ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Published : 24 ಸೆಪ್ಟೆಂಬರ್ 2024, 6:48 IST
Last Updated : 24 ಸೆಪ್ಟೆಂಬರ್ 2024, 6:48 IST
ಫಾಲೋ ಮಾಡಿ
Comments

ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಕ್ರಿಮಿನಲ್‌ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮಧ್ಯಾಹ್ನ‌ 12.07ಕ್ಕೆ ಪ್ರಕಟಿಸಿತು.

ತೀರ್ಪಿನ ಅಂತಿಮ ಖಂಡಿಕೆಯ ನಿರ್ಧಾರಕ ವಾಕ್ಯಗಳನ್ನು ಮುಕ್ತ ನ್ಯಾಯಾಲಯದಲ್ಲಿ ಉಲ್ಲೇಖಿಸುವ ಮುನ್ನ ‘ನಿಶ್ಯಬ್ದ’ ಎಂದು ಎಲ್ಕರಿಗೂ ಎಚ್ಚರಿಸಿ ಗಟ್ಟಿಯಾಗಿ ಓದಿದ ನಾಗಪ್ರಸನ್ನ ಅವರು, ‘ಕಲಂ‌ 17 ಎ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ’ ಎಂದರು.

‘ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಸೂಕ್ತ ತೀರ್ಮಾನವನ್ನೇ ಕೈಗೊಂಡಿದ್ದಾರೆ. ಹಾಗಾಗಿ ಅರ್ಜಿದಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಈ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ’ ಎಂದರು.

ಇದೇ ವೇಳೆ ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತೀರ್ಪಿನ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಲು ನ್ಯಾಯಪೀಠಕ್ಕೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ ನ್ಯಾಯಮೂರ್ತಿಗಳು, ‘ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರು ಈ ಪ್ರಕರಣದಲ್ಲಿ ಫಲಾನುಭವಿಗಳಾಗಿದ್ದಾರೆ. ಹೀಗಾಗಿ, ರಾಜ್ಯಪಾಲರ ಕ್ರಮ ಸೂಕ್ತವಾಗಿದೆ’ ಎಂದು ತಿಳಿಸಿದರು.

ಒಟ್ಟು 198 ಪುಟಗಳ ತೀರ್ಪು ಮಧ್ಯಾಹ್ನದ ವೇಳೆಗೆ ಸಾರ್ವಜನಿಕವಾಗಿ ಹೈಕೋರ್ಟ್ ವೆಬ್ ಸೈಟ್‌ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ಈ ತೀರ್ಪಿನಿಂದಾಗಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿರುವ ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣೆಯ ನ್ಯಾಯಿಕ ಪ್ರಕ್ರಿಯೆಗೆ ಇದ್ದ ಮಧ್ಯಂತರ ತಡೆ ಆದೇಶ ತೆರವುಗೊಂಡಿದ್ದು ಮುಂದಿನ ಕಾನೂನು ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT