ಪಕ್ಷದ ಎರಡನೇ ಹಂತದ ಶುದ್ದೀಕರಣ: ಡಿವಿಎಸ್
ಪಕ್ಷದಲ್ಲಿ ಮೊದಲ ಹಂತದ ಶುದ್ದೀಕರಣ ಯಶಸ್ವಿಯಾಗಿದೆ. ಅಶಿಸ್ತಿನಿಂದ ವರ್ತಿಸಿದ ಹಲವರನ್ನು ಹೊರಹಾಕಲಾಗಿದೆ. ಇನ್ನಷ್ಟು ಜನರನ್ನು ಹೊರಹಾಕಿದರೆ ಪಕ್ಷ ಉಳಿಯುವುದು ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ಎಲ್ಲರನ್ನೂ ಸರಿ ಮಾಡುವ ಉದ್ದೇಶದಿಂದ ಎರಡನೇ ಹಂತದ ಶುದ್ದೀಕರಣ ಪ್ರಕ್ರಿಯೆ ಆರಂಭವಾಗಿದೆ. ಎಲ್ಲೆಲ್ಲಿ ಗುಂಪುಗಾರಿಕೆ ಮತ್ತು ಸಮಸ್ಯೆಗಳು ಇವೆಯೋ ಅಂತಹ ಜಿಲ್ಲೆಗಳ ನಾಯಕರನ್ನು ಕರೆಸಿ ಮಾತನಾಡಿ ಸಂಧಾನ ಮಾಡಲಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬ ಚಿಂತನೆ ಆರಂಭವಾಗಿದೆ. ಎಲ್ಲ ಸರಿಹೋಗಲು ಸ್ವಲ್ಪ ದಿನ ಬೇಕು ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು. ‘ಪಕ್ಷವನ್ನು ಸರಿಪಡಿಸುವ ದಿಸೆಯಲ್ಲಿ ಸಕಾರಾತ್ಮಕ ಸಂದೇಶ ಸಿಕ್ಕಿದೆ. ಪಕ್ಷಕ್ಕೆ ಬದ್ಧರಾಗಿ ಇರುವವರು ಸೇರಿ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.