ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಬೆಲೆ ಮಾಹಿತಿ ನೀಡಿದ ಡ್ಯಾಷ್‌ಬೋರ್ಡ್‌, ಆಹಾರ ಧಾನ್ಯ ಬೆಲೆ ಕುಸಿತ ಮುನ್ಸೂಚನೆ

ಕೃಷಿ ಬೆಲೆ ಆಯೋಗದಿಂದ ತಂತ್ರಜ್ಞಾನ ಅಭಿವೃದ್ಧಿ
Last Updated 20 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು, ಸೂಕ್ತ ಬೆಲೆ ಸಿಗದೇ ರಸ್ತೆಯಲ್ಲಿ ಚೆಲ್ಲಿ ಹೋಗುವ ಪ್ರಮೇಯ ಇನ್ನು ಮುಂದೆ ಇಲ್ಲ.

ರೈತರ ಈ ಕಣ್ಣಿಯ ಅಧ್ಯಾಯಕ್ಕೆ ಮುಕ್ತಾಯ ಹಾಡುವ ತಂತ್ರಜ್ಞಾನವೊಂದನ್ನು ಕೃಷಿ ಬೆಲೆ ಆಯೋಗ ಅಭಿವೃದ್ಧಿ ಪಡಿಸಿದೆ.

ಕೃಷಿ ಧಾರಣೆ ವಿಶ್ಲೇಷಣ (ಕೃಪ) ಡ್ಯಾಷ್‌ಬೋರ್ಡ್‌ ಎಂಬ ಹೆಸರಿನ ಈ ತಂತ್ರಜ್ಞಾನ ದತ್ತಾಂಶ ವಿಶ್ಲೇಷಣೆ ನಡೆಸಿ ನೀಡಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 13 ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗಿದೆ.ತಕ್ಷಣವೇ ಸರ್ಕಾರ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಕೃಷಿ ಬೆಲೆ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

‘ಕೃಪ’ ಹೇಗೆ ಕಾರ್ಯ ನಿರ್ವಹಿಸುತ್ತದೆ: ಜುಲೈ ಕೊನೆಯಲ್ಲಿ ಚಾಲನೆಗೊಂಡ ‘ಕೃಪ’ ಡ್ಯಾಷ್‌ಬೋರ್ಡ್‌ ರಾಜ್ಯದ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಆವಕ, ಮಾರುಕಟ್ಟೆ ದರ, ಹಾಲಿ ಇರುವ ಬೆಂಬಲ ಬೆಲೆ ಇತ್ಯಾದಿಗಳನ್ನು ಮಾಹಿತಿ ಕಲೆ ಹಾಕುತ್ತದೆ. ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಧಾರಣೆ ಕುಸಿಯುತ್ತಿದೆಯೇ ಅಥವಾ ಸ್ಥಿರವಾಗಿ ಇದೆಯೇ ಎಂಬುದರ ನಿಖರ ಮಾಹಿತಿ ನೀಡುತ್ತದೆ.

ರಾಜ್ಯದ ಎಲ್ಲ ಎಪಿಎಂಸಿಗಳ ಸಂಪರ್ಕ ಹೊಂದಿರುವ ‘ಕೃಪ’ 29 ಬೆಳೆಗಳ ಬಗ್ಗೆ ದಿನ ನಿತ್ಯ ಮಾಹಿತಿ ನೀಡುತ್ತದೆ. ಮಾರುಕಟ್ಟೆಯಲ್ಲಿ ಈ ಕೃಷಿ ಉತ್ಪನ್ನಗಳ ದೈನಂದಿನ ಟ್ರೆಂಡ್‌ ಹೇಗಿದೆ ಎಂಬ ಅಂಕಿ–ಅಂಶ ಸಹಿತ ವಿಶ್ಲೇಷಣೆಯನ್ನು ಸರ್ಕಾರ ಪಡೆಯಬಹುದು. ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಆವಕ ಪ್ರಮಾಣ, ಹಾಲಿ ದರ ಮತ್ತು ಕೇಂದ್ರ ಪ್ರಕಟಿಸಿರುವ ಬೆಂಬಲ ಬೆಲೆಗೂ ಮಾರುಕಟ್ಟೆಯಲ್ಲಿರುವ ದರದ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ. ಇದರ ಆಧಾರದಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆಯನ್ನು ನಿರ್ಧರಿಸಬಹುದಾಗಿದೆ.

ರೈತರಿಗೆ ಹೇಗೆ ಅನುಕೂಲ:ಕೃಷಿ ಬೆಲೆ ಆಯೋಗವು ಕೃಷಿ ಇಲಾಖೆ, ರಾಜ್ಯದ 5 ಕೃಷಿ ವಿಶ್ವವಿದ್ಯಾಲಯಗಳಿಗೆ ಡ್ಯಾಷ್‌ ಬೋರ್ಡ್‌ ಮಾಹಿತಿ ಪಡೆಯಲು ಪಾಸ್‌ವರ್ಡ್‌ ನೀಡುತ್ತದೆ. ಕೃಷಿ ಇಲಾಖೆ ನಿರಂತರವಾಗಿ ಇದರ ಮೇಲೆ ಗಮನ ಇಡುವುದರಿಂದ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಆಗುವ ವ್ಯತ್ಯಾಸವನ್ನು ತಕ್ಷಣವೇ ತಿಳಿದುಕೊಳ್ಳಬಹುದು.

ಕೃಷಿ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಕೃಷಿ ಉತ್ಪನ್ನವನ್ನು ಮಾರಾಟಕ್ಕೆ ಒಯ್ಯಬಹುದೆ, ಬೇಡವೇ ಎಂಬ ಬಗ್ಗೆ ಸೂಕ್ತ ನಿರ್ಧಾರವನ್ನು ರೈತರು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್‌.ಪ್ರಕಾಶ್‌ ಕಮ್ಮರಡಿ.

ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಸರ್ಕಾರಕ್ಕೆ ಬೆಂಬಲ ಬೆಲೆ ನಿರ್ಧರಿಸಲು ಇದು ಅತ್ಯಂತ ಉಪಯುಕ್ತ ಸಾಧನ. ರೈತರು ತಮ್ಮ ಉತ್ಪನ್ನವನ್ನು ಬೀದಿಗೆ ತಂದು ಎಸೆದು ಪ್ರತಿಭಟನೆ ಮಾಡುವುದಕ್ಕೆ ಮೊದಲೇ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಂಡು ರೈತರ ನೆರವಿಗೆ ಧಾವಿಸಬಹುದು ಎನ್ನುವುದು ಅವರ ಅಭಿಪ್ರಾಯ.

ಅನ್ವಿತಾ ಎಂಬ ಕಂಪನಿ ಜತೆ ಸೇರಿ ಕೃಷಿ ಬೆಲೆ ಆಯೋಗ, ಡೇರಿ ಸೈನ್ಸ್‌ ಕಾಲೇಜಿನ ಡೇರಿ ಎಕನಾಮಿಕ್ಸ್‌ ವಿಭಾಗ ಜಂಟಿಯಾಗಿ ‘ಅರಿಮಾ’ ಎಂಬ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿವೆ.

ಬೆಲೆ ಕುಸಿತಗೊಂಡ ಕೃಷಿ ಉತ್ಪನ್ನಗಳು

ಭತ್ತ, ಹೈಬ್ರೀಡ್‌ ಜೋಳ, ಬಿಳಿ ಜೋಳ, ಸಜ್ಜೆ, ರಾಗಿ, ಮುಸುಕಿನ ಜೋಳ, ತೊಗರಿ, ಹೆಸರು, ಉದ್ದು, ನೆಲಗಡಲೆ, ಸೂರ್ಯಕಾಂತಿ, ಸೋಯಾ ಅವರೆ ಮತ್ತು ಹತ್ತಿ.

ಮಾರುಕಟ್ಟೆಗೆ ಆವಕ ಅಧಿಕವಾಗಿರುವುದರಿಂದ ಜೋಳ, ಮುಸುಕಿನ ಜೋಳ, ಶೇಂಗಾ ಮುಂತಾದ ಉತ್ಪನ್ನಗಳ ಧಾರಣೆ ಸಹಜವಾಗಿ ಇಳಿಕೆಯಾಗಿದೆ. ಅಷ್ಟೇ ಅಲ್ಲ, ಸಜ್ಜೆ, ರಾಗಿ ಮತ್ತು ಉದ್ದಿನ ಧಾರಣೆಗಳ ಆವಕ ಕಳೆದ ಸಾಲಿಗಿಂತಲೂ ಕಡಿಮೆ ಆಗಿದ್ದರೂ ಬೆಲೆಯಲ್ಲಿ ಇಳಿಕೆಯಾಗಿರುವುದು ಗಮನಾರ್ಹ.

ಕಳೆದ ಸಾಲಿನ ಏಪ್ರಿಲ್‌ನಿಂದ ಆಗಸ್ಟ್‌ ಎರಡನೇ ವಾರಾಂತ್ಯದ ಅವಧಿಗೆ ಹೋಲಿಸಿದರೆ, ಈ ಸಾಲಿನಲ್ಲಿ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಬಹುತೇಕ ಬೆಳೆಗಳ ಆವಕ ಅಧಿಕವಾಗಿರುತ್ತದೆ. ಭತ್ತ ಹಾಗೂ ಸೋಯಾ ಅವರೆ ಹೊರತಾಗಿ ಇತರೆ ಬೆಳೆಗಳ ಮಾದರಿ ಧಾರಣೆ ಬೆಂಬಲ ಬೆಲೆಗಿಂತ ಕೆಳಮಟ್ಟದಲ್ಲಿದೆ. ಈ ಎಲ್ಲ ಬೆಳೆಗಳ ಮಾರುಕಟ್ಟೆ ಧಾರಣೆ ಬೆಂಬಲ ಬೆಲೆಗಿಂತಲೂ ಶೇ 26 ರಷ್ಟು ಕಡಿಮೆ ಇದೆ.

ಮೈಕ್ರೊಸಾಫ್ಟ್‌, ಐಬಿಎಂ ಆಸಕ್ತಿ

‘ಕೃಪ’ ಸಾಫ್ಟ್‌ವೇರ್‌ ಬಗ್ಗೆ ಮೈಕ್ರೊಸಾಫ್ಟ್‌ ಮತ್ತು ಐಬಿಎಂ ಆಸಕ್ತಿ ತಳೆದಿದ್ದು, ಇದರಲ್ಲಿ ಇನ್ನಷ್ಟು ಮಾಹಿತಿಗಳ ವಿಭಾಗಗಳನ್ನು ಸೇರಿಸಿ ಅಭಿವೃದ್ಧಿಪಡಿಸಲಿದೆ. ಇದಕ್ಕೆ ಬೆಲೆ ಆಯೋಗ ಸಹಕಾರ ನೀಡಲಿದೆ.

ಮುಖ್ಯಾಂಶಗಳು
* ಬೆಲೆ ಕುಸಿತದ ಮಾಹಿತಿ ಮೊದಲೇ ತಿಳಿಯಬಹುದು

* ರೈತರಿಗೆ ಮಾಹಿತಿ ನೀಡಿ, ಕೃಷಿ ಉತ್ಪನ್ನಗಳನ್ನು ರಸ್ತೆಗೆ ಸುರಿಯುವುದನ್ನು ತಡೆಯಬಹುದು

* ಕೃಪ ಡ್ಯಾಷ್‌ಬೋರ್ಡ್‌ಗೆ ಜುಲೈನಲ್ಲಿ ಚಾಲನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT