ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್ ಕೊರತೆ ನೀಗಿದ ವಿನಿಮಯ: ಜಾರ್ಜ್‌

Published 10 ಜೂನ್ 2024, 16:35 IST
Last Updated 10 ಜೂನ್ 2024, 16:35 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರಪ್ರದೇಶ ಮತ್ತು ಪಂಜಾಬ್‌ ರಾಜ್ಯಗಳಿಂದ ವಿದ್ಯುತ್‌ ವಿನಿಮಯ ಮಾಡಿಕೊಂಡಿದ್ದರಿಂದ ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ವಿದ್ಯುತ್‌ ಕೊರತೆ ಆಗಲಿಲ್ಲ ಮತ್ತು ಬೊಕ್ಕಸಕ್ಕೂ ಹೊರೆಯಾಗಲಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಇವೆರಡೂ ರಾಜ್ಯಗಳಿಂದ ಪಡೆದ ವಿದ್ಯುತ್‌ ಅನ್ನು ಇದೇ ಜೂ.16 ರ ಬಳಿಕ ಹಿಂತಿರುಗಿಸಲಾಗುವುದು. ಈ ವಿಧಾನ ಅನುಸರಿಸಿದ್ದರಿಂದ ವಿದ್ಯುತ್‌ ಖರೀದಿ ಅಗತ್ಯ ಕಡಿಮೆ ಆಗಿತ್ತು ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ಮಳೆ ಕೊರತೆ, ಜಲಾಶಯಗಳಲ್ಲಿ ನೀರಿನ ಕೊರತೆ ಮಧ್ಯೆಯೂ ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲದೆ, ರೈತರು, ವಿದ್ಯಾರ್ಥಿ ಸಮುದಾಯಕ್ಕೆ ಹೆಚ್ಚು ಸಮಸ್ಯೆ ಆಗದಂತೆ ಇಂಧನ ಇಲಾಖೆ ವಿದ್ಯುತ್‌ ಪೂರೈಕೆ ಮಾಡಿದೆ ಎಂದರು.

ಈ ಬಾರಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ವಿದ್ಯುತ್‌ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 200 ಕೋಟಿ ಯೂನಿಟ್ ವಿದ್ಯುತ್‌ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಏಪ್ರಿಲ್‌ನಲ್ಲಿ 240 ಕೋಟಿ ಯೂನಿಟ್‌ ವಿದ್ಯುತ್ ಉತ್ಪಾದನೆ ಮಾಡಿದ್ದು, ಇದು ದಾಖಲೆಯಾಗಿದೆ ಎಂದು ಜಾರ್ಜ್‌ ಹೇಳಿದರು.

ಆರ್‌ಟಿಪಿಎಸ್‌ ವಿದ್ಯುತ್‌ ಘಟಕಗಳಿಂದ ನಿಗದಿತ ಗುರಿ ಮೀರಿ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಆಗಿದೆ. ದಿನಕ್ಕೆ 210 ಮೆಗಾವಾಟ್ ಸಾಮರ್ಥ್ಯದ ಮೂರನೇ ವಿದ್ಯುತ್‌ ಘಟಕದಲ್ಲಿ ಏಪ್ರಿಲ್‌ 4 ರಂದು 216 ಮೆಗಾವಾಟ್‌ ಉತ್ಪಾದನೆ ಮಾಡಲಾಗಿದ್ದು, ಆ ಮೂಲಕ ಇತಿಹಾಸ ಬರೆಯಲಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಆರ್‌ಟಿಪಿಎಸ್‌ನ ಏಳು ವಿದ್ಯುತ್‌ ಘಟಕಗಳು ಶೇ 85 ರಷ್ಟು ವಿದ್ಯುತ್‌ ಉತ್ಫಾದಿಸಿವೆ ಎಂದು ಅವರು ತಿಳಿಸಿದರು.

ಅದೇ ರೀತಿ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ವೈಟಿಪಿಎಸ್‌) 2023– 24 ಹಣಕಾಸು ವರ್ಷದಲ್ಲಿ 630 ಕೋಟಿ ಯೂನಿಟ್‌ ವಿದ್ಯುತ್‌ ಉತ್ಪಾದಿಸಿದೆ. ಇದು ಈವರೆಗಿನ ಗರಿಷ್ಠ ಉತ್ಪಾದನೆ. ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ 600 ಕೋಟಿ ಗುರಿಯನ್ನು ವೈಟಿಪಿಎಸ್‌ ಮೀರಿದೆ. ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರ 820 ಕೋಟಿ ವಿದ್ಯುತ್‌ ಉತ್ಪಾದಿಸಿದೆ. ಸ್ಥಾವರ ಕಾರ್ಯಾರಂಭ ಮಾಡಿದ ನಂತರ ಸಾಧಿಸಿದ ಅತ್ಯಧಿಕ ಉತ್ಪಾದನೆ ದಾಖಲೆ ಇದಾಗಿದೆ ಎಂದು ಜಾರ್ಜ್‌ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT