ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್ ಖರ್ಗೆ ಟ್ರಸ್ಟಿಗೆ ನಿಯಮಾನುಸಾರ ಸಿ.ಎ. ನಿವೇಶನ: ಸಚಿವ ಎಂ.ಬಿ. ಪಾಟೀಲ

Published : 26 ಆಗಸ್ಟ್ 2024, 15:40 IST
Last Updated : 26 ಆಗಸ್ಟ್ 2024, 15:40 IST
ಫಾಲೋ ಮಾಡಿ
Comments

ಬೆಂಗಳೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಏರೋಸ್ಪೇಸ್ ಪಾರ್ಕ್‌ನಲ್ಲಿ ನಾಗರಿಕ ಸೌಲಭ್ಯಗಳಿಗೆ (ಸಿಎ) ಮೀಸಲಾದ ನಿವೇಶನವನ್ನು ಕಾನೂನು ಪ್ರಕಾರ ನಿಗದಿತ ಬೆಲೆಗೆ ಹಂಚಿಕೆ ಮಾಡಲಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಂಚಿಕೆಯಾದ ನಿವೇಶನದಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಅವರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕ ಲಹರ್ ಸಿಂಗ್ ಸಿರೊಯಾ ಅವರು ಆರೋಪಿಸಿರುವಂತೆ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ’ ಎಂದರು.

‘ರಾಹುಲ್ ಖರ್ಗೆ ಐಐಟಿ ಪದವೀಧರ. ಅವರ ಕುಟುಂಬವು ವಿವಿಧ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಕೆಐಎಡಿಬಿ ನಿಯಮಗಳ ಪ್ರಕಾರ ಸಿ.ಎ ನಿವೇಶನಗಳಲ್ಲಿ ಆರ್ ಆ್ಯಂಡ್ ಡಿ ಕೇಂದ್ರಗಳು, ಉತ್ಕೃಷ್ಟತಾ ಕೇಂದ್ರಗಳು, ತಾಂತ್ರಿಕ ಸಂಸ್ಥೆಗಳು, ಕೌಶಲಾಭಿವೃದ್ಧಿ, ಸರ್ಕಾರಿ ಕಚೇರಿಗಳು, ಬ್ಯಾಂಕು, ಆಸ್ಪತ್ರೆ, ಹೋಟೆಲ್, ಪೆಟ್ರೋಲ್ ಬಂಕ್, ಕ್ಯಾಂಟೀನ್, ವಸತಿ ಸೌಲಭ್ಯ ಇತ್ಯಾದಿಗಳ ಅಭಿವೃದ್ಧಿಗೆ ಅವಕಾಶವಿದೆ. ಆಸಕ್ತರು ಇದಕ್ಕೆ ಪ್ರಯತ್ನಿಸಬಹುದು’ ಎಂದರು.

‘ಈ ಹಿಂದೆ ಕೆಐಎಡಿಬಿ ಮಂಡಳಿಯೇ ಸಿ.ಎ. ನಿವೇಶನಗಳನ್ನು ಹಂಚುತ್ತಿತ್ತು. ನಾನು ಕೈಗಾರಿಕಾ ಸಚಿವನಾದ ಬಳಿಕ, ಪಾರದರ್ಶಕ ವ್ಯವಸ್ಥೆ ಜಾರಿ‌ಗೆ ತರುವ ಉದ್ದೇಶದಿಂದ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಅನುಮೋದನೆ ಕಡ್ಡಾಯಗೊಳಿಸಲಾಗಿದೆ. ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟರಿಗೆ ಶೇ 24.10ರಷ್ಟು ಮೀಸಲಾತಿ‌ ಕಲ್ಪಿಸಲಾಗಿದೆ. ಈ ಸತ್ಯವನ್ನು ಅರಿತು ಲಹರ್‌ ಸಿಂಗ್‌ ಮಾತನಾಡಬೇಕು’ ಎಂದರು.

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಸಿಎ ನಿವೇಶನದಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸುವುದು ತಪ್ಪೇ– ಪ್ರಿಯಾಂಕ್‌

‘ಏರೋಸ್ಪೇಸ್ ಪಾರ್ಕ್‌ನಲ್ಲಿ ಶೈಕ್ಷಣಿಕ ಉದ್ದೇಶಗಳಿಗೆ ಮೀಸಲಿಟ್ಟ ನಿವೇಶನವನ್ನು ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದೆ. ನಾಗರಿಕ ಸೌಲಭ್ಯಕ್ಕೆಂದೇ (ಸಿಎ) ಒದಗಿಸಿದ ನಿವೇಶನದಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸುವುದು ತಪ್ಪೇ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ. ತಮ್ಮ ಸಹೋದರನಿಗೆ ಸಿಎ ನಿವೇಶನ ಹಂಚಿಕೆ ವಿವಾದದ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ ‘ಈ ನಿವೇಶನ ಪಡೆಯಲು ಟ್ರಸ್ಟ್‌ಗೆ ಯಾವುದೇ ಸಹಾಯಧನ ನೀಡಿಲ್ಲ‌. ನಿವೇಶನದ ದರವನ್ನೂ ಕಡಿಮೆ ಮಾಡಿಲ್ಲ. ಹಣ ಪಾವತಿ ನಿಯಮಗಳಲ್ಲಿಯೂ ಯಾವುದೇ ರಿಯಾಯಿತಿ ನೀಡಿಲ್ಲ’ ಎಂದು ಅವರು ಹೇಳಿದ್ದಾರೆ. ‘ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಿನ್ನೆಲೆ ಇರುವವರು ಟ್ರಸ್ಟಿಗಳಾಗಿದ್ದಾರೆ. ಯುವಕರಿಗೆ ಉದ್ಯೋಗ ಒದಗಿಸುವ ಕೇಂದ್ರಗಳನ್ನು ನಮ್ಮ ಟ್ರಸ್ಟ್‌ಗಳು ಸ್ಥಾಪಿಸಬಾರದೇ’ ಎಂದೂ ಕೇಳಿರುವ ಅವರು ‘ಆರೆಸ್ಸೆಸ್‌ ಬೆಂಬಲಿತ ರಾಷ್ಟ್ರೋತ್ಥಾನ ಮತ್ತು ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ ನಿಮ್ಮ ಸರ್ಕಾರವು ರಾಜ್ಯದಾದ್ಯಂತ ಭೂಮಿ ನೀಡಿದ್ದು ಹೇಗೆ? ಆಗ ಯಾಕೆ ಮೌನ ವಹಿಸಿದಿರಿ?’ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT