ಬೆಂಗಳೂರು: ‘ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಗೋಪ್ಯವಾಗಿ ವಿಚಾರಣೆ ನಡೆಸಬೇಕು’ ಎಂಬ ರಾಜ್ಯ ಪ್ರಾಸಿಕ್ಯೂಷನ್ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಮತ್ತು ನಗರದ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರಜ್ವಲ್ ಪರ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರು, ‘ಈ ಹಿಂದಿನ ವಿಚಾರಣೆ ವೇಳೆಯಲ್ಲಿ ಪ್ರಕರಣದ ಗೋಪ್ಯ ವಿಚಾರಣೆಗೆ ಮನವಿ ಮಾಡಲಾಗಿತ್ತು’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಪ್ರತಿದಿನವೂ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿನ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಹೀಗಿರುವಾಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹೊಸದೇನಿದೆ’ ಎಂದು ಪ್ರಶ್ನಿಸಿತಲ್ಲದೆ, ‘ಗೋಪ್ಯ ವಿಚಾರಣೆ ಏನಿಲ್ಲ. ಆದರೆ, ವಿಚಾರಣೆ ವೇಳೆ ಸಂತ್ರಸ್ತೆಯರ ಹೆಸರು ಮತ್ತು ಅಶ್ಲೀಲತೆ ಒಳಗೊಂಡ ಅಂಶಗಳನ್ನು ವಕೀಲರು ಓದಬಾರದು. ಅದನ್ನು ನನಗೆ ತಿಳಿಸಿದರೆ ನಾನೇ ಓದಿಕೊಳ್ಳುತ್ತೇನೆ’ ಎಂದರು.
ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಹಿರಿಯ ವಕೀಲ ರವಿವರ್ಮ ಕುಮಾರ್, ‘ಗೋಪ್ಯ ವಿಚಾರಣೆಯ ಕುರಿತಾದ ಮನವಿಯನ್ನು ನ್ಯಾಯಪೀಠದ ವಿವೇಚನೆಗೇ ಬಿಡಲಾಗುವುದು’ ಎಂದರು. ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.