ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನ. 13, 14ರಂದು ‘ರಾಷ್ಟ್ರೀಯ ಸ್ವರಾಜ್ ಸಮ್ಮೇಳನ: ಸಚಿವ ಪ್ರಿಯಾಂಕ್ ಖರ್ಗೆ

ಪಂಚಾಯತ್‌ ರಾಜ್‌ ಕಾಯ್ದೆಗೆ 3 ದಶಕ
Published : 2 ಅಕ್ಟೋಬರ್ 2024, 9:55 IST
Last Updated : 2 ಅಕ್ಟೋಬರ್ 2024, 9:55 IST
ಫಾಲೋ ಮಾಡಿ
Comments

ಬೆಂಗಳೂರು: ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌’ ಕಾಯ್ದೆ ಜಾರಿಗೊಂಡು ಮೂರು ದಶಕ ತುಂಬಿದ ನೆನಪಿಗಾಗಿ ನ. 13 ಹಾಗೂ 14ರಂದು ‘ರಾಷ್ಟ್ರೀಯ ಸ್ವರಾಜ್ ಸಮ್ಮೇಳನʼ ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸಮ್ಮೇಳನದ ಲಾಂಛನವನ್ನು ಅನಾವರಣಗೊಳಿಸಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಪಂಚಾಯತ್‌ ವ್ಯವಸ್ಥೆ ನಡೆದು ಬಂದ ಹಾದಿ ಕುರಿತು ಅವಲೋಕನ ಮಾಡುವ ಹಾಗೂ ಮುಂದಿನ 30 ವರ್ಷಗಳಿಗೆ ಅನ್ವಯವಾಗುವ ಕರ್ನಾಟಕ ಸ್ವರಾಜ್ಯ ಚಾರ್ಟರ್‌ ರೂಪಿಸುವ ಕುರಿತು ವಿಚಾರ ಸಂಕಿರಣ, ದುಂಡುಮೇಜಿನ ಪರಿಷತ್ತು, ಕಾರ್ಯಾಗಾರ, ಸಂವಾದ, ಚರ್ಚಾಗೋಷ್ಠಿಗಳನ್ನು ಈ ಎರಡು ದಿನ ಹಮ್ಮಿಕೊಳ್ಳಲಾಗುವುದು’ ಎಂದರು.

‘ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಾಮಾಜಿಕ ತಜ್ಞರು, ಆರ್ಥಿಕ ತಜ್ಞರು, ಕಾನೂನು ತಜ್ಞರು, ಆಡಳಿತ ತಜ್ಞರು, ಸಂವಿಧಾನ ತಜ್ಞರು, ವಿಷಯ ತಜ್ಞರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಈ ಗೋಷ್ಠಿಗಳ ನಂತರ ಹೊಮ್ಮುವ ವಿಚಾರಗಳನ್ನು ಆಧರಿಸಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಮುಂದಿನ 30 ವರ್ಷಗಳಿಗೆ ಕರ್ನಾಟಕ ಹಾಗೂ ದೇಶದ ಪಂಚಾಯತಿ ವ್ಯವಸ್ಥೆಯಲ್ಲಿ ತರಬಹುದಾದ ಮತ್ತಷ್ಟು ಸುಧಾರಣೆಗಳನ್ನು ಸೂಚಿಸುವ ನೀಲಿನಕ್ಷೆಯನ್ನು ಒಳಗೊಂಡ ಕರ್ನಾಟಕ ಸ್ವರಾಜ್ಯ ಚಾರ್ಟರ್‌ ರೂಪಿಸಲಾಗುವುದು’ ಎಂದೂ ಹೇಳಿದರು.

‘ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಕಾರ್ಯಗಳಿಂದ ಸ್ಫೂರ್ತಿ ಪಡೆದು ಸತ್ಯ (ಸತ್ಯ), ಅಹಿಂಸಾ (ಅಹಿಂಸೆ), ಅಸ್ತೇಯ (ಪ್ರಾಮಾಣಿಕತೆ) ಮತ್ತು ಮೈತ್ರಿ (ಭ್ರಾತೃತ್ವ) ತತ್ವಗಳನ್ನು ಆಧರಿಸಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ಮಹತ್ವದ ನಿರ್ಧಾರಗಳನ್ನು ‘ಕರ್ನಾಟಕ ಪಂಚಾಯತ್‌ ರಾಜ್‌ ಘೋಷಣೆʼ ಎಂದು ಪರಿಗಣಿಸಲಾಗುವುದು’ ಎಂದೂ ತಿಳಿಸಿದರು.

‘ಮೂರು ದಿನಗಳ ಕಾರ್ಯಕ್ರಮದಲ್ಲಿ ನೀತಿ ನಿರೂಪಕರು, ಶಿಕ್ಷಣ ತಜ್ಞರನ್ನು ಒಳಗೊಂಡಂತೆ ಶೈಕ್ಷಣಿಕ ಅಧಿವೇಶನಗಳು, ಗಾಂಧೀಜಿಯವರ ತತ್ವಗಳು ಮತ್ತು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಮೌಲ್ಯಗಳನ್ನು ಆಧರಿಸಿ ವಿಷಯಾಧಾರಿತ ಚರ್ಚೆಗಳು, ಪ್ರಸ್ತುತ ನಮ್ಮ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳಿಗೆ ಪರಿಹಾರ, ದುಂಡುಮೇಜಿನ ಚರ್ಚೆಗಳು ನಡೆಯಲಿವೆ’ ಎಂದೂ ಸಚಿವರು ಹೇಳಿದರು.

‘ಸಮಾಜೋ-ಸಾಂಸ್ಕೃತಿಕ ವೇದಿಕೆಯಲ್ಲಿ ಭಾರತದ ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ರಂಗಭೂಮಿ, ಸಾಂಪ್ರದಾಯಿಕ ಕಲೆ ಮತ್ತು ಚಲನಚಿತ್ರಗಳ ಪ್ರದರ್ಶನ, ಚರಕ ತರಗತಿಗಳು ಮತ್ತು ಧ್ಯಾನ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ಸಂವಿಧಾನದ 75 ವರ್ಷಗಳ ಅವಧಿಯಲ್ಲಿ ಕಂಡ ಪ್ರಗತಿ, ಅಭಿವೃದ್ಧಿ ಹಾಗೂ ಸವಾಲುಗಳ ಚಿತ್ರಣವನ್ನು ಪ್ರತಿಬಿಂಬಿಸುವ ಕಲಾಕೃತಿಗಳು, ಛಾಯಾಚಿತ್ರಗಳು ಮತ್ತು ವಿಡಿಯೊಗಳನ್ನು ಒಳಗೊಂಡ ವಸ್ತುಪ್ರದರ್ಶನ ಆಯೋಜಿಸಲಾಗುವುದು’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT