ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ ಜಲ ಆಯೋಗಕ್ಕೆ ಡಿಪಿಆರ್ ವಾಪಸ್‌: ಮೇಕೆದಾಟು ಯೋಜನೆಗೆ ಮತ್ತೆ ಕಗ್ಗಂಟು

Published : 1 ಫೆಬ್ರುವರಿ 2024, 23:30 IST
Last Updated : 1 ಫೆಬ್ರುವರಿ 2024, 23:30 IST
ಫಾಲೋ ಮಾಡಿ
Comments

ನವದೆಹಲಿ: ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಕೇಂದ್ರ ಜಲ ಆಯೋಗಕ್ಕೆ ಹಿಂತಿರುಗಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ಧರಿಸಿದೆ. ಇದರಿಂದಾಗಿ, ಮೇಕೆದಾಟು ಯೋಜನೆಗೆ ಮತ್ತೆ ಕಗ್ಗಂಟು ಎದುರಾಗಿದೆ. 

ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಕರ್ನಾಟಕ ಸರ್ಕಾರ 2019ರ ಜನವರಿಯಲ್ಲಿ ಸಲ್ಲಿಸಿತ್ತು. ಡಿಪಿಆರ್‌ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೇ ಅನುಮೋದನೆ ನೀಡಬೇಕು ಎಂದು ಜಲ ಆಯೋಗ ಷರತ್ತು ವಿಧಿಸಿತ್ತು. ‘ಡಿಪಿಆರ್‌ ಕುರಿತು ಪ್ರಾಧಿಕಾರ ಚರ್ಚೆ ನಡೆಸಬಹುದು. ಆದರೆ, ಈ ಪ್ರಸ್ತಾವನೆ ಆಧಾರದಲ್ಲಿ ಅಧಿಕೃತವಾಗಿ ಯಾವುದೇ ಅಭಿಪ್ರಾಯಕ್ಕೆ ಬರುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ 2022ರ ಜುಲೈನಲ್ಲಿ ನಿರ್ದೇಶನ ನೀಡಿತ್ತು. ಹೀಗಾಗಿ, ಪ್ರಾಧಿಕಾರವು ಇದರ ಬಗ್ಗೆ ಚರ್ಚೆಯನ್ನೇ ನಡೆಸಿರಲಿಲ್ಲ. ಯೋಜನಾ ವರದಿಗೆ ಪ್ರಾಧಿಕಾರ ಒಪ್ಪಿಗೆ ನೀಡಬೇಕು ಎಂದು ಕರ್ನಾಟಕ ಸರ್ಕಾರ ಒತ್ತಡ ಹೇರಿತ್ತು. 

ಗುರುವಾರ ಇಲ್ಲಿ ನಡೆದ ಪ್ರಾಧಿಕಾರದ 28ನೇ ಸಭೆಯಲ್ಲಿ ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌, ‘ಈ ಯೋಜನೆ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಬೇಕು ಹಾಗೂ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ತಮಿಳುನಾಡು ಹಾಗೂ ಪುದುಚೆರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. 

‘ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ ಯಾವುದೇ ನಿರ್ಬಂಧ ಹೇರಿಲ್ಲ. ಕಾವೇರಿ ನ್ಯಾಯಾಧೀಕರಣ ತೀರ್ಪಿನಲ್ಲೂ ಈ ಬಗ್ಗೆ ಉಲ್ಲೇಖ ಇಲ್ಲ. ಹಾಗಾಗಿ, ಸಂಕಷ್ಟದ ವರ್ಷದಲ್ಲಿ ಈ ವಿವಾದವನ್ನು ಶಾಶ್ವತವಾಗಿ ಬಗೆಹರಿಸಲು ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು. ಡಿಪಿಆರ್ ಬಗ್ಗೆ ಪ್ರಾಧಿಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಈ ಯೋಜನೆಯು ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ ಎಂದು ಜಲ ಆಯೋಗಕ್ಕೆ ಅಭಿಪ್ರಾಯ ಸಲ್ಲಿಸಬೇಕು’ ಎಂದು ರಾಕೇಶ್ ಸಿಂಗ್‌ ಮನವಿ ಮಾಡಿದರು. 

ಪ್ರಾಧಿಕಾರದ ಅಧ್ಯಕ್ಷ ಎಸ್‌.ಕೆ.ಹಲ್ದಾರ್‌ ಹಾಗೂ ಸದಸ್ಯರು ಪ್ರತಿಕ್ರಿಯಿಸಿ, ‘ಮೇಕೆದಾಟು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಆದರೆ, ಯೋಜನೆ ಕುರಿತು ಚರ್ಚಿಸಲು ಯಾವುದೇ ನಿರ್ಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು. 

ಯೋಜನಾ ವರದಿಯ ತಾಂತ್ರಿಕ ಪರಿಶೀಲನೆಗೆ ಪ್ರಾಧಿಕಾರ ಸಮರ್ಥವಾಗಿಲ್ಲ. ಕೇಂದ್ರ ಜಲ ಆಯೋಗ ಸಕ್ಷಮ ಪ್ರಾಧಿಕಾರ. ಹಾಗಾಗಿ, ಹೆಚ್ಚಿನ ಪರಾಮರ್ಶೆಗಾಗಿ ಮೇಕೆದಾಟು ಯೋಜನೆಯ ಪ್ರಸ್ತಾವನೆಯನ್ನು ಆಯೋಗಕ್ಕೆ ಹಿಂತಿರುಗಿಸಬಹುದು ಎಂದು ಬಹುತೇಕ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಒಳಹರಿವು ಸಂಪೂರ್ಣವಾಗಿ ನಿಂತಿದೆ. ಹಾಗಾಗಿ, ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿತು. ಎರಡೂ ರಾಜ್ಯಗಳ ಜಲಾಶಯಗಳ ಲೈವ್‌ ಸ್ಟೋರೇಜ್‌ ಅನ್ನು ಪ್ರಾಧಿಕಾರ ಪರಿಗಣಿಸಿತು. ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಯಾವುದೇ ನಿರ್ದೇಶನವನ್ನು ಪ್ರಾಧಿಕಾರ ನೀಡಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT