ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ ಭಾರಿ ಮಳೆ: ತಪ್ಪದ ಪಡಿಪಾಟಲು, ಸಿಡಿಲು ಬಡಿದು ಮೂವರು ಸಾವು

ಗೋಡೆ ಕುಸಿದು ಒಬ್ಬರು ಸಾವು * ಮಹಿಳೆ ಶವ ಪತ್ತೆ
Last Updated 1 ಸೆಪ್ಟೆಂಬರ್ 2022, 20:11 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಮಂಗಳೂರು/ ಚಾಮರಾಜನಗರ: ನಿರಂತರ ಮಳೆ, ಪ್ರವಾಹ ಪರಿಸ್ಥಿತಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರ ಪರಿತಾಪ ಮುಂದುವರಿದಿದೆ. ಜನಜೀವನ, ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬೆಳೆ, ಆಸ್ತಿ ಹಾನಿ ಜನರ ನೆಮ್ಮದಿಯನ್ನು ಕದಲಿದೆ. ಕಲಕಿದೆ.

ಉತ್ತರ ಕರ್ನಾಟಕದ ಧಾರವಾಡ– ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ದಡೇರಕೊಪ್ಪದಲ್ಲಿ ಹೊಲಕ್ಕೆ ಹೋಗಿದ್ದ ಸವಿತಾ ಕರಿಕಟ್ಟಿ (23) ಬುಧವಾರ ಸಿಡಿಲು ಬಡಿದು ಸತ್ತಿದ್ದಾರೆ.ಗದಗ ಜಿಲ್ಲೆಯನರಗುಂದ ಪಟ್ಟಣದಲ್ಲಿ ಗುರುವಾರ ಮರದ ಕೆಳಗೆ ನಿಂತಿದ್ದ ಅಶೋಕ್‌ ಶಿವಪ್ಪಯ್ಯನಮಠ ಶಿರಸಂಗಿ (56) ಮತ್ತು ಬುಧವಾರ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದ ಚಿಕ್ಕನರಗುಂದದ ಮಾಲಾ ಮಲ್ಲಿಕಾರ್ಜುನ (31) ಕೂಡ ಸಿಡಿಲಿಗೆ ಬಲಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಳೆವೀರಾಪುರ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬುಧವಾರ ಕೊಚ್ಚಿಕೊಂಡು ಹೋಗಿದ್ದ ಬಡಿಮಾ ಕಾಶೀಂಸಾಬ್ ದಾಸನಕೊಪ್ಪ (66) ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.

ಗದಗ ಜಿಲ್ಲೆಯಲ್ಲಿ ಬೆಣ್ಣೆಹಳ್ಳ ಉಕ್ಕಿ ಹರಿದು ಸಂಚಾರ ಸ್ಥಗಿತಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯ ಕುಳವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಕಾನು ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಮೂವರು ಗಾಯಗೊಂಡಿದ್ದಾರೆ.ರೋಣ ತಾಲ್ಲೂಕಿನ ಬೆನಹಾಳದಲ್ಲಿ ಸರ್ಕಾರಿ ಶಾಲೆಗೆ ನೀರು ನುಗ್ಗಿದ್ದು ಬಿಸಿಯೂಟದ ಪಡಿತರ, ಶಾಲಾ ದಾಖಲಾತಿಗಳು ನೀರು ಪಾಲಾದವು.

ಮನೆಗೆ ನೀರು, ರಾತ್ರಿಯಿಡೀ ಜಾಗರಣೆ
(ಹುಬ್ಬಳ್ಳಿ ವರದಿ): ಬೆಳಗಾವಿ ತಾಲ್ಲೂಕು, ಸವದತ್ತಿ, ಯರಗಟ್ಟಿ, ರಾಮದುರ್ಗ, ನಿಪ್ಪಾಣಿ, ಚಿಕ್ಕೋಡಿ ತಾಲ್ಲೂಕುಗಳಲ್ಲಿಯೂ ಎರಡು ದಿನಗಳಿಂದ ನಿರಂತರ ಮಳೆಯಾಗಿದೆ.ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡದ ಮಾರ್ಗದಲ್ಲಿ ಎರಡು ತಾಸು ಸಂಚಾರ ಸ್ಥಗಿತವಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಅಂಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬತ್ತಿ ಗ್ರಾಮದ ಕೆರೆ ಭರ್ತಿಯಾಗಿ 46 ಮನೆಗಳಿಗೆ ನೀರು ನುಗ್ಗಿತ್ತು. ಸಂತ್ರಸ್ತ 211 ಜನರನ್ನು ಸಮೀಪದ ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ದಾಂಡೇಲಿ ನಗರದಲ್ಲಿ 28 ಮನೆಗಳಿಗೆ, ಆಲೂರು, ಕೇರವಾಡ ಗ್ರಾಮಗಳ 19 ಮನೆಗಳಿಗೆ ನೀರು ನುಗ್ಗಿದೆ. ಹಾಲಮಡ್ಡಿ ಶಾಲಾವರಣದ ಗೋಡೆ ಕುಸಿದಿದೆ.

ಕೊಳ್ಳೇಗಾಲ– ತಮಿಳುನಾಡು ಹೆದ್ದಾರಿ ಬಂದ್
ಚಾಮರಾಜನಗರ ವರದಿ: ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆ ಕಾರಣದಿಂದ ಕೊಳ್ಳೇಗಾಲ– ತಮಿಳುನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಒಡೆಯರಪಾಳ್ಯ ಬಳಿ ಮಸಕತ್ತಿ ಉಡುತೊರೆ ಹಳ್ಳ ತುಂಬಿಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇತುವೆ ಮುಳುಗಡೆಯಾಗಿದೆ. ವಾಹನ ಸವಾರರು, ಶಾಲೆ ಮಕ್ಕಳು, ಶಿಕ್ಷಕರು ಪರದಾಡುವಂತಾಯಿತು.

ಧಾರಾಕಾರ ಮಳೆ: ರಸ್ತೆ ಜಲಾವೃತ
ಸುಳ್ಯ (ದಕ್ಷಿಣ ಕನ್ನಡ) ವರದಿ:
ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ದುಗ್ಗಲಡ್ಕ- ದೊಡ್ಡತೋಟ ರಸ್ತೆಯು ಜಲಾವೃತವಾಗಿ ಭಾಗಶಃ ಸಂಚಾರ ಸ್ಥಗಿತವಾಗಿತ್ತು. ಬೆಳ್ಳಾರೆಯ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ನೀರು ನುಗ್ಗಿದ್ದು, ಸಮಸ್ಯೆಯಾಗಿತ್ತು.‌

ರಾಮನಗರದಲ್ಲಿ ರಾಜಕಾರಣಿಗಳ ದಂಡು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್ ಬುಧವಾರ ಕನಕಪುರ ತಾಲ್ಲೂಕಿನಾದ್ಯಂತ ಮಳೆ ಹಾನಿ ಪರಿಶೀಲಿಸಿದರು. ಗುರುವಾರ ಚನ್ನಪಟ್ಟಣದಲ್ಲಿ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಮನಗರ ಮತ್ತು ಕನಕಪುರದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ನೆರೆ ಹಾನಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT