ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಮತ್ತೆ ಕೊಳೆ ರೋಗದ ಭೀತಿ

ನಿರಂತರ ಮಳೆ: ಅಡಿಕೆ ಬೆಳೆಗಾರರ ಆತಂಕ, ಔಷಧಿ ಸಿಂಪಡಿಸಲೂ ದೊರೆಯದ ಅವಕಾಶ
Last Updated 19 ಜುಲೈ 2022, 17:54 IST
ಅಕ್ಷರ ಗಾತ್ರ

ಶಿವಮೊಗ್ಗ: ವರುಣನ ಆರ್ಭಟಕ್ಕೆ ಮಲೆನಾಡು ಅಕ್ಷರಶಃ ನಲುಗಿದ್ದು, ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗದ ಬಾಧೆ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್‌ನಲ್ಲಿ ಮಳೆ ಕೊರತೆ ಎದುರಾಗಿತ್ತು. ಆದರೆ ಜುಲೈ ತಿಂಗಳಲ್ಲಿ ವಿಪರೀತ ಮಳೆಯಾಗಿದೆ. ಎಡೆಬಿಡದೆ ಸುರಿದ ಆರಿದ್ರಾ, ಪುಷ್ಯ ಮಳೆಗಳಿಂದಾಗಿ ತೋಟ, ಗದ್ದೆಗಳಲ್ಲಿ ನೀರು ನಿಂತಿದೆ. ಪರಿಣಾಮ ತೇವಾಂಶ ಹೆಚ್ಚಾಗಿದ್ದು, ಕೊಳೆರೋಗಕ್ಕೆ ಹಾದಿಯಾಗಿದೆ.

ಅಡಿಕೆಗೆ ತಗಲುವ ಕೊಳೆ ರೋಗದ ಮೂಲ ಪೈಥೋಪೆರಾ ಮೆಡಿಯ (phytophthora meadii) ಹೆಸರಿನ ಶಿಲೀಂಧ್ರ. ಈ ರೋಗ ತಗುಲಿದ ಗಿಡಗಳಲ್ಲಿ ತೊಟ್ಟು ಕೊಳೆತು ಅಡಿಕೆಕಾಯಿಗಳು ಉದುರುತ್ತವೆ. ರೋಗ ತೀವ್ರವಾದರೆ ತೊಂಡೆ, ಸುಳಿ ಕೊಳೆತು ಗಿಡಗಳೇ ನಾಶವಾಗುತ್ತವೆ. ಜೊತೆಗೆ ಮಳೆಗಾಲದಲ್ಲಿ ಮರಗಳಿಗೆ ಸರಿಯಾಗಿ ಪೋಷಕಾಂಶ ನಿರ್ವಹಣೆ ಮಾಡದಿದ್ದರೆ ರೋಗನಿರೋಧಕ ಶಕ್ತಿ ಕಡಿಮೆ ಆಗಿ ಎಲೆಚುಕ್ಕೆಶಿಲೀಂಧ್ರ ರೋಗ ಕಾಡುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ವರ್ಷ ಮೊದಲು ಆಗುಂಬೆ ಭಾಗದಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತದೆ. ತೀರ್ಥಹಳ್ಳಿ, ಸಾಗರ, ಹೊಸನಗರ ತಾಲ್ಲೂಕುಗಳಲ್ಲಿ ಹೆಚ್ಚು ಬಾಧಿಸುತ್ತದೆ. ಈ ಬಾರಿಯೂ ರೋಗ ಲಕ್ಷಣಗಳು ಕಾಣಿಸಿಕೊಂಡು ರೈತರನ್ನು ಚಿಂತೆಗೆ ನೂಕಿವೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲ್ಲೂಕಿನ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈಗಾಗಲೇ ಅಡಿಕೆ ಮಿಳ್ಳೆಗಳು ಉದುರಲು ಆರಂಭಿಸಿವೆ. ಕರಾವಳಿ ಭಾಗದ ಕುಮಟಾ, ಹೊನ್ನಾವರದಲ್ಲೂ ರೋಗದ ಭೀತಿ ಎದುರಾಗಿದೆ. ಇಲ್ಲಿ ಕಳೆದ ವರ್ಷವೂ ಕೊಳೆರೋಗದಿಂದ ನೂರಾರು ಕ್ವಿಂಟಲ್ ಅಡಿಕೆ ಬೆಳೆ ಹಾನಿಗೊಳಗಾಗಿತ್ತು.

‘ನಿರಂತರ ಮಳೆ ಸುರಿದ ಕಾರಣ ಬಹುತೇಕ ರೈತರಿಗೆ ಇದುವರೆಗೂ ಬೋರ್ಡೊ ದ್ರಾವಣ ಸಿಂಪಡಿಸಲು ಅವಕಾಶ ದೊರೆತಿಲ್ಲ. ಅಲ್ಲದೆ, ಮಳೆಯ ಜತೆಗೆ ಶೀತಗಾಳಿಯೂ ಬೀಸುತ್ತಿರುವ ಕಾರಣ ಕೊಳೆರೋಗ ವ್ಯಾಪಿಸುವ ಸಾಧ್ಯತೆ ಹೆಚ್ಚಿದೆ’ ಎಂದು ಶಿರಸಿಯ ತೋಟಗಾರಿಕೆ ಉಪನಿರ್ದೇಶಕ ಬಿ.ಪಿ.ಸತೀಶ್ ಹೇಳುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ತರೀಕೆರೆ, ಕಳಸ ಭಾಗದ ತೋಟಗಳಲ್ಲೂ ಈ ರೋಗ ಕಾಣಿಸಿಕೊಂಡಿದೆ.

‘ಜಿಲ್ಲೆಯಲ್ಲಿ ಸುಮಾರು 70,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಪೈಕಿ 15ರಿಂದ 20,000 ಹೆಕ್ಟೇರ್ ಪ್ರದೇಶದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಬೆಳೆ ವಿಮೆ ಮಾಡಿಸಿದ್ದ ಬೆಳೆಗಾರರಿಗೆ ವಿಮೆ ಮೊತ್ತ ಪಾವತಿಯಾಗುತ್ತದೆ’ ಎಂದು ಚಿಕ್ಕಮಗಳೂರಿನ ತೋಟಗಾರಿಕೆ ಉಪನಿರ್ದೇಶಕ ವೇದಮೂರ್ತಿ ತಿಳಿಸಿದರು.

‘ಕೊಳೆರೋಗದಿಂದಾಗಿ ಅಡಿಕೆ ಮರಗಳ ಗೊನೆಗಳಲ್ಲಿ ತೊಟ್ಟುಗಳು ಕೊಳೆತಿವೆ. ಗಾಳಿಗೆ ಕಾಯಿಗಳು ಉದುರುತ್ತವೆ. ಬೋರ್ಡೊ ದ್ರಾವಣ ಸಿಂಪಡಿಸಿದ್ದೇವೆ. ರೋಗದಿಂದಾಗಿ ಫಸಲು ಮುಕ್ಕಾಲು ಭಾಗ ನೆಲಕಚ್ಚಿದೆ. ಮರಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ’ ಎಂದು ಚಿಕ್ಕಮಗಳೂರು ಜಿಲ್ಲೆಯ ಹೇರೂರಿನ ಬೆಳೆಗಾರ ಡಾ.ಕೃಷ್ಣಾನಂದ ಸಂಕಷ್ಟ ತೋಡಿಕೊಂಡರು.

(ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ್, ಗಣಪತಿ ಹೆಗಡೆ)

ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ವಾಡಿಕೆಗಿಂತ ಅಧಿಕ ಮಳೆ

ಜುಲೈ 1ರಿಂದ 18ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆಯಂತೆ 45.40 ಸೆಂ.ಮೀ ಮಳೆ ಆಗಬೇಕಿತ್ತು. ಆದರೆ, 84.80 ಸೆಂ.ಮೀ ಮಳೆ ಬಿದ್ದಿದೆ. ವಾಡಿಕೆಗಿಂತ ಶೇ 87ರಷ್ಟು ಹೆಚ್ಚು ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನವರಿಯಿಂದ ಜುಲೈ 17ರವರೆಗೆ ವಾಡಿಕೆಯ ಮಳೆ ಪ್ರಮಾಣ 79.9 ಸೆಂ.ಮೀ ಆಗಿದೆ. ಈ ಬಾರಿ 123.8 ಸೆಂ.ಮೀ (ಶೇ 155) ಮಳೆಯಾಗಿದೆ. ಕಳೆದ ಒಂದು ವಾರದಲ್ಲಿ 31.9 ಸೆಂ.ಮೀ ಸುರಿದಿದೆ.

ಸರ್ಕಾರ ನೆರವಿಗೆ ಬರಲಿ: ರಮೇಶ ಹೆಗಡೆ

‘ಕೊಳೆ ರೋಗದಿಂದ ನಷ್ಟಕ್ಕೀಡಾದವರಿಗೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ₹ 32 ಕೋಟಿ ಪರಿಹಾರ ಕೊಟ್ಟದ್ದು ಬಿಟ್ಟರೆ ಯಾರೂ ನಮ್ಮ ನೆರವಿಗೆ ಬಂದಿಲ್ಲ’ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹೇಳುತ್ತಾರೆ. ‘ತೋಟಗಾರಿಕೆ ಇಲಾಖೆ, ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳು ಕೊಳೆರೋಗ ನಿಯಂತ್ರಣಕ್ಕೆ ಒತ್ತು ನೀಡುತ್ತಿವೆ. ಸರ್ಕಾರದ ಅನುದಾನವೂ ಅದಕ್ಕೆ ಖರ್ಚು ಆಗುತ್ತಿದೆ. ರೋಗ ಬಾರದಂತೆ ತಡೆಯಲು ಯಾವುದೇ ಸಂಶೋಧನೆ ಆಗುತ್ತಿಲ್ಲ. ಇಲ್ಲಿವರೆಗೆ ಬೋರ್ಡೊ ದ್ರಾವಣ ಆವಿಷ್ಕಾರ ಬಿಟ್ಟರೆ ಬೇರೆ ಏನೂ ಆಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಕೊಳೆರೋಗಕ್ಕೀಡಾದ ಮರ ನಂತರದ ಮೂರು ವರ್ಷ ಫಸಲು ಕೊಡುವುದಿಲ್ಲ. ಕೆಲವೊಮ್ಮೆ ಬೇರೆ ಗಿಡಗಳನ್ನು ಬೆಳೆಸಬೇಕಾಗುತ್ತದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ. ಈ ಮೊದಲು ಔಷಧೋಪಚಾರಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಸಹಾಯಧನ ಕೊಡಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ. ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕಿದೆ’ ಎಂದು ಆಗ್ರಹಿಸುತ್ತಾರೆ.

‘ರೋಗ ತೀವ್ರಗೊಂಡರೆ ಶೇ 60ರಷ್ಟು ಹಾನಿ’

‘ಕೊಳೆರೋಗದಿಂದ ಬಾಧಿತವಾದ ತೋಟದಲ್ಲಿ ಪ್ರತಿ ಎಕರೆಗೆ ಸಾಮಾನ್ಯವಾಗಿ ಶೇ 20ರಷ್ಟು ಇಳುವರಿ ಕಡಿಮೆ ಆಗುತ್ತದೆ. ರೋಗ ತೀವ್ರವಾಗಿ ಬಾಧಿತವಾದಲ್ಲಿ ಶೇ 40ರಿಂದ 60ರಷ್ಟು ಫಸಲು ಕಡಿಮೆ ಆಗುತ್ತದೆ. ಕೆಲವೊಮ್ಮೆ ಇಡೀ ತೋಟ ನಾಶವಾಗುತ್ತದೆ’ ಎಂದು ತೀರ್ಥಹಳ್ಳಿಯ ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ರವಿಕುಮಾರ್ ಹೇಳುತ್ತಾರೆ.

ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೊ ದ್ರಾವಣ ಸಿಂಪರಣೆ ರಾಮಬಾಣ. ಪ್ರತಿ ಬ್ಯಾರಲ್‌ಗೆ ಶೇ 1ರಷ್ಟು ದ್ರಾವಣ ಸಿಂಪಡಿಸಬೇಕು. ಮಳೆಗಾಲದ ಆರಂಭಕ್ಕೆ ಮುನ್ನ ಒಮ್ಮೆ ಸಿಂಪರಿಸಿದರೆ ಪರಿಣಾಮಕಾರಿ. ಕೆಲವು ರೈತರು 40 ಇಂಚಿನಷ್ಟು ಮಳೆ ಬಿದ್ದ ನಂತರ ಬೋರ್ಡೊ ದ್ರಾವಣ ಸಿಂಪಡಿಸಲು ಮುಂದಾಗುತ್ತಾರೆ. ಅದು ಸರಿಯಲ್ಲ. ತಿಂಗಳಿಗೆ ಮೂರು ಬಾರಿ ಕೆಲವೊಮ್ಮೆ ನಾಲ್ಕು ಬಾರಿ ಸಿಂಪಡಿಸಿದರೂ ತಪ್ಪಿಲ್ಲ ಎನ್ನುತ್ತಾರೆ.

ಮರದ ತಲೆಭಾಗ ತೋಯುವಂತೆ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು. ಇದರಿಂದ ಎಲೆಚುಕ್ಕಿ ಬಾಧೆ, ಶಿರಕೊಳೆ, ಸುಳಿ ಕೊಳೆಯುವುದನ್ನು ತಪ್ಪಿಸಬಹುದು ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT