ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾ ಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ: ರಿಷಿ ಸುನಕ್ ಪ್ರತಿಕ್ರಿಯೆ ಇಂತಿದೆ

Last Updated 8 ಏಪ್ರಿಲ್ 2023, 6:16 IST
ಅಕ್ಷರ ಗಾತ್ರ

ನವದೆಹಲಿ: ಲೇಖಕಿ ಮತ್ತು ಇನ್ಫೊಸಿಸ್‌ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಸಾಮಾಜಿಕ ಸೇವೆಗಾಗಿ ‘ಪದ್ಮಭೂಷಣ’ ಗೌರವವನ್ನು ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.

ಸುಧಾ ಮೂರ್ತಿ ಅವರ ಮಗಳು, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುಧಾ ಮೂರ್ತಿ ಅವರ ಪ್ರಶಸ್ತಿ ಸ್ವೀಕಾರದ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅಕ್ಷತಾ, ‘ನಮ್ಮ ತಾಯಿ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ (ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು) ಸಾಮಾಜಿಕ ಕಾರ್ಯದಲ್ಲಿ ಅವರ ಕೊಡುಗೆಗಳನ್ನು ಗುರುತಿಸಿ ಭಾರತದ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ ಕ್ಷಣವನ್ನು ನಾನು ಹೆಮ್ಮೆಯಿಂದ ನೋಡಿದೆ’ ಎಂದು ಬರೆದುಕೊಂಡಿದ್ದಾರೆ.

ಅಕ್ಷತಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಿಷಿ ಸುನಕ್, ‘ಇದು ಹೆಮ್ಮೆಯ ದಿನ’ ಎಂದು ಪ್ರತಿಕ್ರಿಯಿಸಿದ್ದಾರೆ.

ಸುಧಾ ಮೂರ್ತಿ ಅವರ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ, ಪುತ್ರ ರೋಹನ್ ಮೂರ್ತಿ ಸೇರಿದಂತೆ ಕುಟುಂಬಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾಮೂರ್ತಿ, ‘ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ನನ್ನ ಕೈಯಲ್ಲಿ ಇಟ್ಟಾಗ ತಂದೆ–ತಾಯಿ, ಗುರುಗಳು, ಕಲಿತ ಶಿಕ್ಷಣ ಸಂಸ್ಥೆ, ಬಡವರು ನೆನಪಾದರು. ಇದರೊಟ್ಟಿಗೆ ನನ್ನ ರಾಜ್ಯ ಕರ್ನಾಟಕ, ನನ್ನ ದೇಶ ಭಾರತ ನೆನಪಾಯಿತು. ಮತ್ತೆ ಮತ್ತೆ ಇಲ್ಲಿ ಹುಟ್ಟಿ ಬರಲು ಬಯಸುತ್ತೇನೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.

‘ಪ್ರಶಸ್ತಿ ಸ್ವೀಕರಿಸಲು ರಾಷ್ಟ್ರಪತಿ ಬಳಿ ತೆರಳುತ್ತಿದ್ದಾಗ ಒಂದೊಂದು ಹೆಜ್ಜೆಗೂ ಒಬ್ಬೊಬ್ಬರು ನೆನಪಾದರು. ಜನ್ಮ ನೀಡಿದ ತಂದೆ–ತಾಯಿ, ವಿದ್ಯೆ ಕಲಿಸಿದ ಗುರುಗಳು, ಎಂಜಿನಿಯರಿಂಗ್‌ ಕಲಿತ ಕೆಎಲ್‌ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜು, ನನ್ನ ಜೊತೆ ಕೆಲಸ ಮಾಡಿದ ದೇವದಾಸಿಯರು, ನಾವು ಸಾಮಾಜಿಕ ಕಾರ್ಯಕೈಗೊಳ್ಳಲು ಕಾರಣರಾದ ಬಡವರು, ಕರ್ನಾಟಕ ಹಾಗೂ ಈ ದೇಶ ಭಾರತ ನೆನಪಾಯಿತು’ ಎಂದಿದ್ದಾರೆ.

ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಬೇರು ಮರೆಯಬಾರದು. ಜನ್ಮ ನೀಡಿದ ತಂದೆ–ತಾಯಿ, ಶಿಕ್ಷಣ ನೀಡಿದ ಗುರುಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಮರೆಯಬಾರದು. ಅವುಗಳಿಗೆ ಕೃತಜ್ಞತರಾಗಿರಬೇಕು. ಜೀವನದಲ್ಲಿ ಹಣ– ಅಂತಸ್ತು ಮುಖ್ಯವಲ್ಲ. ನೆಮ್ಮದಿ, ಸಮಾಧಾನ ಮುಖ್ಯ. ಇವು ಇದ್ದಾಗ ಕೃತಜ್ಞತಾ ಭಾವ ಬರುತ್ತದೆ ಎಂದಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT