ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ನದಿಗಳ ಮಾಲಿನ್ಯ: ಕರ್ನಾಟಕಕ್ಕೆ ಎನ್‌ಜಿಟಿ ನೋಟಿಸ್‌

Published 26 ಫೆಬ್ರುವರಿ 2024, 15:25 IST
Last Updated 26 ಫೆಬ್ರುವರಿ 2024, 15:25 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಕೃಷ್ಣಾ, ಕಾವೇರಿ ಸೇರಿದಂತೆ 12 ನದಿಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿ ನೀರಿನ ಗುಣಮಟ್ಟ ಕಳಪೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. 

ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಪ್ರಧಾನ ಪೀಠದ ಮುಖ್ಯಸ್ಥ ಪ್ರಕಾಶ್‌ ಶ್ರೀವಾಸ್ತವ ಹಾಗೂ ಡಾ.ಎ.ಸೆಂಥಿಲ್‌ ವೇಲ್ ಅವರನ್ನು ಒಳಗೊಂಡ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ನೋಟಿಸ್‌ ನೀಡಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. 

ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಭದ್ರಾ, ಕಾವೇರಿ, ಕಬಿನಿ, ಕಾಗಿನ, ಕೃಷ್ಣಾ, ಶಿಂಷಾ, ಭೀಮಾ, ನೇತ್ರಾವತಿ ಹಾಗೂ ತುಂಗಾ ನದಿಗಳ ನೀರಿನ ಗುಣಮಟ್ಟದ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಈ ನದಿಗಳ ನೀರಿನ ಗುಣಮಟ್ಟ ಡಿ ದರ್ಜೆಯದ್ದು. ಕೇಂದ್ರ ಸರ್ಕಾರ ನೀರಿನ ಮೇಲ್ವಿಚಾರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ 38 ಕಡೆಗಳಲ್ಲಿ ನದಿ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. 19 ಕಡೆಗಳಲ್ಲಿ ನೀರಿನ ಗುಣಮಟ್ಟ ಕಳಪೆಯಾಗಿವುದು ಗೊತ್ತಾಗಿದೆ. ಜನಸಂಖ್ಯೆಯ ವ್ಯಾಪಕ ಬೆಳವಣಿಗೆ, ನಗರೀಕರಣದಿಂದ ಉಂಟಾದ ಭಾರಿ ಒತ್ತಡ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ವನ್ಯಜೀವಿಗಳ ಬಳಕೆ ಹಾಗೂ ಮೀನು ಸಾಕಣೆಗೆ ಮಾತ್ರ ಸೂಕ್ತವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ನದಿಗಳ ಪಕ್ಕದಲ್ಲಿ ಕೈಗಾರಿಕೆಗಳು ತಲೆ ಎತ್ತಿದ್ದು, ತ್ಯಾಜ್ಯ ನೀರನ್ನು ಸಂಸ್ಕರಿಸದೆ ನದಿಗಳಿಗೆ ಬಿಡಲಾಗುತ್ತಿದೆ. ಕೊಳಚೆ ನೀರಿನ ಸಂಸ್ಕರಣೆಯಲ್ಲಿ ಮಂಡಳಿ ಹಾಗೂ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಪೀಠ ಬೊಟ್ಟು ಮಾಡಿದೆ. 

ಪ್ರಕರಣವನ್ನು ಚೆನ್ನೈ ಪೀಠಕ್ಕೆ ವರ್ಗಾಯಿಸಲಾಗಿದೆ. ವಿಚಾರಣೆಯನ್ನು ಏಪ್ರಿಲ್‌ 8ಕ್ಕೆ ಮುಂದೂಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT