ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ಹೆದ್ದಾರಿ ಅಭಿವೃದ್ಧಿಗೆ ಹೊಸ ಪ್ರಾಧಿಕಾರ ರಚಿಸಲು ಸರ್ಕಾರ ನಿರ್ಧಾರ

ಖಾಸಗಿ ಬಂಡವಾಳ ಆಕರ್ಷಣೆಗೆ ಆದ್ಯತೆ *ರಾಜ್ಯದಲ್ಲಿ ಹೆಚ್ಚಲಿವೆ ಟೋಲ್‌ ರಸ್ತೆಗಳು?
Published 27 ಜುಲೈ 2023, 20:20 IST
Last Updated 27 ಜುಲೈ 2023, 20:20 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ರಸ್ತೆಗಳು ಮತ್ತು ಹೆದ್ದಾರಿಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ವನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಖಾಸಗಿಯವರು  ಬಂಡವಾಳ ಹೂಡಿ ರಸ್ತೆ ಅಭಿವೃದ್ಧಿ ಪಡಿಸಿದ ರಸ್ತೆ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ನೀಡಿಯೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. 

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಅವರು, ಈ ಪ್ರಾಧಿಕಾರದ ಮೂಲಕ ಖಾಸಗಿ ಬಂಡವಾಳವನ್ನು ಆಕರ್ಷಿಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಈ ಪ್ರಾಧಿಕಾರ ಬರಲಿದ್ದು, ಇದು ಪಿಪಿಪಿ ಯೋಜನೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗಳ ಆದ್ಯತಾ ಪಟ್ಟಿ ತಯಾರಿಸುವುದು, ಪ್ರವಾಸೋದ್ಯಮ, ಅಂತರ ರಾಜ್ಯ ಸಂಪರ್ಕಿಸುವ ಹೆದ್ದಾರಿಗಳು, ಕೈಗಾರಿಕಾ ಕಾರಿಡಾರ್‌ ಹೆದ್ದಾರಿಗಳ ಅಭಿವೃದ್ಧಿ ಯೋಜನೆಗಳಿಗೆ ಯೋಜನಾ ವರದಿ ಮತ್ತು ಕಾರ್ಯ ಸಾಧ್ಯತಾ ವರದಿಗಳನ್ನು ಪ್ರಾಧಿಕಾರ ತಯಾರಿಸಲಿದೆ ಎಂದರು.

ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಖಾಸಗಿ ಬಂಡವಾಳ ಆಕರ್ಷಿಸಲು ಸೂಕ್ತ ಯೋಜನೆಗಳ ಗುರುತಿಸುವಿಕೆ ಮತ್ತು ತಾತ್ವಿಕ ಅನುಮೋದನೆಯನ್ನು ಪ್ರಾಧಿಕಾರ ನೀಡಲಿದೆ ಎಂದು ಪಾಟೀಲ ತಿಳಿಸಿದರು.

ಪಿಪಿಪಿ ಗುತ್ತಿಗೆಗಳ ಸಂಗ್ರಹಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ, ಅತ್ಯುತ್ತಮ ಉದ್ಯಮ ಮಾನದಂಡಗಳಿಗೆ ಅನುಗುಣವಾಗಿ ಮಾರ್ಗಸೂಚಿ ಮತ್ತು ಸಂಗ್ರಹಣೆ ವಿಧಾನಗಳನ್ನು ತಯಾರಿಸಲಾಗುವುದು ಎಂದರು.

ಪರಿಸರ ಸೂಕ್ಷ್ಮ ವಲಯ: ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸೂಕ್ತ ಪ್ರಸ್ತಾವನೆ ಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮತ್ತು ಇತರೆ ವಿಷಯಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಚಿವ ಸಂಪುಟ ಉಪಸಮಿತಿ ರಚಿಸಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ.

ಮೈತ್ರಿಗೆ ಸೂಪರ್‌ ನ್ಯೂಮರರಿ ಹುದ್ದೆ: 2011 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಯಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಮಹಿಳಾ ಮೀಸಲಾತಿಯಡಿ ಗ್ರೂಪ್‌ ‘ಎ’ ವೃಂದದ ಕೆಎಎಸ್‌ (ಕಿರಿಯ ಶ್ರೇಣಿ) ಹುದ್ದೆ ನೀಡಬೇಕೆಂಬ ಡಾ. ಮೈತ್ರಿ ಎಚ್‌.ಪಿ.ಎಸ್‌. ಅವರ ಮನವಿಯನ್ನು ಪುರಸ್ಕರಿಸಿರುವ ಸಚಿವ ಸಂಪುಟ ಸಭೆ, ಅವರಿಗಾಗಿ ಒಂದು ಸೂಪರ್‌ ನ್ಯೂಮರರಿ ಹುದ್ದೆ (ಸಂಖ್ಯಾತಿರಿಕ್ತ) ಸೃಜಿಸಿ ನೇಮಕಾತಿ ಮಾಡಲು ನಿರ್ಧರಿಸಿದೆ ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಮಕ್ಕಳಿಗೆ ಮೊಟ್ಟೆ: ಖರೀದಿಗೆ ಟೆಂಡರ್‌

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಮತ್ತು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿತರಿಸುವ ಮೊಟ್ಟೆಯನ್ನು ರಾಜ್ಯ ಮಟ್ಟದಲ್ಲಿ ಕೆಟಿಪಿಪಿ ಕಾಯ್ದೆಯಡಿ ಟೆಂಡರ್‌ ಕರೆದು ಖರೀದಿಸಲು ಸರ್ಕಾರ ನಿರ್ಧರಿಸಿದೆ.

ಒಂದು ಮೊಟ್ಟೆಗೆ ₹6 ಮೀರದಂತೆ ಖರೀದಿಸಬೇಕು. ಇದಕ್ಕಾಗಿ ₹297.19 ಕೋಟಿ ಅನುದಾನ ಒದಗಿಸಲಾಗುತ್ತದೆ.

ಅಂಗನವಾಡಿಗಳಿಗೆ ಕಳಪೆ ಮೊಟ್ಟೆ ವಿತರಿಸುತ್ತಿರುವ ಬಗ್ಗೆ ಇತ್ತೀಚೆಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಸ್ಥಳೀಯವಾಗಿ ಖರೀದಿ ಮಾಡುತ್ತಿರುವುದರಿಂದಾಗಿ ಗುಣಮಟ್ಟದ ಮೊಟ್ಟೆ ಸಿಗುತ್ತಿಲ್ಲ ಎಂಬ ದೂರುಗಳಿದ್ದವು.

ನಿರ್ಣಯಗಳು

* ನಬಾರ್ಡ್‌ ಆರ್‌ಐಡಿಎಫ್‌–28 ಯೋಜನೆಯಡಿ ಕೃಷಿ ಮಾರುಕಟ್ಟೆ ಇಲಾಖೆಗೆ ಅನುಮೋದನೆ ಆಗಿರುವ ₹130.40 ಕೋಟಿಗಳ ಅನುದಾನದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ. ಎಪಿಎಂಸಿಗಳಲ್ಲಿ ಕಾಂಕ್ರಿಟ್‌ ರಸ್ತೆ, ಒಳಚರಂಡಿ, ಹರಾಜುಕಟ್ಟೆ, ಕಾಂಪೌಂಡ್‌, ಕ್ಯಾಂಟೀನ್‌ ಕಟ್ಟಡ, ವಾಣಿಜ್ಯ ಮಳಿಗೆಗಳು ಮತ್ತು ಗ್ರಾಮೀಣ ಗೋದಾಮುಗಳನ್ನು ನಿರ್ಮಿಸಲು ಈ ಅನುದಾನ ಬಳಸಲಾಗುವುದು.

* ಹಿಂದುಳಿದ ವರ್ಗಗಳ ಆಯೋಗಗಳ ಸಲಹೆ ಮತ್ತು ಹೈಕೋರ್ಟ್‌ ಆದೇಶದಂತೆ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯ ಪ್ರವರ್ಗ–3 ಎ ಕ್ರಮ ಸಂಖ್ಯೆ–2 ರಲ್ಲಿ ನಮೂದಾಗಿರುವ ಕೊಡಗರು ಎಂಬುದರ ಬದಲಾಗಿ ಕೊಡವ ಮತ್ತು ಕೊಡವರು ಎಂದು ಬದಲಿಸಲು ತೀರ್ಮಾನ.

ಕಲ್ಲುಗಣಿ: ₹6,105 ಕೋಟಿ ದಂಡ ಬಾಕಿ

ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ಮತ್ತು ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಂತೆ ಒತ್ತುವರಿ ಮಾಡಿ ಸಂಚಿತ ಆಡಿಟ್‌ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪಖನಿಜ ತೆಗೆದು ರಾಜಧನ ಪಾವತಿಸದೇ ಸಾಗಣೆ ಮಾಡಿದವರಿಗೆ ವಿಧಿಸಿರುವ ದಂಡವನ್ನು ಒಂದು ಬಾರಿ ತೀರುವಳಿ ಮೂಲಕ ಪಾವತಿಗೆ ಅವಕಾಶ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.

ಇದನ್ನು ಹೇಗೆ ಜಾರಿ ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಒಟ್ಟು ಎಂಟು ವರ್ಷಗಳಲ್ಲಿ ಹೆಚ್ಚುವರಿಯಾಗಿ ಉಪಖನಿಜ ತೆಗೆದು, ರಾಜಧನ ಪಾವತಿಸದೇ ಸಾಗಣೆ ಮಾಡಿದ್ದಕ್ಕಾಗಿ ವಿವಿಧ ಗಣಿಮಾಲೀಕರಿಗೆ ಒಟ್ಟು ₹6,105 ಕೋಟಿ ದಂಡ ವಿಧಿಸಲಾಗಿದೆ. ಅದರ ವಸೂಲಿ ಆಗಿಲ್ಲ. ಈಗ ವಸೂಲಿ ಮಾಡಲು ತೀರ್ಮಾನಿಸಲಾಗಿದೆ  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT