ಬೆಂಗಳೂರು: ‘ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯ ದರ್ಗಾ ಬಳಿ ಬುಧವಾರ ರಾತ್ರಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ 52 ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸರು ಎಲ್ಲ ಭದ್ರತೆ ಮಾಡಿಕೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ತುಕಡಿಯನ್ನೂ ನಿಯೋಜಿಸಿಲಾಗಿತ್ತು. ಇಲ್ಲದೇ ಇದ್ದರೆ ಇನ್ನೂ ಹೆಚ್ಚಿನ ಗಲಾಟೆ ಆಗುತ್ತಿತ್ತು’ ಎಂದರು.
‘ಸಿಸಿಟಿವಿ ಕ್ಯಾಮೆರಾ ವಿಡಿಯೊಗಳನ್ನು ಗಮನಿಸಿ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ಎಂದು ಕಾಣುತ್ತಿಲ್ಲ. ರಾಜಕೀಯ ಟೀಕೆ, ಆರೋಪಗಳಿಗೆ ಈಗ ಪ್ರತಿಕ್ರಿಯೆ ಕೊಡುವುದಿಲ್ಲ’ ಎಂದರು.
‘ಎಡಿಜಿಪಿ ಮಟ್ಟದ ಅಧಿಕಾರಿಗಳು ಘಟನಾ ಸ್ಥಳದಲ್ಲಿಯೇ ಇದ್ದಾರೆ. ಕೋಮುಗಲಭೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ. ಇದಕ್ಕೆ ಹೆಚ್ಚು ಪ್ರಚಾರ ಕೊಡಬೇಡಿ ಎಂದು ನಿಮ್ಮಲಿಯೂ (ಮಾಧ್ಯಮ) ನನ್ನ ಮನವಿ’ ಎಂದರು.
ನಾಗಮಂಗಲಕ್ಕೆ ಬಿಜೆಪಿ ನಿಯೋಗದ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ನಾನು ಮನವಿ ಮಾಡುತ್ತೇನೆ. ಪೊಲೀಸರು ಇದ್ದಾರೆ. ಅವರಿಗೆ ಬಿಡಿ. ಘಟನೆ ಹೆಚ್ಚಾಗದ ರೀತಿಯಲ್ಲಿ ಏನಾದರೂ ಸಲಹೆ ಇದ್ದರೆ ಕೊಡಲಿ. ಅದನ್ನು ಬಿಟ್ಟು ರಾಜಕೀಯ ಮಾಡಬಾರದು. ಎಡಿಜಿಪಿ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಅವಶ್ಯ ಬಿದ್ದರೆ ನಾನೂ ಹೋಗುತ್ತೇನೆ’ ಎಂದರು.