ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡೇರಿಯಾ ವಿಚಾರಣೆಗೆ ಇನ್ನೂ ಸಿಗದ ಅನುಮತಿ!

ಜಂತಕಲ್‌ ಅಕ್ರಮ ಗಣಿಗಾರಿಕೆ: ಮುಖ್ಯಮಂತ್ರಿ ವಿರುದ್ಧದ ತನಿಖೆಯೂ ಪೂರ್ಣ
Last Updated 8 ಅಕ್ಟೋಬರ್ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೊರಳಿಗೂ ಸುತ್ತಿಕೊಂಡಿರುವ ‘ಜಂತಕಲ್‌ ಎಂಟರ್‌ಪ್ರೈಸಸ್‌’ (ಜೆಇ) ಹಾಗೂ ‘ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌’ (ಎಸ್‌ಎಸ್‌ವಿಎಂ) ಕಂಪನಿಗಳ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಗಂಗಾರಾಂ ಬಡೇರಿಯಾ ಸೇರಿದಂತೆ ಕೆಲವು ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ.

ಈ ಪ್ರಕರಣದಲ್ಲಿ ಕುಮಾರಸ್ವಾಮಿ ಪಾತ್ರ ಕುರಿತು ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌, 2017ರ ಮಾರ್ಚ್‌ನಲ್ಲಿ ಎಸ್‌ಐಟಿಗೆ ಸೂಚಿಸಿತ್ತು. ತನಿಖೆ ಮುಗಿಸಿರುವ ಎಸ್‌ಐಟಿ, ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ವರದಿ ಸಲ್ಲಿಸಿದೆ. ವರದಿಯನ್ನು ಗೋಪ್ಯವಾಗಿ ಇಡಲಾಗಿದೆ. ಪ್ರಕರಣ ಇದೇ 11ರಂದು ವಿಚಾರಣೆಗೆ ಬರುತ್ತಿರುವುದರಿಂದ ಎಸ್‌ಐಟಿ ಆತಂಕಕ್ಕೆ ಒಳಗಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹಿರೇಕಂದವಾಡಿ ಮತ್ತು ತಣಿಗೆಹಳ್ಳಿಯಲ್ಲಿ ವಿನೋದ್‌ ಗೋಯಲ್‌ ಎಂಬುವರಿಗೆನಿಯಮ ಮೀರಿ ಒಂದು ಲಕ್ಷ ಟನ್‌ ಅದಿರು ಸಾಗಣೆ ಮಾಡಲು ‍ಪರವಾನಗಿ ನೀಡಿದ ಆರೋಪಕ್ಕೆ ಒಳಗಾಗಿರುವ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ (ಆಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ) ಅವರನ್ನು ವಿಚಾರಣೆಗೊಳ
ಪಡಿಸಲು ಒಪ್ಪಿಗೆ ನೀಡುವಂತೆ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ಐಟಿ) ವರ್ಷದ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದೆ.

ಅಲ್ಲದೆ, ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ಎನ್‌ಇಬಿ ವಲಯದಲ್ಲಿ ‘ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌’ ಕಂಪನಿಗೆ 550 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ವಿನೋದ್‌ ಗೋಯಲ್‌ ಅವರಿಗೆ ಪರವಾನಗಿ ನೀಡಿದ ಪ್ರಕರಣದಲ್ಲೂ ಕೆಲವು ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ಕೇಳಲಾಗಿದೆ. (ಪರವಾನಗಿ ನವೀಕರಿಸಿದ ಸಮಯದಲ್ಲಿ ಇಲಾಖೆ ನಿರ್ದೇಶಕರಾಗಿದ್ದ ಕೆ.ಎಸ್‌. ಪ್ರಭಾಕರ್‌ ನಿವೃತ್ತಿ ಹೊಂದಿದ್ದಾರೆ).

ಎಸ್‌ಐಟಿ ಬರೆದಿರುವ ಪತ್ರವು ಸಿಬ್ಬಂದಿ ಆಡಳಿತ ಮತ್ತು ಸುಧಾರಣೆ ಇಲಾಖೆಗೆ (ಡಿಪಿಎಆರ್‌) ತಲುಪಿದೆ. ಆನಂತರ ಅದು ಏನಾಯಿತು, ಎಲ್ಲಿ ಹೋಯಿತು ಎಂದು ಯಾರೂ ಬಾಯಿ ಬಿಡುತ್ತಿಲ್ಲ.

‘ಎಸ್‌ಐಟಿ ಪತ್ರವನ್ನು ನಾನು ನೋಡೇ ಇಲ್ಲ’ ಎಂದು ಡಿಪಿಎಆರ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳೂ ಇಂತಹದೇ ಉತ್ತರ ಕೊಟ್ಟರು.

ಎರಡೂ ಪ್ರಕರಣಗಳಲ್ಲಿ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹೇರಿದ ಆರೋಪ ಕುಮಾರಸ್ವಾಮಿ ಅವರ ಮೇಲಿದೆ. ‘ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಮತ್ತು ಖುದ್ದು ಮುಖ್ಯಮಂತ್ರಿಯೇ ನನಗೆ ದೂರವಾಣಿ ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ. ಎರಡು ಗಂಟೆಯೊಳಗೆ ಅದಿರು ಸಾಗಣೆ ಅನುಮತಿ ನೀಡಲು ಗಡುವು ನೀಡಿದ್ದಾರೆ. ಸಸ್ಪೆಂಡ್‌ ಆಗಿರುವ ಮಹಾರಾಷ್ಟ್ರದ ಪೊಲೀಸ್‌ ಅಧಿಕಾರಿ ದಯಾ ನಾಯಕ್‌, ವಿಜಯ ಕುಮಾರ್‌,ದರ್ಶನ್‌ ಗೋಯಲ್‌ ಹಾಗೂ ವಿನೋದ್‌ ಗೋಯಲ್‌ ಅವರೂ ಒತ್ತಡ ಹೇರುತ್ತಿದ್ದಾರೆ. ಈ ಒತ್ತಡ ತಡೆಯುವುದು ಕಷ್ಟವಾಗಿದೆ’ ಎಂದು ಬಡೇರಿಯಾ ಟಿಪ್ಪಣಿಯನ್ನೂ ಬರೆದಿದ್ದರು.

ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸಿದ ಆಗಿನ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಸರ್ಕಾರಕ್ಕೆ ಸಲ್ಲಿಸಿರುವ ಎರಡನೇ ಭಾಗದ ವರದಿಯ 252, 253ನೇ ಪುಟಗಳಲ್ಲಿ ಈ ವಿವರಗಳು ಉಲ್ಲೇಖವಾಗಿವೆ. ಎಸ್‌ಎಸ್‌ವಿಎಂ ಕಂಪನಿಗೆ ಗಣಿಗಾರಿಕೆ ಪರವಾನಗಿ ನೀಡಿದ ಪ್ರಕರಣದಲ್ಲೂ ಮುಖ್ಯಮಂತ್ರಿ ಕಚೇರಿ ಒಂದೇ ದಿನದಲ್ಲಿ (2007ರ ಅ.5) ಹೇಗೆ ತೀರ್ಮಾನ ಮಾಡಿತು ಎಂದೂ ವಿವರಿಸಲಾಗಿದೆ.

ಬಡೇರಿಯಾ ಮತ್ತಿತರ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ಕೊಡುವಂತೆ ಕೇಳಿ ಎಸ್ಐಟಿಗೆ ಬರೆದಿರುವ ಪತ್ರದಲ್ಲಿ, ಆರೋಪಗಳನ್ನು ಪಟ್ಟಿ ಮಾಡಲಾಗಿದೆ. ಅಧಿಕಾರಿ ಪುತ್ರನ ಬ್ಯಾಂಕ್‌ ಖಾತೆಗೆ ₹ 20 ಲಕ್ಷ ಸಂದಾಯವಾಗಿರುವ ಬಗ್ಗೆಯೂ ವಿವರಿಸಲಾಗಿದೆ. ‘ಡಿಪಿಎಆರ್‌ ಒಪ್ಪಿಗೆ ನೀಡಿದರೆ ಕುಮಾರಸ್ವಾಮಿ ಅವರಿಗೂ ಸಮಸ್ಯೆ ಎದುರಾಗಬಹುದು. ಈ ಕಾರಣಕ್ಕೆ ವಿಚಾರಣೆಗೆ ಅನುಮತಿ ನೀಡಲು ವಿಳಂಬವಾಗುತ್ತಿರಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ. ಕೃಷ್ಣ , ಧರ್ಮಸಿಂಗ್‌ ಅವರೂ ಆರೋಪಿಗಳಾಗಿದ್ದಾರೆ. ಕೃಷ್ಣ ವಿರುದ್ಧದ ತನಿಖೆಗೆ ಕೋರ್ಟ್‌ ತಡೆಯಾಜ್ಞೆ ಇದೆ. ಧರ್ಮಸಿಂಗ್‌ ನಿಧನ ಹೊಂದಿದ್ದಾರೆ.

‘ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಷಯ’

ಜಂತಕಲ್‌ ಮತ್ತು ಎಸ್‌ಎಸ್‌ವಿಎಂ ಅಕ್ರಮ ಗಣಿಗಾರಿಕೆ ಕುರಿತು ಕುಮಾರಸ್ವಾಮಿ ಅವರ ಮೇಲೆ ಕ್ರಮ ಕೈಗೊಳ್ಳುವ ಕುರಿತು ನ್ಯಾ. ಸಂತೋಷ್ ಹೆಗ್ಡೆ ಯಾವುದೇ ಶಿಫಾರಸು ಮಾಡಿಲ್ಲ.

ವರದಿ ಸಲ್ಲಿಸುವ ಸಮಯದಲ್ಲಿ ಕುಮಾರಸ್ವಾಮಿ ಯಾವುದೇ ಅಧಿಕಾರ ಅಥವಾ ಸ್ಥಾನಮಾನ ಹೊಂದಿಲ್ಲದೆ ಇರುವುದರಿಂದ ಈ ಸಂಬಂಧ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು ಎಂ‌ದೂ ವರದಿಯಲ್ಲಿ ತಿಳಿಸಿದ್ದಾರೆ. 2011ರ ಜುಲೈ 27ರಂದು ಸಂತೋಷ್‌ ಹೆಗ್ಡೆ ಸರ್ಕಾರಕ್ಕೆ ಎರಡನೇ ವರದಿ ಸಲ್ಲಿಸಿದ್ದರು.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಿರುವುದರಿಂದ ಈ ವರದಿಗೆ ಮಹತ್ವ ಬಂದಿದೆ.

*ಗಂಗಾರಾಂ ಬಡೇರಿಯಾ ವಿರುದ್ಧ ವಿಚಾರಣೆಗೆ ಅನುಮತಿ ಕೇಳಿ ಎಸ್‌ಐಟಿ ಪತ್ರ ಬರೆದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಕಡತ ತರಿಸಿಕೊಂಡು ನೋಡುತ್ತೇನೆ.

-ಟಿ.ಎಂ. ವಿಜಯ ಭಾಸ್ಕರ, ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT