ಸೆಪ್ಟೆಂಬರ್ 28ರಂದು ಮಗಳ ಹೆಸರಿಗೆ ಗಿಫ್ಟ್‌ ಡೀಡ್‌ ಮಾಡಿ ಕೊಟ್ಟಿದ್ದರು.

ಈ ಬೆಳವಣಿಗೆ ನಂತರ ರಾಜಶೇಖರಯ್ಯ ಸ್ಥಳೀಯ ಉಪವಿಭಾಗಾಧಿಕಾರಿಗೆ ದೂರೊಂದನ್ನು ನೀಡಿ, ‘ನನ್ನ ಮಗಳು ಮತ್ತು ಅಳಿಯ ನನ್ನನ್ನು ತಹಶೀಲ್ದಾರ್‌ ಕಚೇರಿಗೆ ವೃದ್ಧಾಪ್ಯ ವೇತನ ಮಾಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ ಹಲವು ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಮನೆ ನಿರ್ಮಾಣಕ್ಕೆಂದು ನನ್ನಿಂದ ₹ 10 ಲಕ್ಷ ‍ಪಡೆದಿದ್ದು, ಮನೆ ನಿರ್ಮಾಣಕ್ಕೆ ಮಾಡಿರುವ ಸಾಲ ತೀರಿಸಲು ಆಸ್ತಿ ಮಾರಾಟಕ್ಕೆ ಒತ್ತಡ ಹೇರುತ್ತಿದ್ದಾರೆ‘ ಎಂದು ಆರೋಪಿಸಿದ್ದರು.

ಈ ದೂರನ್ನು ಉಪವಿಭಾಗಾಧಿಕಾರಿಯು, ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣಾ ಕಾಯ್ದೆ–2007ರ ಅಡಿಯಲ್ಲಿ ವಿಚಾರಣೆ ನಡೆಸಿದ್ದರು. ಈ ವೇಳೆ ರಾಜಶೇಖರಯ್ಯ, ‘ಮಗಳು ಕವಿತಾ ಮತ್ತು ಅಳಿಯ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ‘ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಕವಿತಾ ಮತ್ತು ಮತ್ತು ಅವರ ಪತಿ, ’ರಾಜಶೇಖರಯ್ಯ ಅವರನ್ನು ನಾವು ಚೆನ್ನಾಗಿಯೇ ನೋಡಿಕೊಂಡಿದ್ದೇವೆ. ಅವರ ವೈದ್ಯಕೀಯ ಚಿಕಿತ್ಸೆಗಾಗಿ ಈತನಕ ₹ 30 ಲಕ್ಷ ಖರ್ಚು ಮಾಡಿದ್ದೇವೆ‘ ಎಂದು ಪ್ರತಿವಾದ ಮಂಡಿಸಿದ್ದರು.

ಇದನ್ನು ಒಪ್ಪದ ಉಪವಿಭಾಗಾಧಿಕಾರಿ, ‘ಗಿಫ್ಟ್‌ ಡೀಡ್‌ನಲ್ಲಿ ಕವಿತಾ ತನ್ನ ತಂದೆಯನ್ನು ನೋಡಿಕೊಳ್ಳಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ, ಅವರು ಈ ಷರತ್ತನ್ನು ಉಲ್ಲಂಘಿಸಿದ್ದಾರೆ‘ ಎಂಬ ತೀರ್ಮಾನದೊಂದಿಗೆ, 2021ರ ಫೆಬ್ರುವರಿ 24ರಂದು ಗಿಫ್ಟ್‌ ಡೀಡ್‌ ರದ್ದುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಕವಿತಾ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ ಈ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT