ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls 2024: ಮತ ‘ದಾಹ’ಕ್ಕೆ ನೀರಾವರಿ

Published 1 ಏಪ್ರಿಲ್ 2024, 0:00 IST
Last Updated 1 ಏಪ್ರಿಲ್ 2024, 0:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬೃಹತ್ ನೀರಾವರಿ ಯೋಜನೆಗಳಾದ ಮಹದಾಯಿ, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ 3ನೇ ಹಂತ, ಮೇಕೆದಾಟು ಅಣೆಕಟ್ಟೆ ನಿರ್ಮಾಣ ನನೆಗುದಿಯಲ್ಲಿವೆ.

ಈ ಯೋಜನೆಗಳ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ವಾಗ್ವಾದಕ್ಕೆ ಅಂತ್ಯವೇ ಇಲ್ಲ ಎನ್ನುವಂತಾಗಿದೆ. ಚುನಾವಣೆ ಸಂದರ್ಭಗಳಲ್ಲಿ ಈ ಯೋಜನೆಗಳು ಪಕ್ಷಗಳ ಕಾರ್ಯಸೂಚಿಯಾಗಿ ಸದ್ದು ಮಾಡುತ್ತವೆ. ಈ ಬಾರಿಯೂ ಮತ ದಾಹ ತೀರಿಸಿಕೊಳ್ಳುವ ‘ಅಸ್ತ್ರ’ವಾಗಿ ಬಳಕೆಯಾಗುವುದು ಖಚಿತ. ಆರೋಪ–ಪ್ರತ್ಯಾರೋಪಗಳ ರಾಜಕೀಯ ನಿಶ್ಚಿತ.

ಯೋಜನೆಗಳ ಅನುಷ್ಠಾನ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆಯೇ ಪಕ್ಕದ ಗೋವಾ, ತಮಿಳುನಾಡು ತಗಾದೆ ತೆಗೆಯುತ್ತವೆ. ಒಂದಷ್ಟು ದಿನ ಸದ್ದು– ಗದ್ದಲ. ಮತ್ತೆ ರೈತ ಸಮುದಾಯ ಸಂಘರ್ಷಕ್ಕೆ ನಿಲ್ಲುತ್ತದೆ. ಯೋಜನೆ ಶೀಘ್ರ ಅನುಷ್ಠಾನ ಆಗ್ರಹಿಸಿ ರೈತರ ಅಳು– ಅಹವಾಲು ಯಥಾಸ್ಥಿತಿ.

ಈ ಬಾರಿ ‘ಲೋಕ’ ಸಮರ ಗೆದ್ದರೆ ಮೇಕೆದಾಟು ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲವೆಂದು ತನ್ನ ಪ್ರಣಾಳಿಕೆಯಲ್ಲೇ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಭರವಸೆ ಕೊಟ್ಟಿದೆ. ಕಾಂಗ್ರೆಸ್‌ ನೇತೃತ್ವದ ವಿರೋಧಪಕ್ಷಗಳ ಕೂಟ ‘ಇಂಡಿಯಾ’ದ ಸದಸ್ಯನ ಈ ನಿಲುವು ರಾಜ್ಯ ಬಿಜೆಪಿಗೆ ಚುನಾವಣಾ ಪ್ರಚಾರಕ್ಕೊಂದು ವಿಚಾರವಾಗಿ ಸಿಕ್ಕಿದೆ. ಆದರೆ, ಜಲಸಂಪನ್ಮೂಲ ಖಾತೆ ವಹಿಸಿಕೊಂಡಿರುವುದೇ ಈ ಯೋಜನೆ ಅನುಷ್ಠಾನಕ್ಕೆ ಎನ್ನುವ ಮೂಲಕ ಆರಂಭದಲ್ಲಿಯೇ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬಿಜೆಪಿಯ ಬಾಯಿ ಮುಚ್ಚಿಸಿದ್ದಾರೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು, ‘ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆಯನ್ನು ಪ್ರಕಟಿಸುತ್ತೇವೆ. ಇದೇ ರೀತಿ ಬಿಜೆಪಿ, ಕಾಂಗ್ರೆಸ್ ಕೂಡಾ ಈ ಯೋಜನೆ ಬೆಂಬಲಿಸುವ ನಿರ್ಧಾರವನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ತಿರಸ್ಕಾರ, ಅವಗಣನೆ, ಅನುಮತಿ, ಅನುದಾನ ನೀಡುವ ವಿಚಾರದಲ್ಲಿ ವಿಳಂಬ ಈ ಯೋಜನೆಗಳ ವಿಳಂಬಕ್ಕೆ ಪ್ರಮುಖ ಕಾರಣ ಎಂಬ ಕಾಂಗ್ರೆಸ್ ಆಪಾದನೆಯಲ್ಲಿ ಸತ್ಯಾಂಶವೂ ಇದೆ. ಅದೇ ವೇಳೆ, ರಾಜ್ಯದ ಸಂಸದರ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನೂ ಕಡೆಗಣಿಸುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಸಂದರ್ಭ ಸಿಕ್ಕಾಗಲೆಲ್ಲ ಈ ಯೋಜನೆಗಳನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಕಾರುತ್ತಲೇ ಇದ್ದಾರೆ.

ರಾಷ್ಟ್ರೀಯ ಯೋಜನೆಯ ಮಾನ್ಯತೆಯೊಂದಿಗೆ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ಒದಗಿಸುವ ಭರವಸೆ ಕೇಂದ್ರದ ಬಜೆಟ್‌ ಪುಸ್ತಕಕ್ಕೆ ಸೀಮಿತವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡುವ ಭರವಸೆಯೂ ಹುಸಿಯಾಗಿದೆ. ಇನ್ನು ಹುಬ್ಬಳ್ಳಿ–ಧಾರವಾಡ, ಗದಗ, ನರಗುಂದ, ನವಲಗುಂದ ಸೇರಿದಂತೆ ಕಿತ್ತೂರು ಕರ್ನಾಟಕದ 13 ಪಟ್ಟಣ ಪ್ರದೇಶಗಳು ಮತ್ತು 100ಕ್ಕೂ ಹೆಚ್ಚು ಗ್ರಾಮಗಳ ಲಕ್ಷಾಂತರ ಕುಟುಂಬಗಳ ನೀರಿನ ಬವಣೆ ನೀಗಿಸಬಲ್ಲ ಮಹದಾಯಿ (ಕಳಸಾ–ಬಂಡೂರಿ ನಾಲಾ ತಿರುವು) ಯೋಜನೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ವಸ್ತುವಾಗುತ್ತದೆಯೇ ವಿನಃ ಜಾರಿಯಾಗುವ ಲಕ್ಷಣವೇ ಇಲ್ಲ. 

ಉತ್ತರ ಕರ್ನಾಟಕದ ಬಹುತೇಕ ಶುಷ್ಕ ಭಾಗಗಳಲ್ಲಿ ವಾಸಿಸುವ ಹಾಗೂ ಮಲಪ್ರಭಾ ನದಿಯನ್ನು ಅವಲಂಬಿಸಿರುವ ಸಾವಿರಾರು ರೈತರಿಗೆ ಈ ಯೋಜನೆಯು ಬಹಳ ಪ್ರಯೋಜನಕಾರಿಯಾಗಿದೆ. ಈ ಭಾಗ ಬಿಜೆಪಿಯ ಭದ್ರ ನೆಲೆ. 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ವಿರುದ್ಧ ಈ ಮಹದಾಯಿ ವಿಷಯವನ್ನೇ ದಾಳವಾಗಿ ಬಳಸಿಕೊಂಡು ಮತ ಫಸಲು ಪಡೆಯಲು ಕಾಂಗ್ರೆಸ್‌ ಮುಂದಾಗಿದೆ.

ಮೇಕೆದಾಟು ಯೋಜನೆಗಾಗಿ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಹಳೆ ಮೈಸೂರು ಭಾಗದಲ್ಲಿ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್‌, ಮತ ಕೊಯ್ಲು ಮಾಡಿದ್ದು ಸುಳ್ಳಲ್ಲ. ಈ ಪಾದ​ಯಾತ್ರೆ ಮೂಲಕ ಒಕ್ಕಲಿಗ ಪ್ರಾಬಲ್ಯದ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಹಾಸನ, ತುಮಕೂರು ಹಾಗೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ ಮತ್ತು ಡಿ.ಕೆ. ಶಿವಕುಮಾರ್‌ ವರ್ಚಸ್ಸು ವೃದ್ಧಿಯಾಗಿತ್ತು. ‘ಮೇಕೆದಾಟು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಕನಸಿನ ಕೂಸು. ಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ (1996ರಲ್ಲಿ) ಇದಕ್ಕೆ ನೀಲನಕ್ಷೆ ರೂಪಿಸಿದ್ದರು. ನಾನು ಸಿಎಂ ಆಗಿದ್ದಾಗ ಡಿಪಿಆರ್‌ ತಯಾರಿಸಲಾಗಿದ್ದು, ನಮ್ಮ ಶ್ರಮವನ್ನು ತಮ್ಮ ಕೊಡುಗೆ ಎಂದು ಕಾಂಗ್ರೆಸ್ ಬಿಂಬಿಸಿಕೊಂಡಿದೆ’ ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದರು. 

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ–3) ಮೂರನೇ ಹಂತಕ್ಕೆ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ - 2 ತೀರ್ಪು ನೀಡಿ 13 ವರ್ಷ ಕಳೆದರೂ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಬಯಲುಸೀಮೆಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸದೆ ಕೇಂದ್ರ ವಿಳಂಬ ಧೋರಣೆ ಅನುಸರಿಸುತ್ತಿದೆ. ಚುನಾವಣಾ ಪೂರ್ವದಲ್ಲಿ ಪ್ರಚಾರ ಪಡೆದ, ಚುನಾವಣೆ ಮುಗಿದ ಬಳಿಕ ಮರೆತುಹೋದ ನತದೃಷ್ಟ ಯೋಜನೆಗಳಲ್ಲಿ ಇದೂ ಒಂದು. ಇಂದಲ್ಲ ನಾಳೆ ತಮ್ಮ ಹೊಲಗದ್ದೆಗಳಿಗೆ ನೀರು ಹರಿದೀತೆಂದು ಯೋಜನೆಯ ಅಚ್ಚುಕಟ್ಟು ಪ್ರದೇಶದ ಜನ ಸಮುದಾಯ ಕನವರಿಸುತ್ತ ತಾವು ಕಾಣುತ್ತಿರುವ ಕನಸು ಮೊಮ್ಮಕ್ಕಳ ಕಾಲಕ್ಕಾದರೂ ನನಸಾದೀತೆಂಬ ಆಸೆಯನ್ನು ಇಟ್ಟುಕೊಂಡಿದ್ದಕ್ಕೆ ಕಾರಣ ‘ರಾಜಕಾರಣ’ ನೀಡುತ್ತ ಬಂದ ಭರವಸೆ. ಅದೇ ಭರವಸೆ ನೀಡಿ ಮತಸೆಳೆಯಲು ಬಿಜೆಪಿ ಸಿದ್ಧವಾಗಿದೆ. ಆದರೆ, ಜನ ನಂಬುವ ಸ್ಥಿತಿಯಲ್ಲಿ ಇಲ್ಲ. ಇದು ಕಾಂಗ್ರೆಸ್‌ ಪಾಲಿಗೆ ನೆರವಾಗಬಹುದು. ನೀರಾವರಿ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಕಾಂಗ್ರೆಸ್‌ ಸಾರಿರುವ ಸಮರ, ಆ ಪಕ್ಷಕ್ಕೆ ಒಂದಷ್ಟು ಮತಗಳನ್ನು ಹೆಚ್ಚುವರಿಯಾಗಿ ತಂದುಕೊಡುವುದರಲ್ಲಿ ಅನುಮಾನ ಇಲ್ಲ.

ಮೇಕೆದಾಟು

* 5252.40 ಹೆಕ್ಟೇರ್ ಪ್ರದೇಶದಲ್ಲಿ ಜಲಾಶಯ ನಿರ್ಮಿಸಲು ಉದ್ದೇಶ

* 67.2 ಟಿಎಂಸಿ ಅಡಿ ನೀರು ಸಂಗ್ರಹಿಸುವ ಯೋಜನೆ

* ಬೆಂಗಳೂರು ಸೇರಿದಂತೆ ಹಳೆ ಮೈಸೂರಿನ ಮೂರು ಜಿಲ್ಲೆಗಳಿಗೆ ಲಾಭ

* 4.75 ಟಿಎಂಸಿ ಅಡಿ ಹೆಚ್ಚುವರಿ ನೀರು ಬೆಂಗಳೂರಿನ ಕುಡಿಯುವ ಅಗತ್ಯಕ್ಕೆ ಬಳಕೆ

* 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಗುರಿ

* ಅಂದಾಜು ₹9 ಸಾವಿರ ಕೋಟಿ ವೆಚ್ಚ

* ಕೇಂದ್ರ ಪರಿಸರ ಇಲಾಖೆಯಿಂದ ಅನುಮೋದನೆ ಸಿಕ್ಕಿಲ್ಲ

* ಯೋಜನೆ ಜಾರಿಗೆ ತಮಿಳುನಾಡು ತಗಾದೆ

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ

* ಮೂರನೇ ಹಂತದಲ್ಲಿ ಕರ್ನಾಟಕ ರಾಜ್ಯಕ್ಕೆ 130 ಟಿಎಂಸಿ ಅಡಿ ನೀರು ಹಂಚಿಕೆ

* ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿರುವ 519.60 ಅಡಿಯಿಂದ 524.256 ಅಡಿಗೆ ಏರಿಸುವ ಯೋಜನೆ.

* ಮೂರನೇ ಹಂತದ ಅನುಷ್ಠಾನದಿಂದ ಬರಪೀಡಿತ ಉತ್ತರ ಕರ್ನಾಟಕದ 5.94 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.

* ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ - 2 ನೇ ಟ್ರಿಬ್ಯುನಲ್ ಬ್ರಿಜೇಶ್ ಕುಮಾರ್ ವರದಿ ಕೊಟ್ಟು 13 ವರ್ಷ ಕಳೆದಿದೆ

* ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ ಭದ್ರಾ ಮೇಲ್ದಂಡೆ ಯೋಜನೆ

* ಮಧ್ಯ ಕರ್ನಾಟಕದ ಪ್ರಮುಖ ಏತ ನೀರಾವರಿ ಯೋಜನೆ

* 29.90 ಟಿಎಂಸಿ ಅಡಿ ನೀರು ಬಳಕೆ

* ಸೂಕ್ಷ್ಮ ನೀರಾವರಿ ಯೋಜನೆ ಮೂಲಕ 225515 ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ

* ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಸಕ್ಷಮ ಪ್ರಾಧಿಕಾರಗಳ ಅನುಮತಿ ಸಿಕ್ಕರೂ ಕೇಂದ್ರ ಸರ್ಕಾರದಿಂದ ವಿಳಂಬ

* 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ₹5300 ಕೋಟಿ ಘೋಷಣೆ

* ಕೇಂದ್ರದಿಂದ ಬಜೆಟ್ ಘೋಷಣೆಯ ಹಣ ಬಿಡುಗಡೆ ಆಗಿಲ್ಲ

ಮಹದಾಯಿ (ಕಳಸಾ– ಬಂಡೂರಿ ನಾಲಾ) ಯೋಜನೆ

* ಹುಬ್ಬಳ್ಳಿ–ಧಾರವಾಡ ಗದಗ ನರಗುಂದ ನವಲಗುಂದ ಸೇರಿದಂತೆ ಕಿತ್ತೂರು ಕರ್ನಾಟಕದ 13 ಪಟ್ಟಣ ಪ್ರದೇಶಗಳು ಮತ್ತು 100ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ

* ಯೋಜನೆಗೆ 2002ರಲ್ಲಿಯೇ ಒಪ್ಪಿಗೆ

* ಮಹದಾಯಿ ಜಲಾನಯನ ಪ್ರದೇಶ (ಗೋವಾ ಕರ್ನಾಟಕ ಮಹಾರಾಷ್ಟ್ರದಲ್ಲಿ) ಒಟ್ಟು 2032 ಚ. ಮೀಟರ್ * ಕರ್ನಾಟಕದಲ್ಲಿರುವ ಜಲಾನಯನ ಪ್ರದೇಶ 375 ಚ. ಮೀಟರ್ 

* ಮಹದಾಯಿ ಜಲ ವಿವಾದಗಳ ನ್ಯಾಯಮಂಡಳಿ ಕಳಸಾ– ಬಂಡೂರಿ ನಾಲಾ ಯೋಜನೆಗೆ 2018ರ ಆಗಸ್ಟ್‌ 14ರಂದು 3.90 ಟಿಎಂಸಿ ಅಡಿ ನೀರು ಹಂಚಿಕೆ

* ಕಳಸಾ ನಾಲಾ ತಿರುವು ಯೋಜನೆಗೆ 1.72 ಬಂಡೂರಿ ನಾಲಾ ತಿರುವು ಯೋಜನೆಗೆ 2.18 ಟಿಎಂಸಿ ಅಡಿ ನೀರು ಮಹದಾಯಿ ಜಲ ವಿದ್ಯುತ್‌ ಯೋಜನೆಗೆ 8.02 ಟಿಎಂಸಿ ಅಡಿ ನೀರಾವರಿ ಕುಡಿಯುವ ಉದ್ದೇಶಕ್ಕೆ1.50 ಟಿಎಂಸಿ ಅಡಿ

* ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದಿಂದ 2022ರ ಡಿ. 29ರಂದು ಅನುಮೋದನೆ

* ಈ ಯೋಜನೆಗೆ ಅರಣ್ಯ ಮತ್ತು ಪರಿಸರ ಕಾಯ್ದೆಯಡಿ ಕೇಂದ್ರದಿಂದ ಅನುಮತಿ ಸಿಗಬೇಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT