ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ | 20ಕ್ಕೂ ಹೆಚ್ಚು ಅಂಗಡಿ ಭಸ್ಮ: ಮೂವರು ಪೊಲೀಸರಿಗೆ ಗಾಯ

Published : 12 ಸೆಪ್ಟೆಂಬರ್ 2024, 14:35 IST
Last Updated : 12 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ನಾಗಮಂಗಲ: ಪಟ್ಟಣದಲ್ಲಿ ಬುಧವಾರ ರಾತ್ರಿ ಗಣಪತಿ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ ಮತ್ತು ಅಂಗಡಿ, ವಾಹನಗಳಿಗೆ ಬೆಂಕಿ ಹಚ್ಚಿರುವ ಗಲಭೆ ಪ್ರಕರಣದಿಂದ ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಬೆಂಕಿಗೆ ತುತ್ತಾಗಿರುವ ಅಂಗಡಿ, ಗ್ಯಾರೇಜ್‌ ಮಾಲೀಕರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. 

ಐ.ಜಿ, ಎ.ಡಿ.ಜಿ.ಪಿ ಮತ್ತು ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಕ್ರಮವಹಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ನಾಯಕರು ಭೇಟಿ ನೀಡಿ ಗಲಭೆ ಸಂತ್ರಸ್ತರ ಸಮಸ್ಯೆ ಆಲಿಸುತ್ತಿದ್ದಾರೆ. 

ಪಟ್ಟಣದ ಬದ್ರಿಕೊಪ್ಪಲು ಗ್ರಾಮದ ಯುವಕರು ಪಟ್ಟಣದ ಹೆದ್ದಾರಿಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ಮೆರವಣಿಗೆ ನಡೆಸುತ್ತಿದ್ದ ಸಂದರ್ಭ ಹಿಂದೂ– ಮುಸ್ಲಿಂ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ನಂತರ ಪರಸ್ಪರ ಕಲ್ಲು ತೂರಾಟ, ಅಂಗಡಿ, ಶೋರೂಂ, ಗ್ಯಾರೇಜ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ಗಲಭೆ ಆರಂಭಗೊಂಡಿತು.

ಅಂಗಡಿಗಳು ಭಸ್ಮ

ಪಟ್ಟಣದ ಮಂಡ್ಯ ರಸ್ತೆ, ಮೈಸೂರು ರಸ್ತೆ, ಮರಿಯಪ್ಪ ವೃತ್ತ, ಕೊಳದ ಬೀದಿ ಸೇರಿದಂತೆ ಹೆದ್ದಾರಿಯ ಹಲವೆಡೆ ಚಪ್ಪಲಿ ಅಂಗಡಿ, ಬಟ್ಟೆ ಅಂಗಡಿ, ಪಾತ್ರೆ ಅಂಗಡಿ, ಬೈಕ್ ಶೋರೂಂ, ಟೈಲರ್ ಅಂಗಡಿ, ಕೋಳಿ ಅಂಗಡಿ, ಹಣ್ಣಿನ ಅಂಗಡಿ, ಗ್ಯಾರೇಟ್, ಟೈರ್ ಅಂಗಡಿ ಸೇರಿದಂತೆ ವಿವಿಧ ಬಗೆಯ 20ಕ್ಕೂ ಹೆಚ್ಚು ಅಂಗಡಿ ಮಳಿಗೆಗಳಿಗೆ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಸುಟ್ಟು ಕರಕಲಾಗಿವೆ.

ಗಲಭೆಯಲ್ಲಿ ಸುಟ್ಟಿರುವ ಅಂಗಡಿ

ಗಲಭೆಯಲ್ಲಿ ಸುಟ್ಟಿರುವ ಅಂಗಡಿ

– ಪ್ರಜಾವಾಣಿ ಚಿತ್ರ

20 ವಾಹನಗಳಿಗೆ ಬೆಂಕಿ:

ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಬೈಕ್ ಮತ್ತು ಸ್ಕೂಟರ್‌ಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಅಲ್ಲದೇ ಬಜಾಜ್ ಶೋ ರೂಂಗೆ ದಾಳಿ‌ ನಡೆಸಿದ ಕಿಡಿಗೇಡಿಗಳು ಗಾಜುಗಳನ್ನು ಒಡೆದು ಹಾಕುವ ಜೊತೆಗೆ ಕೆಲ ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಜೊತೆಗೆ ಆರು ಬೈಕ್ ಗಳನ್ನು ಕದ್ದೊಯ್ದಿದ್ದಾರೆ ಎಂದು ಮಾಲೀಕರು ದೂರಿದ್ದಾರೆ. 

54 ಆರೋಪಿಗಳ ಬಂಧನ:

ಸಿಸಿಟಿವಿ ಕ್ಯಾಮೆರಾದಲ್ಲಿ ಕಲ್ಲು ತೂರಾಟ, ಮಾರಕಾಸ್ತ್ರ ಹಿಡಿದು ಓಡಾಡುತ್ತಿರುವ ದೃಶ್ಯಗಳು ಸೆರೆಯಾಗಿದ್ದು, 150ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗಲಭೆಗೆ ಕಾರಣರಾದ ಹಿಂದೂ–ಮುಸ್ಲಿಂ ಎರಡೂ ಕೋಮಿಗೆ ಸೇರಿದ 54 ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. 

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ:

ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಗಲಭೆಯಲ್ಲಿ ನಷ್ಟ ಹೊಂದಿದ ಅಂಗಡಿ ಮಾಲೀಕರ ಸಮಸ್ಯೆಗಳನ್ನು ಆಲಿಸಿದರು. 

ತಾಲ್ಲೂಕಿನ ಪರಿಸ್ಥಿತಿ ಶಾಂತವಾಗಿತ್ತು. ಆದರೆ, ನನ್ನೆ ದುರದೃಷ್ಟವಶಾತ್ ಇಂಥ ಘಟನೆ ಜರುಗಿರುವುದು ಬೇಸರದ ಸಂಗತಿಯಾಗಿದ್ದು, ಘಡನೆಯ ಸಂಬಂಧ ಯಾವುದೇ ಒಂದು ಕೋಮಿಗೆ ಪ್ರಾಮುಖ್ಯತೆ ನೀಡುವ ಪ್ರಶ್ನೆಯೇ ಇಲ್ಲ‌. ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆಯಾಗಲಿದೆ ಎಂದು ಹೇಳಿದರು.

ವರದಿ ನೀಡಲು ಸೂಚನೆ:

ಘಟನೆ ವಿಕೋಪಕ್ಕೆ ತಿರುಗುವ ಮುಂಚೆಯೇ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮವಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗದಂತೆ ನಿಯಂತ್ರಿಸಿದ್ದಾರೆ. ಅಲ್ಲದೇ ಘಟನೆಯಲ್ಲಿ ಹಿಂದೂ ಮತ್ತು ಮುಸ್ಲಿಂಗಳ ಅಂಗಡಿಗಳಿಗೆ ಹಾನಿಯಾಗಿದೆ. ಹಾನಿಯ ಕುರಿತು ಅಧಿಕಾರಿಗಳಿಗೆ ವರದಿ ಕೊಡಲು ತಿಳಿಸಿದ್ದೇನೆ ಎಂದರು. 

ಬೆಂಕಿ ನಂದಿಸಲು ನಿರಂತರ ಪ್ರಯತ್ನ:

ನಾಗಮಂಗಲ ನಗರ ಮತ್ತು ಬೆಳ್ಳೂರ್ ಕ್ರಾಸ್ ನಗರದಲ್ಲಿ ದುಷ್ಕರ್ಮಿಗಳಿಂದ ಅಂಗಡಿ ಮುಂಗಟ್ಟು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್. ಜಯರಾಮಯ್ಯ ಮಾರ್ಗದರ್ಶನದಲ್ಲಿ ಮಂಡ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ ರಾಘವೇಂದ್ರ ನೇತೃತ್ವದಲ್ಲಿ ಎಂಟು ಅಗ್ನಿಶಾಮಕ ವಾಹನಗಳಿಂದ ರಾತ್ರಿ ಇಡೀ ಕಾರ್ಯಾಚರಣೆ ನಡೆಸಲಾಯಿತು. ನಗರದಲ್ಲಿ ಅಲ್ಲಲ್ಲಿ ಹೊತ್ತಿಸಿದ ಬೆಂಕಿಯ ಕೆನ್ನಾಲಿಗೆಯನ್ನು ಕೂಡಲೇ ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಶ್ರಮಿಸಿದರು. 

ಬೆರಳಚ್ಚು ತಂಡ ಭೇಟಿ:

ಬೆರಳಚ್ಚು ತಂಡ ಭೇಟಿ ನೀಡಿ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಬೆಂಕಿ ಹಚ್ಚಿದ್ದು ಯಾರು? ಪೆಟ್ರೋಲ್ ಬಾಂಬ್ ಹಾಕಿದ್ದು ಯಾರು? ನಿಷೇಧಿತ ಸ್ಪೋಟಕವೇ? ಅಥವಾ ಇತರೆ ಸ್ಫೋಟಕ ಬಳಸಲಾಗಿದೆಯೇ? ಎಂಬ ಬಗ್ಗೆ ಶೋಧ ನಡೆಸಿದ್ದಾರೆ. ಪೊಲೀಸರೊಂದಿಗೆ ಸುಟ್ಟ ಕರಕಲಾದ ಅಂಗಡಿಗಳಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ. 

ಮಹಿಳೆಯರ ಪ್ರತಿಭಟನೆ:

ಕೋಮುಗಲಭೆ ಉಂಟಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಪೊಲೀಸರು ಮನೆಗೆ ನುಗ್ಗಿ ಅಮಯಾಕರನ್ನು ಬಂಧಿಸಿದ್ದಾರೆ. ಮನೆ ಬಾಗಿಲನ್ನು ಮುರಿದು ಮನೆಗೆ ನುಗ್ಗಿದ್ದಾರೆ. ಆದ್ದರಿಂದ ‌ನಮ್ಮ ಮಕ್ಕಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬದ್ರಿಕೊಪ್ಪಲು ಗ್ರಾಮದ ಮಹಿಳೆಯರು ಮತ್ತು ಮುಸ್ಲಿಂ ವಾರ್ಡ್‌ಗಳ ಮಹಿಳೆಯರು ಪೊಲೀಸ್ ಠಾಣೆಯ ಮುಂದೆ ಆಗಮಿಸಿ ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.

ಗಣೇಶನನ್ನು ಪ್ರತಿಷ್ಠಾಪಿಸಿದ್ದೇ ತಪ್ಪಾ?

‘ನಾವು 27 ವರ್ಷಗಳಿಂದ ಗಣೇಶ ಮೂರ್ತಿಯನ್ನು ಕೂರಿಸುತ್ತಿದ್ದೇವೆ. ಬೇರೆ ಕೋಮಿನವರು ಮಾಡಿದ ತಪ್ಪಿಗೆ, ಗಣಪತಿ ಕೂರಿಸಿದ ಹುಡುಗರನ್ನು ಯಾಕೆ ಪೊಲೀಸರು ಬಂಧಿಸಿದ್ದಾರೆ? ನಮ್ಮ ಮನೆಗಳಿಗೆ ಪೊಲೀಸರು ಮಧ್ಯರಾತ್ರಿ 1 ಗಂಟೆಗೆ ನುಗ್ಗಿದ್ದು ಏಕೆ? ಎಂದು ಬದ್ರಿಕೊಪ್ಪದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ನಾಗಮಂಗಲ ಪಟ್ಟಣದ ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತ ಮಹಿಳೆಯರು, ‘ನಮ್ಮವರು ತಪ್ಪು ಮಾಡಿಲ್ಲ, ಬೇಕಂತಲೇ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ನಮ್ಮವರನ್ನು ಬಿಡಿ’ ಎಂದು ಕಣ್ಣೀರು ಹಾಕಿದರು. 

‘ವಿಚಾರಣೆಗೆ ಕರೆ ತಂದಿದ್ದೇವೆ. ತಪ್ಪು ಮಾಡಿಲ್ಲದವರನ್ನು ಮನೆಗೆ ಕಳುಹಿಸುತ್ತೇವೆ. ಇಲ್ಲಿ ಗುಂಪುಗೂಡಿ ಗಲಾಟೆ ಮಾಡಬೇಡಿ’ ಎಂದು ಇನ್‌ಸ್ಪೆಕ್ಟರ್‌ ನಿರಂಜನ್‌ ಹೇಳಿದ ನಂತರ, ಮಹಿಳೆಯರು ಮನೆಗೆ ತೆರಳಿದರು.

ಅಂಗಡಿಗೆ ಬೆಂಕಿ: ವ್ಯಾಪಾರಿಗಳ ಅಳಲು

‘ಬಟ್ಟೆ ಶೋರೂಂಗೆ ಬೆಂಕಿ ಹಚ್ಚುತ್ತಾರೆ ಎಂಬ ವಿಷಯ ತಿಳಿದು ಸ್ಥಳಕ್ಕೆ ಓಡಿ ಬಂದೆ. ಉದ್ರಿಕ್ತ ಯುವಕರ ಗುಂಪು ಕೈಯಲ್ಲಿ ಬಾಟಲಿ, ಮಾರಕಾಸ್ತ್ರ ಹಿಡಿದು ನಮ್ಮ ಮೇಲೆ ದಾಳಿ ನಡೆಸಲು ಮುಂದಾದರು. ಪೊಲೀಸರೇ ಹೆದರಿ ಓಡಲು ಶುರು ಮಾಡಿದರು. ಪ್ರಾಣ ಉಳಿಸಿಕೊಂಡರೆ ಸಾಕು ಎಂದು ನಾನು ಕೂಡ ಅಲ್ಲಿಂದ ಓಡಿ ಬಂದೆ. ಎಲ್ಲವನ್ನೂ ಕಳೆದುಕೊಂಡು 7 ಕಾರ್ಮಿಕರ ಜೊತೆ ನಾನು ಕೂಡ ಬೀದಿಗೆ ಬಿದ್ದಿದ್ದೇನೆ’ ಎಂದು ಸಾಧನ ಟೆಕ್ಸ್‌ಟೈಲ್‌ ಬಟ್ಟೆ ಶೋರೂಂ ಮಾಲೀಕ ಭೀಮರಾಜ್‌ ಕಣ್ಣೀರು ಹಾಕಿದರು.

ಪಟ್ಟಣದ ಅಯ್ಯಂಗಾರ್ ಬೇಕರಿ ಬಳಿಯ ಸಾಗರ್ ಬಟ್ಟೆ ಮಳಿಗೆಗೆ ಬೆಂಕಿ ಹಾಕಿದ ಹಿನ್ನೆಲೆಯಲ್ಲಿ ಅಂಗಡಿಯಲ್ಲಿದ್ದ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ. ಅಲ್ಲದೇ ಪೊಲೀಸ್ ಠಾಣೆಯ ಬಳಿ ಇರುವ ಮುಜೀಬ್ ಎಂಬುವರು ಸುಮಾರು ₹25 ಲಕ್ಷ ವೆಚ್ಚದಲ್ಲಿ ಮಾಡಿದ್ದ ಪಾತ್ರೆ ಅಂಗಡಿಯು ಸಂಪೂರ್ಣ ನಾಶವಾಗಿದ್ದು, ಅಂಗಡಿ ಮಳಿಗೆಗೂ ಹಾನಿಯಾಗಿದೆ.

ಸಾವಿರಾರು ಕಲ್ಲುಗಳು ಎಲ್ಲಿಂದ ಬಂದವು?

ನಾಗಮಂಗಲ ಗಲಭೆ ನಡೆದ ಸ್ಥಳಕ್ಕೆ ಸಾವಿರಾರು ಕಲ್ಲುಗಳು ಒಮ್ಮೆಲೆ ಎಲ್ಲಿಂದ ಬಂದವು? ಕಳೆದ ವರ್ಷವೂ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಪೊಲೀಸರು ಏನು ಮಾಡುತ್ತಿದ್ದಾರೆ? ಸರ್ಕಾರ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಜೊತೆಗೆ ಹಾನಿಗೊಳಗಾದ ಜನರ ಜೀವನ ಕಟ್ಟಿಕೊಳ್ಳಲು ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಸುರೇಶ್ ಗೌಡ ಒತ್ತಾಯಿಸಿದರು. 

ಘಟನೆಯಿಂದ ಸಾರ್ವಜನಿಕರ ಆಸ್ತಿ ಪಾಸ್ತಿಗಳು ನಷ್ಟವಾಗಿದೆ. ಜನರಿಗೆ ರಕ್ಷಣೆ ಇಲ್ಲದ, ಇಂತ ಆಡಳಿತ ಬೇಕೆ? ನನ್ನ ಮನೆಯ ಮೇಲೆ ಕೂಡ ಕಲ್ಲು ತೂರಾಟ ಮಾಡಲಾಗಿದೆ. ಈ ರಾಜ್ಯದಲ್ಲಿ ಕಾನೂನು ಇದೆಯೇ? ಎಂದು ಪ್ರಶ್ನಿಸಿದರು. ಭ್ರಷ್ಟಾಚಾರಿಗಳನ್ನು ತಾಲ್ಲೂಕಿನ ತುಂಬಿಕೊಂಡು ಏನು ಮಾಡುತ್ತಿದ್ದಾರೆ? ಎಂದು ವಾಗ್ದಾಳಿ ನಡೆಸಿದರು. 

ಮದ್ಯ ಮಾರಾಟ ನಿಷೇಧ

ನಾಗಮಂಗಲ ಗಲಭೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆ.12ರ ಬೆಳಿಗ್ಗೆ 6 ಗಂಟೆಯಿಂದ ಸೆ.13ರ ರಾತ್ರಿ 12 ಗಂಟೆಯವರೆಗೆ ನಾಗಮಂಗಲ ಪಟ್ಟಣ ಹಾಗೂ ಅದರ ಸುತ್ತಮುತ್ತಲಿನ 3 ಕಿ. ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಮುಚ್ಚುವಂತೆ ಹಾಗೂ ಮದ್ಯ ಮಾರಾಟ, ಮದ್ಯ ಸಂಗ್ರಹಣೆ, ಮದ್ಯ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕುಮಾರ ಆದೇಶ ಹೊರಡಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಸಿಪಿಎಂ ಆಗ್ರಹ

ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ, ಗಲಭೆ ಮತ್ತು ಹಿಂಸಾಚಾರ ಕೃತ್ಯಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಎಂ ಮಂಡ್ಯ ಜಿಲ್ಲಾ ಸಮಿತಿ ಆಗ್ರಹಿಸಿದೆ. 

ಕಳೆದ ವರ್ಷ ಇಂತಹದ್ದೇ ಘಟನೆಗಳು ವರದಿಯಾಗಿದ್ದಾಗಲೂ, ಆಗಾಗ್ಗೆ ಸಂಘ ಪರಿವಾರ ಪ್ರಚೋದಿತ ದುರ್ಘಟನೆಗಳು ವರದಿಯಾಗುತ್ತಿದ್ದರೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾದ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆಯ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದಿಂದ ಇಂತಹ ಗಲಭೆಗಳು ಸಂಭವಿಸಿವೆ. ಇಡೀ ಕೃತ್ಯ ಮತ್ತು ನಂತರದ ಘಟಕಗಳ ಹೊಣೆಯನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹೊರಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT