ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕೃತಿ ವಿಕೋಪ: ಪರಿಹಾರ ಹೆಚ್ಚಳಕ್ಕೆ ರಾಜ್ಯ ಒತ್ತಡ

Published 13 ಜೂನ್ 2023, 18:51 IST
Last Updated 13 ಜೂನ್ 2023, 18:51 IST
ಅಕ್ಷರ ಗಾತ್ರ

ನವದೆಹಲಿ: ಪ್ರಕೃತಿ ವಿಕೋಪದ ಸಂದರ್ಭದಲ್ಲಾಗುವ ಹಾನಿಗೆ ಈಗ ನೀಡುತ್ತಿರುವ ಪರಿಹಾರ ಮೊತ್ತ ಭಾರಿ ಕಡಿಮೆ ಇದ್ದು, ಅದನ್ನು ದುಪ್ಪಟ್ಟು ಮಾಡಬೇಕು ಎಂದು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದೆ. 

ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನವದೆಹಲಿಯಲ್ಲಿ ಮಂಗಳವಾರ ನಡೆದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಸಚಿವರ ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಮಳೆ ಹಾನಿ, ಬೆಳೆ ಹಾನಿ ಹಾಗೂ ಪ್ರಾಣ ಹಾನಿಗೆ ನೀಡುತ್ತಿರುವ ಪರಿಹಾರ ಏನೇನೂ ಸಾಲದು. ಇದನ್ನು ಹೆಚ್ಚಿಸಬೇಕು. ಇದು ರೈತರು ಹಾಗೂ ಸಾರ್ವಜನಿಕ ಬೇಡಿಕೆಯೂ ಹೌದು’ ಎಂದು ಗಮನ ಸೆಳೆದರು.

ಇದಕ್ಕೆ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಸಚಿವರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್‌ ಶಾ, ‘ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಭರವಸೆ ನೀಡಿದರು. 

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕೃಷ್ಣ ಬೈರೇಗೌಡ, ‘ಬರಗಾಲ, ಭೂಕುಸಿತ, ಮಳೆ ಹಾಗೂ ಇನ್ನಿತರ ಪ್ರಕೃತಿ ವಿಕೋಪಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿಕೋಪಗಳ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವರು ಸೂಚಿಸಿದ್ದಾರೆ’ ಎಂದರು. 

‘ಬರಗಾಲ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತ ಭಾರಿ ಕಡಿಮೆ ಇದೆ. ಈ ಮೊತ್ತ ಹೆಚ್ಚಳ ಆಗಬೇಕಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು. ಪ್ರಾಣ ಹಾನಿ ಪ್ರಕರಣಗಳಲ್ಲಿ ಪರಿಹಾರ ಮೊತ್ತವನ್ನು ₹8 ಲಕ್ಷಕ್ಕೆ ಹೆಚ್ಚಿಸಲು ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು. 

‘ಇದು ಬಹಳಷ್ಟು ವರ್ಷಗಳಿಂದಿರುವ ಸಾರ್ವಜನಿಕರ ಒತ್ತಾಯವಾಗಿದೆ. ಸದ್ಯ ರಾಜ್ಯ ಸರ್ಕಾರ ಕೈಯಿಂದ ಹಣ ಹಾಕಿ ಹೆಚ್ಚಿನ ಪರಿಹಾರ ನೀಡುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಕರ್ನಾಟಕದ ಎಸ್‌ಡಿಆರ್‌ಎಫ್‌ಗೆ ಅನುದಾನ ಕಡಿಮೆ ಬರುತ್ತಿದೆ. ಹೀಗಾಗಿ ಕೇಂದ್ರದಿಂದ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕು’ ಎಂದು ಅವರು ಆಗ್ರಹಿಸಿದರು. 

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಿಡಿಲು ಬಡಿದು ಮೃತಪಡುವವರ ಸಂಖ್ಯೆ ಹೆಚ್ಚಳ ಆಗಿದೆ. ಸಿಡಿಲು ಮುನ್ಸೂಚನೆ ಪತ್ತೆ ಹಚ್ಚಲು ರಾಜ್ಯದಲ್ಲಿ ಡಾಪ್ಲರ್‌ ರಾಡಾರ್ ಅಳವಡಿಸಬೇಕು ಎಂದು ಮನವಿ ಮಾಡಲಾಗಿದೆ. ಶೀಘ್ರದಲ್ಲಿ ರಾಡಾರ್‌ ಸ್ಥಾಪಿಸಲಾಗುತ್ತದೆ ಎಂದು ಕೇಂದ್ರ ಹವಾಮಾನ ಇಲಾಖೆ ಭರವಸೆ ನೀಡಿದೆ ಎಂದು ಅವರು ತಿಳಿಸಿದರು. 

ಕೇಂದ್ರ ಸರ್ಕಾರವು ಕಳೆದ ಅಕ್ಟೋಬರ್‌ನಲ್ಲಿ ಪ್ರಕೃತಿ ವಿಕೋಪದ ಪರಿಹಾರದ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಸರ್ಕಾರದಿಂದ ನೀಡುವ ಪರಿಹಾರದಲ್ಲಿ ವಿಮಾ ಕಂಪನಿಗಳ ಪಾಲಿನ ಬಗ್ಗೆ ಪ್ರಸ್ತಾಪಿಸಿದೆ. ಸರ್ಕಾರ ನೀಡುವ ಪರಿಹಾರ ಮೊತ್ತದಲ್ಲಿ ವಿಮಾ ಕಂಪನಿಗಳು ವಿಮಾ ಮೊತ್ತವನ್ನು ಕಡಿತಗೊಳಿಸಿ ನೀಡುವ ನಿಯಮ ತರಲಾಗಿದೆ. ಇದರಿಂದ ವಿಮಾ ಕಂಪನಿಗಳಿಗೆ ದೊಡ್ಡ ಮಟ್ಟದ ಲಾಭ ಆಗುತ್ತಿದೆ. ಇದರಿಂದ ಸರ್ಕಾರ ಹಾಗೂ ರೈತರಿಗೆ ನಷ್ಟ ಉಂಟಾಗುತ್ತಿದೆ. ಈ ಮಾರ್ಗಸೂಚಿಯನ್ನು ತಿದ್ದುಪಡಿ ಮಾಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ ಎಂದೂ ಅವರು ಹೇಳಿದರು. 

ಪ್ರಕೃತಿ ವಿಕೋಪದ ಪರಿಹಾರ ಮೊತ್ತದಲ್ಲಿ ಕೇಂದ್ರ ಸರ್ಕಾರವು ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಕಳೆದ ವರ್ಷ ಕರ್ನಾಟಕ ಸರ್ಕಾರ ₹5 ಸಾವಿರ ಕೋಟಿ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಕೇವಲ ₹900 ಕೋಟಿ ಬಿಡುಗಡೆ ಮಾಡಿತ್ತು ಎಂದರು. 

ವಿಪತ್ತು ನಿರ್ವಹಣೆಗೆ ₹8 ಸಾವಿರ ಕೋಟಿ ವೆಚ್ಚದ ಯೋಜನೆ

ನವದೆಹಲಿ: ದೇಶದಲ್ಲಿ ಪ್ರವಾಹ ತಗ್ಗಿಸುವಿಕೆ, ಅಗ್ನಿಶಾಮಕ ದಳದ ಸೇವೆಗಳ ಆಧುನೀಕರಣ ಮತ್ತು ಭೂಕುಸಿತ ತಡೆಗಟ್ಟುವಂತಹ ವಿಪತ್ತು ನಿರ್ವಹಣಾ ಕಾರ್ಯವಿಧಾನಗಳ ಆಧುನೀಕರಣಕ್ಕಾಗಿ ₹8 ಸಾವಿರ ಕೋಟಿ ಮೊತ್ತದ ಮೂರು ಯೋಜನೆಗಳನ್ನು ಆರಂಭಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ. 

ಇಲ್ಲಿ ನಡೆದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ದೇಶದ ಯಾವುದೇ ಭಾಗದಲ್ಲಿ ವಿಪತ್ತಿನಿಂದ ಯಾವುದೇ ಜೀವ ಹಾನಿಯಾಗದಂತೆ ನೋಡಿಕೊಳ್ಳಬೇಕು’ ಎಂದರು. 

ಅಗ್ನಿಶಾಮಕ ದಳದ ಸೇವೆಗಳ ಆಧುನೀಕರಣ ಹಾಗೂ ವಿಸ್ತರಣೆಗಾಗಿ ಎಲ್ಲ ರಾಜ್ಯಗಳಿಗೆ ₹5 ಸಾವಿರ ಕೋಟಿ ನೆರವು ನೀಡಲಾಗುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರವು ವಿವರವಾದ ಯೋಜನಾ ವರದಿ ಸಿದ್ಧಪಡಿಸಿದ್ದು, ರಾಜ್ಯಗಳಿಗೆ ಅದನ್ನು ಕಳುಹಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಪ್ರವಾಹದ ಅಪಾಯವನ್ನು ತಗ್ಗಿಸಲು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು, ಅಹಮದಾಬಾದ್‌, ಹೈದರಾಬಾದ್‌, ಪುಣೆ ನಗರಕ್ಕೆ ₹2,500 ಕೋಟಿ ಒದಗಿಸಲಾಗುತ್ತದೆ. ಅದರ ವಿವರವಾದ ಯೋಜನಾ ವರದಿಯನ್ನು ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಎಂದೂ ಅವರು ತಿಳಿಸಿದರು. 

17 ರಾಜ್ಯಗಳಲ್ಲಿ ಭೂಕುಸಿತ ಎದುರಿಸಲು ಕೇಂದ್ರ ಸರ್ಕಾರವು ₹825 ಕೋಟಿ ನೀಡಲಿದೆ ಎಂದು ಅವರು ಹೇಳಿದರು.

ಏಳು ಪರಮಾಣು ವಿದ್ಯುತ್‌ ಸ್ಥಾವರಗಳನ್ನು ನಿರ್ಮಿಸುತ್ತಿರುವ ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಭೇಟಿ ನೀಡಿದೆ. ಸಂಭವನೀಯ ವಿಪತ್ತು ಘಟಿಸದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ಶಿಷ್ಟಾಚಾರ ಪಾಲಿಸುವಂತೆ ಸೂಚಿಸಿದೆ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT