ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಕೆಶಿ ಸಿಎಂ, ಡಜನ್‌ ಡಿಸಿಎಂ ಮಾಡಲಿ: ಬಸವರಾಜ್ ಶಿವಗಂಗಾ

ಕೆಪಿಸಿಸಿ ಅಧ್ಯಕ್ಷರನ್ನು ಸಿಎಂ ಮಾಡುವುದು ಪದ್ಧತಿ– ಶಾಸಕ ಬಸವರಾಜ್ ಶಿವಗಂಗಾ
Published 26 ಜೂನ್ 2024, 15:24 IST
Last Updated 26 ಜೂನ್ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ‘ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಿ, ನಂತರ ಒಂದು ಡಜನ್ ಉಪ ಮುಖ್ಯಮಂತ್ರಿ ಮಾಡಲಿ’ ಎಂದು ಚನ್ನಗಿರಿ ಕಾಂಗ್ರೆಸ್‌ ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಸದಾಶಿವನಗರದಲ್ಲಿರುವ ಮನೆಯಲ್ಲಿ ಬುಧವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡುವುದು ಪದ್ಧತಿ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮುನ್ನಡೆ ಸಿಕ್ಕಿಲ್ಲ ಎಂದಮೇಲೆ ಮತ್ತೆ ಪಕ್ಷ ಸಂಘಟನೆ ಮಾಡಬೇಕು. ಐದು ವರ್ಷದ ನಂತರ ಅಧಿಕಾರಕ್ಕೆ ಬರಬೇಕಾದರೆ ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದರು.

‘ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸುವ ಅಗತ್ಯ ಇದೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಹಿರಿಯ ಸಚಿವರು ಮಾತನಾಡಿದ್ದಾರೆ. ಹೆಚ್ಚುವರಿ ಉಪ ಮುಖ್ಯಮಂತ್ರಿ ವಿಚಾರದ ಕುರಿತು ಹೈಕಮಾಂಡ್‌ ತೀರ್ಮಾನ ಮಾಡಬೇಕು. ಅದರ ಮೇಲೂ ಆಗಲೇ ಬೇಕೆಂಬ ಆಸೆ ಇದ್ದರೆ ಮಾಡಲಿ. ನಮ್ಮ ವಿರೋಧ ಇಲ್ಲ. ನಮ್ಮ ಡಿಕೆ ಸಾಹೇಬ್ರರನ್ನು ಮುಖ್ಯಮಂತ್ರಿ ಮಾಡಲಿ. ನಂತರ ಒಂದು ಡಜನ್‌ ಡಿಸಿಎಂ ಮಾಡಲಿ’ ಎಂದರು.

‘ಮುಖ್ಯಮಂತ್ರಿ ಹುದ್ದೆ ಖಾಲಿ ಇದೆಯೇ’ ಎಂಬ ಪ್ರಶ್ನೆಗೆ, ‘ಉಪ ಮುಖ್ಯಮಂತ್ರಿ ಹುದ್ದೆಯೂ ಖಾಲಿ ಇಲ್ಲವಲ್ಲ’ ಎಂದರು. 

‘ಸಿದ್ದರಾಮಯ್ಯ ಅವರು ಹಿಂದೆ ಐದು ವರ್ಷ ಮುಖ್ಯಮಂತ್ರಿ ಆಗಿದ್ದರು. ಮತ್ತೆ ಮುಖ್ಯಮಂತ್ರಿಯಾಗಿ ಇದ್ದಾರೆ. ಕಳೆದ ಅವಧಿಯಲ್ಲಿ ಲೋಕಸಭೆಯಲ್ಲಿ ರಾಜ್ಯದಿಂದ ಕಾಂಗ್ರೆಸ್‌ನ ಒಬ್ಬರು ಸದಸ್ಯರಿದ್ದರು. ಈ ಬಾರಿ ಒಂಬತ್ತು ಸ್ಥಾನಗಳನ್ನು ಗೆದ್ದಿದ್ದೇವೆ. ಡಿ.ಕೆ. ಶಿವಕುಮಾರ್‌ ಅವರು ಪಕ್ಷ ಸಂಘಟಿಸಿದ್ದರಿಂದ ಇದು ಸಾಧ್ಯವಾಗಿದೆ. ಹೀಗಾಗಿ, ಅವರನ್ನು ಮುಖ್ಯಮಂತ್ರಿ ಮಾಡಿದರೆ ಅನುಕೂಲವಾಗುತ್ತದೆ’ ಎಂದೂ ಪ್ರತಿಪಾದಿಸಿದರು.

ಕೆ.ಎನ್‌. ರಾಜಣ್ಣ
ಕೆ.ಎನ್‌. ರಾಜಣ್ಣ

ಕೆಪಿಸಿಸಿ ಅಧ್ಯಕ್ಷ ಬದಲಾವಣೆ: ರಾಜಣ್ಣ

ಪರೋಕ್ಷ ಆಗ್ರಹ ಬೆಂಗಳೂರು: ‘ಲೋಕಸಭೆ ಚುನಾವಣೆ ಮುಗಿಯುವವರೆಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಿರುತ್ತಾರೆ ಎಂದು ಹೈಕಮಾಂಡ್ ಹೇಳಿತ್ತು. ಅದನ್ನು ಈಗ ನೆನಪು ಮಾಡಿಕೊಡಲು ಒತ್ತಾಯಿಸುತ್ತೇನೆ’ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು. ಆ ಮೂಲಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಲಿಂಗಾಯತ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲ ಸಮುದಾಯದವರೂ ಕೆಪಿಸಿಸಿ ಅಧ್ಯಕ್ಷರಾಗಲು ಅರ್ಹರಿದ್ದಾರೆ’ ಎಂದರು. ‘ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಹೈಕಮಾಂಡ್ ಏನು ಹೇಳಿತ್ತು? ಸಿದ್ದರಾಮಯ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿ. ಕೆಪಿಸಿಸಿ ಅಧ್ಯಕ್ಷರು ಲೋಕಸಭೆ ಚುನಾವಣೆ ಮುಗಿಯುವರೆಗೆ ಮುಂದುವರಿಯಲಿದ್ದಾರೆ ಎಂದೂ ಹೈಕಮಾಂಡ್ ಹೇಳಿತ್ತು’ ಎಂದರು. ‘ಹೆಚ್ಚುವರಿ ಉಪಮುಖ್ಯಮಂತ್ರಿ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ಈಗಾಗಲೇ ಹೇಳಿದ್ದೇನೆ. ಶಾಸಕರಾದ ಎಚ್‌.ಸಿ. ಬಾಲಕೃಷ್ಣ ಬಸವರಾಜ್ ಶಿವಗಂಗಾ ಅವರೂ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದು ರಾಜಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT