ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಪರಿಹಾರ ಬಾಕಿ: ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಸಿದ್ಧತೆ

Published 4 ಅಕ್ಟೋಬರ್ 2023, 23:30 IST
Last Updated 4 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ಬಾಕಿ ಇರಿಸಿಕೊಂಡಿರುವ ₹ 2,300 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರವನ್ನು ಪಾವತಿಸುವಂತೆ ಜಿಎಸ್‌ಟಿ ಮಂಡಳಿ ಸಭೆಯಲ್ಲೇ ಆಗ್ರಹಿಸಲು ರಾಜ್ಯ ಸರ್ಕಾರ ಸಿದ್ಧತೆ ನಡಸಿದೆ.

ಜಿಎಸ್‌ಟಿ ಮಂಡಳಿ ಸಭೆ ಶನಿವಾರ ನಡೆಯಲಿದೆ. ಮಂಡಳಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ್ದು, ಜಿಎಸ್‌ಟಿ ಪರಿಹಾರದ ಬಾಕಿ ಕುರಿತು ಮಾಹಿತಿ ಪಡೆದಿದ್ದಾರೆ.

2022 ಹಾಗೂ ಅದರ ಹಿಂದಿನ ವರ್ಷಗಳಲ್ಲಿ ರಾಜ್ಯಕ್ಕೆ ಬರಬೇಕಿದ್ದ ಜಿಎಸ್‌ಟಿ ಪರಿಹಾರದಲ್ಲಿ ₹ 2,300 ಕೋಟಿಯಷ್ಟು ಬಾಕಿ ಉಳಿದಿದೆ. ಮಹಾಲೇಖಪಾಲರಿಂದ (ಸಿಎಜಿ) ಲೆಕ್ಕಪರಿಶೋಧನೆಯೂ ಪೂರ್ಣಗೊಂಡಿದೆ. ಕರ್ನಾಟಕಕ್ಕೆ ಜಿಎಸ್‌ಟಿ ಪರಿಹಾರ ಬಾಕಿ ಉಳಿದಿರುವುದನ್ನು ಸಿಎಜಿ ವರದಿಯಲ್ಲೂ ದೃಢಪಡಿಸಲಾಗಿದೆ. ಆ ಬಳಿಕವೂ ಬಾಕಿ ಪಾವತಿಗೆ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದ ಮಂಡಳಿಯ ಸಭೆಯಲ್ಲೇ ವಿಷಯ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕೃಷ್ಣ ಬೈರೇಗೌಡ, ‘ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತವನ್ನು ಶೀಘ್ರ ಪಾವತಿಸುವಂತೆ ಮಂಡಳಿಯ ಸಭೆಯಲ್ಲೇ ಒತ್ತಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಕುರಿತು ಜಿಎಸ್‌ಟಿ ಮಂಡಳಿಗೆ ಬುಧವಾರವೇ ಪತ್ರ ಬರೆದಿದ್ದು, ಸಭೆಯ ಕಾರ್ಯಸೂಚಿಯಲ್ಲಿ ವಿಷಯವನ್ನು ಸೇರಿಸುವಂತೆ ಒತ್ತಾಯಿಸಿದ್ದೇನೆ’ ಎಂದರು.

ಸೆಸ್‌ ಬಗ್ಗೆಯೂ ಚರ್ಚೆ: ತಂಬಾಕು, ತಂಪು ಪಾನೀಯಗಳು, ಐಷಾರಾಮಿ ಕಾರುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಮೇಲು ಸುಂಕದ (ಸೆಸ್‌) ಮೊತ್ತವನ್ನು ಈಗ ಕೋವಿಡ್‌ ಅವಧಿಯಲ್ಲಿ ಕೇಂದ್ರ ಸರ್ಕಾರವು ನೀಡಿದ್ದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಸಾಲ ಮರುಪಾವತಿ ಆದ ಬಳಿಕ ಸೆಸ್‌ಗಳನ್ನು ಹಂಚಿಕೆ ಮಾಡುವ ಕುರಿತೂ ಮಾಹಿತಿ ಹಂಚಿಕೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸಿರಿ ಧಾನ್ಯಗಳ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿತ ಮಾಡುವಂತೆ ರಾಜ್ಯ ಸರ್ಕಾರವು ಒತ್ತಾಯಿಸುತ್ತಲೇ ಇದೆ. ಈ ವಿಚಾರವನ್ನೂ ಶನಿವಾರದ ಸಭೆಯಲ್ಲಿ ಚರ್ಚಿಸಲು ಸಿದ್ಧತೆ ನಡೆಸಲಾಗಿದೆ. ಕಾರ್ಯಸೂಚಿಯಲ್ಲಿ ಈ ವಿಚಾರವನ್ನೂ ಸೇರಿಸುವಂತೆ ಮಂಡಳಿಯನ್ನು ಕೋರಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT