ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮ ಆರೋಪ ಸಾಬೀತು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಆಯ್ಕೆ ಅಸಿಂಧು

Published 1 ಸೆಪ್ಟೆಂಬರ್ 2023, 9:45 IST
Last Updated 1 ಸೆಪ್ಟೆಂಬರ್ 2023, 9:45 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಒದಗಿಸಿದ್ದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಸದಸ್ಯ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

'ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು' ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹಾಗೂ ಹೈಕೋರ್ಟ್‌ ವಕೀಲ ಜಿ.ದೇವರಾಜೇ ಗೌಡ ಸಲ್ಲಿಸಿದ್ದ ಪ್ರತ್ಯೇಕ ಚುನಾವಣಾ ತರಕಾರು ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿ, ಕಾಯ್ದಿರಿಸಲಾಗಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು.

ಇದೇ ವೇಳೆ, ‘ನನ್ನನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಬೇಕು‘ ಎಂದು ಕೋರಿದ್ದ ಅರ್ಜಿದಾರ ಎ.ಮಂಜು ಅವರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದ್ದು, ‘ಎ.ಮಂಜು ಸಹಾ ಚುನಾವಣೆಯಲ್ಲಿ ಅಕ್ರಮ ನಡೆಸಿದ್ದು, ತಮ್ಮ ಆದಾಯ ಹಾಗೂ ತಮ್ಮ ಮೇಲಿರುವ ಕ್ರಿಮಿನಲ್‌ ಮೊಕದ್ದಮೆಗಳ ಕುರಿತಾಗಿ ಪ್ರಮಾಣ ಪತ್ರದಲ್ಲಿ ಮರೆಮಾಚಿದ್ದಾರೆ. ಹೀಗಾಗಿ, ಅವರನ್ನು ಪ್ರಜ್ವಲ್‌ ರೇವಣ್ಣ ಬದಲಿಗೆ ಊರ್ಜಿತ ಎಂದು ಪರಿಗಣಿಸಲು ಜನಪ್ರತಿನಿಧಿ ಕಾಯ್ದೆ ಕಲಂ 98 (ಸಿ) ಅನುಸಾರ ಸಾಧ್ಯವಿಲ್ಲ. ದುರದೃಷ್ಟ ಎಂದರೆ ಎ.ಮಂಜು ಈ ಅರ್ಜಿ ಸಲ್ಲಿಸಿದಾಗ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಅಧಿಕಾರದ ದಾಹ ಇರುವ ಇಂತಹ ವ್ಯಕ್ತಿಯನ್ನು ವಿಜೇತ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ‘ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

‘ಸಂಸತ್ ಸದಸ್ಯ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿ ಮುಂದಿನ ಕ್ರಮ ಜರುಗಿಸಲು ತೀರ್ಪಿನ ಪ್ರತಿಯನ್ನು ಚುನಾವಣಾ ಆಯೋಗ ಮತ್ತು ಲೋಕಸಭಾ ಸ್ಪೀಕರ್‌ ಅವರಿಗೆ ಕಳುಹಿಸಿಕೊಡಬೇಕು. ಈ ದಿಸೆಯಲ್ಲಿ ಚುನಾವಣಾ ಅರ್ಜಿಗಳ ಪ್ರಕ್ರಿಯೆಯ ಅಧಿನಿಯಮ 19ರ ಅನ್ವಯ ಕ್ರಮಕ್ಕೆ ಮುಂದಾಗಬೇಕು‘ ಎಂದು ಹೈಕೋರ್ಟ್‌ ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ.

ಎಚ್‌.ಡಿ.ರೇವಣ್ಣಗೆ ನೋಟಿಸ್‌: ‘ಪ್ರಜ್ವಲ್ ರೇವಣ್ಣ ಅವರ ತಂದೆ ಎಚ್.ಡಿ. ರೇವಣ್ಣ ಅಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕಾವೇರಿ ನೀರಾವರಿ ನಿಗಮಕ್ಕೆ ಹಂಚಿಕೆಯಾಗಿದ್ದ ಅನುದಾನವನ್ನು ಬೇರೆಡೆ ವರ್ಗಾಯಿಸಿ ಅಕ್ರಮ ಎಸಗಿದ್ದಾರೆ. ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಲಾಭ ಮಾಡಿಕೊಡಲು ಎಚ್.ಡಿ ರೇವಣ್ಣ ಮತ್ತು ಅವರ ಸಹೋದರರೂ ಆದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಕೂಡಾ ಅಕ್ರಮ ಎಸಗಿದ್ದಾರೆ. ಹೀಗಾಗಿ, ಇವರ ವಿರುದ್ಧವೂ ಏಕೆ ಕ್ರಮ ಜರುಗಿಸಬಾರದು ಎಂಬುದರ ವಿವರಣೆ ಪಡೆಯಲು ಅವರು ಕೋರ್ಟ್‌ಗೆ ಹಾಜರಾಗಬೇಕಿದೆ‘ ಎಂದಿರುವ ನ್ಯಾಯಪೀಠ, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಕಾಯ್ದೆ–1951ರ ಕಲಂ 99 (1) (2)ರ ಅಡಿ ಎಚ್.ಡಿ. ರೇವಣ್ಣ ಮತ್ತು ಸೂರಜ್ ರೇವಣ್ಣ ಅವರಿಗೂ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ಮುಖ್ಯಾಂಶಗಳು

* ಪ್ರಜ್ವಲ್‌ ರೇವಣ್ಣ ಅವರು ಮೆಸರ್ಸ್ ಅಧಿಕಾರ್‌ ವೆಂಚರ್ಸ್ ಎಲ್‌ಎಲ್‌ಪಿ ಹಾಗೂ ದ್ರೋಣ ವರ್ಕ್‌ಫೋರ್ಸ್ ಎಲ್‌ಎಲ್‌ಪಿ ಸಂಸ್ಥೆಗಳಲ್ಲಿನ ಪಾಲುದಾರಿಕೆ ಮತ್ತು ಮಾಲಿಕತ್ವದ ವಿವರಗಳನ್ನು ಬಹಿರಂಗಪಡಿಸಿಲ್ಲ.

* ಚುನಾವಣೆಗೆ ಸ್ಪರ್ಧಿಸುವಾಗ ಅಂದಿನ ದಿನಕ್ಕೆ ಅನುಗುಣವಾಗಿ ಕಳೆದ ಐದು ವರ್ಷಗಳ ಆದಾಯ ತೆರಿಗೆ ಪಾವತಿಯ ಮಾಹಿತಿ ಸಲ್ಲಿಸಬೇಕು. ಆದರೆ ಪ್ರಜ್ವಲ್ ರೇವಣ್ಣ 2008ರಿಂದ 2018ರ ಅವಧಿಯಲ್ಲಿ ದೊಡ್ಡ ಮೊತ್ತದ ಆದಾಯ ಮತ್ತು ಆಸ್ತಿ ಸಂಪಾದಿಸಿದ್ದರೂ 2018-19ನೇ ಸಾಲಿನ ಆದಾಯ ತೆರಿಗೆ ಮಾಹಿತಿ ಮಾತ್ರ ಒದಗಿಸಿದ್ದಾರೆ.

* ಸ್ಥಿರ ಮತ್ತು ಚರಾಸ್ತಿಗಳ ಕುರಿತು ಅಸಮರ್ಪಕ ಮಾಹಿತಿ ನೀಡಿದ್ದು ಅನೇಕ ಅಂಶಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ ಮರೆ ಮಾಚಲಾಗಿದೆ.

* ತಂದೆ ಎಚ್.ಡಿ. ರೇವಣ್ಣ ಅವರಿಂದ ದೊಡ್ಡ ಮೊತ್ತದ ಅಂದರೆ ₹ 1.26 ಕೋಟಿ ಸಾಲ ಪಡೆದಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಆದರೆ ಎಚ್.ಡಿ.ರೇವಣ್ಣ ಲೋಕಾಯುಕ್ತಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಮಗನಿಗೆ ₹ 47.36 ಲಕ್ಷ ಸಾಲ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

* ಪ್ರಜ್ವಲ್ ರೇವಣ್ಣ ತಮ್ಮ ವ್ಯಾಪಾರದ ಆದಾಯ ₹ 7.48 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಆದಾಯದ ಮೂಲ ಯಾವುದು ಎಂಬುದನ್ನು ಬಹಿರಂಗಪಡಿಸಿಲ್ಲ.

* 2019ರ ಮಾರ್ಚ್‌ 22ಕ್ಕೆ ಅನ್ವಯವಾಗುವಂತೆ ಬ್ಯಾಂಕ್‌ ಬ್ಯಾಲೆನ್ಸ್‌ ₹ 5.78 ಲಕ್ಷ ಎಂದು ಪ್ರಮಾಣ ಪತ್ರದಲ್ಲಿ ತೋರಿಸಲಾಗಿತ್ತು. ಆದರೆ ವಾಸ್ತವದಲ್ಲಿ ಅದು ₹ 49.09 ಲಕ್ಷ ಆಗಿತ್ತು.

* ರಾಜ್ಯಸಭಾ ಸದಸ್ಯರಾಗಿದ್ದ ಕುಪೇಂದ್ರ ರೆಡ್ಡಿ ಅವರಿಂದ ಪಡೆದುಕೊಂಡಿದ್ದ ₹ 50 ಲಕ್ಷದ ಮಾಹಿತಿಯನ್ನೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ.

ಆರೋಪಗಳೇನಿತ್ತು?

ಲೋಕಸಭೆಗೆ 2019ರ ಏಪ್ರಿಲ್‌ 18ರಂದು ಚುನಾವಣೆ ನಡೆದು ಮೇ 23ರಂದು ಫಲಿತಾಂಶ ಪ್ರಕಟವಾಗಿತ್ತು. ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಎರಡನೇ ಸ್ಥಾನ ಗಳಿಸಿದ್ದರು.

‘ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಅಕ್ರಮಗಳನ್ನು ನಡೆಸಿ ಜಯಗಳಿಸಿದ್ದಾರೆ. ಹೀಗಾಗಿ ಅವರ ಲೋಕಸಭೆ ಸದಸ್ಯತ್ವವನ್ನು ಅನೂರ್ಜಿತಗೊಳಿಸಬೇಕು’ ಎಂದು ಕೋರಿ ಪರಾಜಿತ ಅಭ್ಯರ್ಥಿ ಎ.ಮಂಜು ಮತ್ತು ಕಾಂಗ್ರೆಸ್ ಮುಖಂಡರಾಗಿದ್ದ ನಂತರ ಬಿಜೆಪಿಗೆ ಸೇರಿದ್ದ ಜಿ.ದೇವರಾಜೇ ಗೌಡ 2019ರಲ್ಲಿ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು.

ನೇಸರ್ಗಿ ಪ್ರತಿಕ್ರಿಯೆ: ’ಹೈಕೋರ್ಟ್‌ನ ಈ ತೀರ್ಪಿನಿಂದ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಮತ್ತು ಎ.ಮಂಜು ಅಕ್ರಮ ನಡೆಸಿರುವುದು ಸಾಬೀತಾಗಿದೆ. ಇದರಿಂದ ಪ್ರಜ್ವಲ್ ರೇವಣ್ಣ ಅನರ್ಹಗೊಳ್ಳಲಿದ್ದಾರೆ. ಎ.ಮಂಜು ಕೂಡಾ ಅಕ್ರಮ ಎಸಗಿರುವುದರಿಂದ ಚುನಾವಣೆಯಲ್ಲಿ ಆರು ವರ್ಷ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಅವರಿಗೂ ಅನ್ವಯಿಸಲಿದೆ. ಹಾಲಿ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಎ.ಮಂಜು ಆಯ್ಕೆಯೂ ರದ್ದಾಗಲಿದೆ‘ ಎಂದು ಜಿ.ದೇವರಾಜೇ ಗೌಡ ಪರ ವಾದ ಮಂಡಿಸಿದ್ದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT