ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಫ್‌ಡಿ ಪರೀಕ್ಷೆ ವಿಳಂಬ ಸಲ್ಲದು: ದಿನೇಶ್‌ ಗುಂಡೂರಾವ್‌

ಮಲೆನಾಡು ಭಾಗದ ಶಾಸಕರೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ
Published 19 ಫೆಬ್ರುವರಿ 2024, 23:30 IST
Last Updated 19 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮಂಗನ ಕಾಯಿಲೆ (ಕೆಎಫ್‌ಡಿ) ರೋಗ ಲಕ್ಷಣ ಕಂಡು ಬಂದ ತಕ್ಷಣ ಪರೀಕ್ಷೆ ನಡೆಸಬೇಕು. ಕೆಎಫ್‌ಡಿ ಪಾಸಿಟಿವ್‌ ಇರುವವರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದರು.

ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಮಲೆನಾಡು ಭಾಗದ ಶಾಸಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ತ್ವರಿತ ಚಿಕಿತ್ಸೆಗಾಗಿ ಆಂಬುಲೆನ್ಸ್‌ ಹೆಚ್ಚಿಸಲಾಗಿದೆ. ಕೆಎಫ್‌ಡಿ ಪತ್ತೆ ಹಚ್ಚಲು ಶಿರಸಿ ಹಾಗೂ ಸಾಗರದಲ್ಲಿ ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮಾಡುವ ಯೋಜನೆ ಇದೆ. ಕೆಎಫ್‌ಡಿಗೆ ಲಸಿಕೆ ಕಂಡು ಹಿಡಿಯಲು ಐಸಿಎಂಆರ್‌ ಜೊತೆಗೆ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದರು.

ರಾಜ್ಯದ ಸದ್ಯ 103 ಮಂಗನ ಕಾಯಿಲೆ ಪ್ರಕರಣಗಳು ಸಕ್ರಿಯವಾಗಿದ್ದು ಪಾಸಿಟಿವ್‌ ಪ್ರಕರಣಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 1 ಸಾವು ಸಂಭವಿಸಿದ್ದು, ಮರಣ ಪ್ರಮಾಣ ತಗ್ಗಿಸಲು ಆಯಾ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಹೆಚ್ಚಿನ ಹೊಣೆ ನೀಡಲಾಗಿದೆ. ಕೆಎಫ್‌ಡಿ ಪರೀಕ್ಷೆ, ಪಾಸಿಟಿವ್‌, ಮರಣ, ಗುಣಮುಖ ಕುರಿತಾಗಿ ದೈನಂದಿನ ಬುಲೆಟಿನ್‌ ಹೊರಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿಡಿಎಲ್‌ ಶಿವಮೊಗ್ಗ ಮತ್ತು ಎಂಐವಿ ಮಣಿಪಾಲ ಪ್ರಯೋಗಾಲಯಗಳನ್ನು ಕೆಎಫ್‌ಡಿ ಪರೀಕ್ಷೆಗೆ ಗುರುತಿಸಲಾಗಿದ್ದು, ಶೀಘ್ರವಾಗಿ ಮಾದರಿಗಳನ್ನು ಸಂಸ್ಕರಿಸಿ ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿದೆ. ಒಂದು ತಿಂಗಳಿನಿಂದ ಮಂಗನ ಕಾಯಿಲೆಗೆ ಲಸಿಕೆ ನೀಡಲಾಗುತ್ತಿದೆ. ಮುಂದಿನ ಎರಡು ತಿಂಗಳಿಗಾಗುವಷ್ಟು ಲಸಿಕೆ ಲಭ್ಯವಿದೆ ಎಂದು ವಿವರ ನೀಡಿದರು.

ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಚಿವರಾದ ಮಧು ಬಂಗಾರಪ್ಪ, ಮಂಕಾಳ ಎಸ್‌. ವೈದ್ಯ, ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಟಿ.ಡಿ. ರಾಜೇಗೌಡ, ಎಚ್‌.ಡಿ. ತಮ್ಮಯ್ಯ, ಎಸ್. ರುದ್ರೇಗೌಡ, ಭೀಮಣ್ಣ ನಾಯ್ಕ, ನಯನ ಮೋಟಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT