ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿಮಿಡಿತ ಹೆಚ್ಚಿಸುತ್ತಿರುವ ‘ಆಕ್ಸಿಮೀಟರ್’: ಉಪಕರಣಗಳಿಗೆ ಹೆಚ್ಚಿದ ಬೇಡಿಕೆ

ದುಪ್ಪಟ್ಟು ದರಕ್ಕೆ ಔಷಧ ಮಳಿಗೆಗಳಿಂದ ಮಾರಾಟ
Last Updated 11 ಮೇ 2021, 21:47 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಮೊದಲನೇ ಅಲೆ ಕಾಣಿಸಿಕೊಂಡಾಗ ಮನೆ ಆರೈಕೆಗೆ ಒಳಗಾದವರಿಗೆ ಪಲ್ಸ್‌ ಆಕ್ಸಿಮೀಟರ್, ಥರ್ಮಾಮೀಟರ್‌ ಒಳಗೊಂಡ ಕಿಟ್‌ಗಳನ್ನು ವಿತರಿಸಲಾಗುತ್ತಿತ್ತು. ಆದರೆ, ಎರಡನೇ ಅಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಈ ಕಿಟ್‌ಗಳ ವಿತರಣೆ ನಡೆಯುತ್ತಿಲ್ಲ. ಇದರಿಂದಾಗಿ ಪಲ್ಸ್‌ ಆಕ್ಸಿಮೀಟರ್‌ಗೆ ಬೇಡಿಕೆ ಹೆಚ್ಚಾಗಿದ್ದು, ಔಷಧ ಮಳಿಗೆಗಳಲ್ಲಿ ₹ 5 ಸಾವಿರದವರೆಗೂ ಮಾರಾಟ ಮಾಡಲಾಗುತ್ತಿದೆ.

ಎರಡನೇ ಅಲೆ ಕಾಣಿಸಿಕೊಂಡ ಬಳಿಕ ವೈರಾಣುವಿನ ತೀವ್ರತೆಗೆ ಗಂಭೀರವಾಗಿ ಅಸ್ವಸ್ಥರಾಗುವವರ ಸಂಖ್ಯೆ ಏರಿಕೆ ಕಂಡಿದೆ. ಸೋಂಕು ದೃಢ ಪ್ರಮಾಣವು ಶೇ 30ರ ಗಡಿ ದಾಟಿದೆ. ಇನ್ನೊಂದೆಡೆ, ಆಮ್ಲಜನಕದ ಕೊರತೆ ಮುಂದುವರೆದಿದ್ದು, ರೋಗಿಗಳು ಸಂಕಷ್ಟ ಎದುರಿಸಲಾರಂಭಿಸಿದ್ದಾರೆ. ಇದರಿಂದಾಗಿ ಮನೆಯಲ್ಲಿಯೇ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಪರೀಕ್ಷೆ ಮಾಡಿಕೊಳ್ಳುವ ಪಲ್ಸ್‌ ಆಕ್ಸಿಮೀಟರ್‌ಗೆ ಬೇಡಿಕೆ ಹೆಚ್ಚಿದೆ. ಆರೋಗ್ಯವಂತ ವ್ಯಕ್ತಿಗಳು ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಔಷಧ ಮಳಿಗೆಗಳಿಗೆ ತೆರಳಿ, ಖರೀದಿಸುತ್ತಿದ್ದಾರೆ.

ಕೋವಿಡ್ ಕಾಯಿಲೆ ಕಾಣಿಸಿಕೊಳ್ಳುವ ಪೂರ್ವದಲ್ಲಿ ಉತ್ತಮ ಗುಣ ಮಟ್ಟದ ಪಲ್ಸ್ ಆಕ್ಸಿಮೀಟರ್ ₹ 1,000ಕ್ಕೆ ದೊರೆಯುತ್ತಿತ್ತು. ಈಗ ಅದೇ ಸಾಧನವನ್ನು ಕೆಲವೆಡೆ ₹ 5 ಸಾವಿರ ದವರೆಗೂ ಮಾರಾಟ ಮಾಡಲಾಗುತ್ತದೆ. ಆನ್‌ಲೈನ್‌ ವೇದಿಕೆಗಳಲ್ಲಿ ₹ 1,200 ಹಾಗೂ ಅದಕ್ಕಿಂತ ಹೆಚ್ಚಿನ ದರದ ವಿವಿಧ ಕಂಪನಿಗಳ ಪಲ್ಸ್ ಆಕ್ಸಿಮೀಟರ್‌ಗಳ ಲಭ್ಯವಿದೆ. ಆದರೆ, ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಅವು ನಿಗದಿತ ವಿಳಾಸ ತಲುಪುವುದು ವಿಳಂಬವಾಗುತ್ತಿದೆ. ಹೀಗಾಗಿ, ಅಗತ್ಯ ಇರುವವರು ಔಷಧ ಮಳಿಗೆಗಳಲ್ಲಿಯೇ ದುಬಾರಿ ಹಣವನ್ನು ಪಾವತಿಸಿ, ಖರೀದಿಸುತ್ತಿದ್ದಾರೆ.

ಪೂರೈಕೆಯಲ್ಲಿ ವ್ಯತ್ಯಯ: ಪಲ್ಸ್‌ ಆಕ್ಸಿಮೀಟರ್‌, ಥರ್ಮಾಮೀಟರ್ (ಉಷ್ಣಮಾಪನ) ಸೇರಿದಂತೆ ಮನೆ ಆರೈಕೆಗೆ ಒಳಗಾದವರಿಗೆ ಅಗತ್ಯವಿರುವ ಕಿಟ್‌ನ ಸಾಧನಗಳು ಔಷಧ ಮಳಿಗೆಗಳಿಗೆ ಲಾಕ್‌ಡೌನ್ ಬಳಿಕ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಮೆಡ್‌ ಪ್ಲಸ್ ಸೇರಿದಂತೆ ಪ್ರಮುಖ ಔಷಧ ಮಳಿಗೆಗಳಲ್ಲಿಯೇ ಇದು ದೊರೆಯುತ್ತಿಲ್ಲ. ಕೆಲ ಔಷಧ ಮಳಿಗೆಗಳಲ್ಲಿ ಎರಡರಿಂದ ಮೂರು ಪಲ್ಸ್‌ ಆಕ್ಸಿಮೀಟರ್‌ಗಳು ಮಾತ್ರ ಇವೆ. ಇದರಿಂದಾಗಿ ಮಳಿಗೆಗಳು ದುಬಾರಿ ದರಕ್ಕೆ ಮಾರಾಟ ಮಾಡುತ್ತಿವೆ. ಅದೇ ರೀತಿ, ₹ 200ಗೆ ಸಿಗುತ್ತಿದ್ದ ಥರ್ಮಾಮೀಟರ್‌ಗಳನ್ನು ₹ 500ರವರೆಗೂ ಮಾರಾಟ ಮಾಡಲಾಗುತ್ತಿದೆ.

‘ಪಲ್ಸ್‌ ಆಕ್ಸಿಮೀಟರ್‌ಗಳನ್ನು ಔಷಧ ಮಳಿಗೆಗಳು ದುಬಾರಿ ಹಣಕ್ಕೆ ಮಾರುತ್ತಿವೆ. ಐದು ಮಳಿಗೆಗಳಲ್ಲಿ ವಿಚಾರಿಸಿ, ಅಂತಿಮವಾಗಿ ₹ 4 ಸಾವಿರಕ್ಕೆ ಖರೀದಿಸಿದೆ. ಸರ್ಕಾರವು ಇದಕ್ಕೆ ಕಡಿವಾಣ ಹಾಕಿ, ಜನೌಷಧ ಮಳಿಗೆಗಳಲ್ಲಿ ಒದಗಿಸಲು ಕ್ರಮಕೈಗೊಳ್ಳಬೇಕು’ ಎಂದು ಶ್ರೀರಾಮನಗರದ ನಿವಾಸಿ ರಾಮಕೃಷ್ಣ ತಿಳಿಸಿದರು.

‘ಪ್ರತಿನಿತ್ಯ ಸರಾಸರಿ 10ರಿಂದ 15 ಮಂದಿ ಪಲ್ಸ್ ಆಕ್ಸಿಮೀಟರ್‌ ಬಗ್ಗೆ ವಿಚಾರಿಸುತ್ತಾರೆ. ಆದರೆ, ಬೇಡಿಕೆ ಸಲ್ಲಿಸಿದರೂ ಎರಡು ವಾರಗಳಿಂದ ಪೂರೈಕೆಯಾಗಿಲ್ಲ. ಮೊದಲು ₹ 1,500ರಿಂದ ₹ 2,000ವರೆಗೆ ಮಾರಾಟ ಮಾಡಲಾಗುತ್ತಿತ್ತು’ ಎಂದು ಭುವನೇಶ್ವರಿನಗರದಲ್ಲಿರುವ ಮೆಡ್‌ ಪ್ಲಸ್ ಮಳಿಗೆಯ ಔಷಧ ವಿತರಕ ಆನಂದ್ ವಿವರಿಸಿದರು.

‘ಕೋವಿಡ್‌ ಕಾಣಿಸಿಕೊಳ್ಳುವ ಪೂರ್ವದಲ್ಲಿ ತಿಂಗಳಿಗೆ ಒಂದು ಪಲ್ಸ್ ಆಕ್ಸಿಮೀಟರ್‌ ಮಾರಾಟವಾಗುವುದು ಕಷ್ಟವಿತ್ತು. ಆಗ ₹ 1,000ಕ್ಕೆ ದೊರೆ ಯುತ್ತಿತ್ತು. ಈಗ ಬೇಡಿಕೆ ಹೆಚ್ಚಿರುವ ಕಾರಣ ತಯಾರಿಕಾ ಕಂಪನಿಗಳು ಕೂಡ ದರ ಹೆಚ್ಚಳ ಮಾಡಿವೆ. ಈಗ ₹ 2,000ಕ್ಕೆ ಮಾರುತ್ತಿದ್ದೇವೆ’ ಎಂದು ಬ್ಯಾಂಕ್ ಕಾಲೋನಿಯಲ್ಲಿರುವ ಮನೋಜ್ ಮೆಡಿಕ್ಸ್‌ನ ಔಷಧ ವಿತರಕ ದಿನೇಶ್ ಹೇಳಿದರು.

ಔಷಧ ನಿಯಂತ್ರಕ ಅಮರೇಶ್ ತುಂಬಗಿ ಅವರು ಸಂಪರ್ಕಕ್ಕೆ ಲಭ್ಯರಿರುವುದಿಲ್ಲ.

ಜನೌಷಧ ಮಳಿಗೆಗಳಲ್ಲಿ ಲಭ್ಯವಿಲ್ಲ
ಮಾರುಕಟ್ಟೆ ದರಕ್ಕಿಂತ ಶೇ 30 ರಿಂದ ಶೇ 80 ರವರೆಗೆ ರಿಯಾಯಿತಿ ದರದಲ್ಲಿ ಔಷಧ ಒದಗಿಸುವ ಪ್ರಧಾನಮಂತ್ರಿ ಜನೌಷಧ ಮಳಿಗೆಗಳಲ್ಲಿ ಪಲ್ಸ್‌ ಆಕ್ಸಿಮೀಟರ್ ಮತ್ತು ಥರ್ಮಾಮೀಟರ್‌ ದೊರೆಯುತ್ತಿಲ್ಲ. ಅದೇ ರೀತಿ, ಈ ಮಳಿಗೆಗಳಿಗೆ ಎನ್‌–95 ಮುಖಗವಸುಗಳು ಕೂಡ ಪೂರೈಕೆಯಾಗುತ್ತಿಲ್ಲ. ಈ ನಡುವೆ, ಖಾಸಗಿ ಆಸ್ಪತ್ರೆಗಳು ಮನೆ ಆರೈಕೆ ಕಿಟ್‌ಗಳನ್ನು ಒದಗಿಸುತ್ತಿದ್ದು, ಇದಕ್ಕೆ ₹ 6 ಸಾವಿರದವರೆಗೆ ಪಡೆಯುತ್ತಿವೆ. ಕಿಟ್‌ನಲ್ಲಿ ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಇರಲಿದೆ.

‘ಪಲ್ಸ್‌ ಆಕ್ಸಿಮೀಟರ್‌ ಬಗ್ಗೆ ಪ್ರತಿನಿತ್ಯ ಹಲವಾರು ಮಂದಿ ವಿಚಾರಿಸುತ್ತಾರೆ. ಆದರೆ, ಅದು ನಮಗೆ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಖಾಸಗಿ ಔಷಧ ಮಾರಾಟ ಮಳಿಗೆಗಳಲ್ಲಿ ಈ ಸಾಧನಗಳಿಗೆ ಬೇಡಿಕೆ ಹೆಚ್ಚಿದೆ. ನಮಗೆ ಪೂರೈಕೆಯಾಗಿದ್ದಲ್ಲಿ ಗ್ರಾಹಕರಿಗೆ ಕೇವಲ ₹ 500ಕ್ಕೆ ಒದಗಿಸಲಾಗುತ್ತಿತ್ತು’ ಎಂದು ಬನಶಂಕರಿ ಮೂರನೇ ಹಂತದಲ್ಲಿರುವ ಪ್ರಧಾನ ಮಂತ್ರಿ ಜನೌಷಧ ಮಳಿಗೆಯ ಔಷಧ ವಿತರಕರೊಬ್ಬರು ತಿಳಿಸಿದರು.

ಪಲ್ಸ್ ಆಕ್ಸಿಮೀಟರ್ ಬಳಕೆ ಹೇಗೆ?
‘ಮಾರುಕಟ್ಟೆಯಲ್ಲಿ ಈಗ ಹಲವು ಕಂಪನಿಗಳ ಪಲ್ಸ್ ಆಕ್ಸಿಮೀಟರ್ ದೊರೆಯುತ್ತವೆ. ಅವುಗಳ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಬೇಕು. ಸಾಮಾನ್ಯವಾಗಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ 95ರಿಂದ 100ರವರೆಗೆ ಇರುತ್ತದೆ. ಇದು ಎಷ್ಟಿದೆ ಎಂಬುದನ್ನು ತಿಳಿಯಲು ಪಲ್ಸ್ ಆಕ್ಸಿಮೀಟರ್ ಸಹಾಯಕ. 94 ಅಥವಾ ಅದಕ್ಕಿಂತ ಕಡಿಮೆ ಆದಲ್ಲಿ ಆಸ್ಪತ್ರೆಗೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

‘ದಿನಕ್ಕೆ ಮೂರು ಬಾರಿ ಪಲ್ಸ್ ಆಕ್ಸಿಮೀಟರ್‌ನಿಂದ ಪರೀಕ್ಷೆ ಮಾಡಿಕೊಳ್ಳಬೇಕು. ಈ ಪರೀಕ್ಷೆ ಮಾಡಿಕೊಳ್ಳುವ ಮೊದಲು ಯುವಜನತೆ ಆರು ನಿಮಿಷ ಹಾಗೂ ವೃದ್ಧರು ಮೂರು ನಿಮಿಷ ಓಡಾಡಬೇಕು. ಮನೆಯಲ್ಲಿ ಯಾರಾದರೂ ಕೋವಿಡ್ ಪೀಡಿತರಾದರೆ ಉಳಿದ ಸದಸ್ಯರು ಕೂಡ ಲಕ್ಷಣಗಳು ಇರದಿದ್ದರೂ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಪರೀಕ್ಷೆ ಮಾಡಿಕೊಳ್ಳುತ್ತಿರುವುದು ಒಳ್ಳೆಯದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT