ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ | ಕನ್ನಡದಲ್ಲೂ ಪರೀಕ್ಷೆ: ಸೋಮಣ್ಣ

ಸುತ್ತೋಲೆ ಹೊರಡಿಸಲು ರೈಲ್ವೆ ಮಂಡಳಿಗೆ ಸಚಿವರ ಸೂಚನೆ
Published 4 ಆಗಸ್ಟ್ 2024, 0:09 IST
Last Updated 4 ಆಗಸ್ಟ್ 2024, 0:09 IST
ಅಕ್ಷರ ಗಾತ್ರ

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಇಲಾಖೆಯಲ್ಲಿ ಬಡ್ತಿ ನೀಡಲು ನಡೆಸುವ ‘ಸಾಮಾನ್ಯ ವಿಭಾಗ ಸ್ಪರ್ಧಾತ್ಮಕ ಪರೀಕ್ಷೆ’ (ಜಿಡಿಸಿಇ) ಬರೆಯಲು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಕನ್ನಡದಲ್ಲಿಯೂ ಅವಕಾಶ ಇರಬೇಕು ಎಂದು ಒತ್ತಾಯ ಬಂದಿರುವುದರಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗಿದೆ. ಕನ್ನಡ ದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡಿ ಸುತ್ತೋಲೆ ಹೊರಡಿಸುವಂತೆ ರೈಲ್ವೆ ಬೋರ್ಡ್‌ ಪ್ರಧಾನ ವ್ಯವಸ್ಥಾಪಕ ರಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಲೋಕೊ ಪೈಲೆಟ್‌ ಹುದ್ದೆಗಳ ಪರೀಕ್ಷಾ ಸುತ್ತೋಲೆ ಕನ್ನಡದಲ್ಲಿ ಇಲ್ಲದೇ ಇರುವುದನ್ನು ಸಂಸದ ತೇಜಸ್ವಿ ಸೂರ್ಯ ಗಮನಕ್ಕೆ ತಂದಿದ್ದರು. ಕನ್ನಡದಲ್ಲಿಯೂ ಸುತ್ತೋಲೆ ಹೊರಡಿಸಲು ತಿಳಿಸಿದ್ದೇನೆ. ಸೀಮಿತ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆ (ಎಲ್‌ಡಿಸಿಇ) ಸೇರಿದಂತೆ ರೈಲ್ವೆಯ ಎಲ್ಲ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಬೆಂಗಳೂರು ಉಪನಗರ ರೈಲು ಯೋಜನೆ ಮಂದಗತಿಯಲ್ಲಿದೆ. ತ್ವರಿತ ಗೊಳಿಸಲು ತಿಂಗಳಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಬಡ ಸಮುದಾಯದ ಪ್ರಯಾಣಿಕ ರನ್ನು ಗಮನದಲ್ಲಿ ಇಟ್ಟುಕೊಂಡು ಪ್ರಯಾಣಿಕರ ರೈಲಿಗೆ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮತ್ತು ರಾಷ್ಟ್ರೀಯ ಹೆದ್ದಾರಿ (ಲೋಕೋಪಯೋಗಿ) ಅಧಿಕಾರಿ
ಗಳೊಂದಿಗೆ ಸಭೆ ನಡೆಸಿ ತುಮಕೂರು ಜಿಲ್ಲೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತುಮಕೂರು–ನೆಲಮಂಗಲ ರಸ್ತೆ ಕಾಮಗಾರಿ, ಎನ್‌ಎಚ್‌ 206ರ ಮಲ್ಲಸಂದ್ರ–ಕರಡಿ ಚತುಷ್ಪಥ ಕಾಮಗಾರಿ, ಎನ್‌ಎಚ್‌ 234ರ ಹುಳಿಯಾರು–ಶಿರಾ ದ್ವಿಪಥ ರಸ್ತೆ ಸಹಿತ ಒಟ್ಟು ₹ 6,400 ಕೋಟಿ ವೆಚ್ಚದಲ್ಲಿ 12 ರಸ್ತೆಗಳಲ್ಲಿ 375 ಕಿ.ಮೀ. ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು.

ರಾಷ್ಟ್ರೀಯ ಹೆದ್ದಾರಿ 150 (ಎ)ಯಲ್ಲಿ ಕೆ.ಬಿ. ಕ್ರಾಸ್‌ ಬಳಿ ಸ್ವಾಧೀನ ಪಡೆದಿರುವ 2 ಎಕರೆ 2 ಗುಂಟೆ ಜಮೀನಿಗೆ ಸಂಬಂಧಿಸಿ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ ಎಂದರು.

ಗೂಡ್ಸ್‌ ರೈಲಿನಲ್ಲಿ ಕಟ್ಟುನಿಟ್ಟಿನ ತಪಾಸಣೆ

‘ಗೂಡ್ಸ್‌ ರೈಲುಗಳಲ್ಲಿ ಬರುವ ಎಲ್ಲ ವಸ್ತುಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಕಾನೂನು ಬಾಹಿರವಾಗಿ ಆಹಾರ ಪದಾರ್ಥವೂ ಸೇರಿದಂತೆ ಯಾವುದೇ ವಸ್ತುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಆರ್‌ಪಿಎಫ್ ತಂಡದ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ರೈಲ್ವೆ ರಾಜ್ಯ ಸಚಿವ
ವಿ. ಸೋಮಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT