ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

UPSC ಫಲಿತಾಂಶ: ಮೈಸೂರಿನ ಸೌರಭ್‌ಗೆ 260ನೇ ರ‍್ಯಾಂಕ್‌– ಪ್ರೇರಣೆ ನೀಡಿದ ಪೃಥ್ವಿ ಸಿನಿಮಾ

Published : 23 ಮೇ 2023, 15:35 IST
Last Updated : 23 ಮೇ 2023, 15:35 IST
ಫಾಲೋ ಮಾಡಿ
Comments

ಮೈಸೂರು: ವಿಜಯನಗರದ ಕೆ.ಸೌರಭ್‌, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 260ನೇ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಅವರಿಗೆ ಪುನೀತ್‌ ರಾಜ್‌ ಕುಮಾರ್‌ ಅವರ ‘ಪೃಥ್ವಿ’ ಸಿನಿಮಾ ಪ್ರೇರಣೆ!

ಡೆಹ್ರಾಡೂನ್‌ನ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಭಾರತೀಯ ಅರಣ್ಯ ಸೇವೆ ತರಬೇತಿಯಲ್ಲಿರುವ ಅವರು, ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಮುಂದುವರಿಸಿ ವಿದೇಶಾಂಗ ಸೇವೆ ಸೇರುವ ಕನಸನ್ನು ಇದೀಗ ನನಸು ಮಾಡಿಕೊಂಡಿದ್ದಾರೆ.

‘2021ರಲ್ಲಿ ಭಾರತೀಯ ಅರಣ್ಯ ಸೇವೆ ಹಾಗೂ ನಾಗರಿಕ ಸೇವಾ ಪರೀಕ್ಷೆಗಳೆರಡಲ್ಲೂ ಉತ್ತೀರ್ಣನಾದೆ. ನಾಗರಿಕ ಸೇವಾ ಪರೀಕ್ಷೆಯಲ್ಲೂ 725ನೇ ರ‍್ಯಾಂಕ್ ಪಡೆದಿದ್ದ ನನಗೆ, ಭಾರತೀಯ ಅಂಚೆ ಸೇವೆ ಸಿಕ್ಕಿತ್ತು. ಆದರೆ, ಅರಣ್ಯ ಸೇವಾ ಪರೀಕ್ಷೆಯಲ್ಲಿ 45ನೇ ರ‍್ಯಾಂಕ್‌ ಪಡೆದಿದ್ದರಿಂದ, ಅದನ್ನೇ ಆಯ್ಕೆ ಮಾಡಿಕೊಂಡೆ. ಇದೀಗ ವಿದೇಶಾಂಗ ಸೇವೆ ಸಿಗುವ ನಿರೀಕ್ಷೆಯಿದೆ’ ಎಂದು ಸೌರಭ್‌ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

‘ನಗರದ ಸಿಎಫ್‌ಟಿಆರ್‌ಐ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ, ವಿಜಯನಗರದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ (ಎಸ್‌ವಿಇಐ) ಪಿಯು ಹಾಗೂ ಎಸ್‌ಜೆಸಿಇ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್‌ ಮಾಡಿದೆ. ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೆ, 2017ರಲ್ಲಿ ಮರ್ಚೆಂಟ್‌ ನೇವಿ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ, ವಿದೇಶಾಂಗ ಸೇವೆ ಸೇರುವ ಆಸೆ ಇದ್ದರಿಂದ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದೆ’ ಎಂದರು.

‘ಪುನೀತ್‌ ಅವರ ಪೃಥ್ವಿ ಸಿನಿಮಾ, ಪದವಿ ಓದುವಾಗ ಆಕರ್ಷಿಸಿತ್ತು. ಈಗಲೂ ಆ ಸಿನಿಮಾವೆಂದರೆ ರೋಮಾಂಚನವಾಗುತ್ತದೆ. ನಾನು ಕೆಲಸಕ್ಕೆ ಹೋಗದೆ, ದೆಹಲಿಗೆ ಹೋಗಿ ವಾಜಿರಾಮ್ ಅಂಡ್‌ ರವಿಯಲ್ಲಿ ಕೋಚಿಂಗ್‌ ಪಡೆದೆ. ನಂತರ ಮನೆಯಲ್ಲಿ ತಯಾರಿ ನಡೆಸಿದೆ’ ಎಂದು ಸ್ಮರಿಸಿದರು.

‘2019ರಲ್ಲಿ ಪ್ರಿಲಿಮ್ಸ್‌ನಲ್ಲಿ 50 ಅಂಕಗಳೂ ಬಂದಿರಲಿಲ್ಲ. ಅತಿ ಕೆಟ್ಟ ಅಂಕ ಪಡೆದಿದ್ದೆ. 2020ರಿಂದ ತಯಾರಿ ಯೋಜಿತವಾಗಿ ಆರಂಭಿಸಿದೆ. 2021ರಲ್ಲಿ ಎರಡೂ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ರ‍್ಯಾಂಕ್‌ ಬಂತು. ಇದೀಗ ಕನಸಿನ ವಿದೇಶಾಂಗ ಸೇವೆ ಸಿಗಬಹುದು’ ಎಂದು ನಕ್ಕರು.

‘ತಂದೆ ಮೈಸೂರು ವಿಶ್ವವಿದ್ಯಾಲಯದ ಬಯೊಕೆಮಿಸ್ಟ್ರಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಕೆಂಪರಾಜು, ತಾಯಿ ಡಾ.ಎಂ.ಜಾನಕಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ಇಬ್ಬರ ಪ್ರೋತ್ಸಾಹ ದೊಡ್ಡದು’ ಎಂದರು.

‘ಗುರಿಯೆಡೆಗೆ ಲಕ್ಷ್ಯವಿರಬೇಕು. ಕಡಿಮೆ ಅಂಕ ಬಂದಾಗ ಎದೆಗುಂದದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಮುಂದೆ ಸಾಗಬೇಕು. ಗೆಲ್ಲುವ ದಿನ ಬಂದೇ ಬರುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT