ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜು ಎಚ್‌ಒಡಿ ನೇಮಕಕ್ಕೆ ರೊಟೇಷನ್‌ ಪದ್ಧತಿ: ಡಾ. ಶರಣಪ್ರಕಾಶ್ ಪಾಟೀಲ

Published 11 ಡಿಸೆಂಬರ್ 2023, 14:03 IST
Last Updated 11 ಡಿಸೆಂಬರ್ 2023, 14:03 IST
ಅಕ್ಷರ ಗಾತ್ರ

ವಿಧಾನ ಪರಿಷತ್‌: ‘ಸ್ವಾಯತ್ತ ಸಂಸ್ಥೆಗಳೂ ಸೇರಿದಂತೆ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ವಿಭಾಗ ಮುಖ್ಯಸ್ಥರ (ಎಚ್‌ಒಡಿ) ನೇಮಕಕ್ಕೆ ರೊಟೇಷನ್‌ ಪದ್ಧತಿ ಅಳವಡಿಸಲು ಉದ್ದೇಶಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಹೇಳಿದರು.

ಜೆಡಿಎಸ್‌ನ ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಬ್ಬರೇ ಹಲವು ವರ್ಷ ಎಚ್‌ಒಡಿ ಹುದ್ದೆಯಲ್ಲಿ ಮುಂದುವರಿಯುವುದನ್ನು ತಪ್ಪಿಸಲು ವೃಂದ ಮತ್ತು ನೇಮಕಾತಿ ( ಸಿ ಆ್ಯಂಡ್ ಆರ್) ನಿಯಮಗಳಿಗೆ ತಿದ್ದುಪಡಿ ತರಲಾಗುವುದು’ ಎಂದರು.

‘ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಗಳಡಿ ಬರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳ ಸಿಬ್ಬಂದಿಗಳ ನೇಮಕಾತಿ, ಜೇಷ್ಠತೆ, ಬಡ್ತಿ ನೀಡುವ ಸಂಬಂಧ ಹಾಲಿ ಇರುವ ನಿಯಮಕ್ಕೆ ತಿದ್ದುಪಡಿ ತರಲಾಗುವುದು. ಒಂದು ತಿಂಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದರು.

‘ಗ್ರೂಪ್ ‘ಎ’ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಗ್ರೂಪ್ ‘ಬಿ’, ‘ಸಿ’ ಮತ್ತು ‘ಡಿ’ ಸಿಬ್ಬಂದಿಗೆ ಇದೇ ನಿಯಮಗಳನ್ನು ಅಳವಡಿಸಿಕೊಳ್ಳುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಕಾನೂನು ಮತ್ತು ಆರ್ಥಿಕ ಇಲಾಖೆಯಿಂದ ಅಭಿಪ್ರಾಯ ಕೇಳಲಾಗಿದೆ. ಇದೇ 22ರಂದು ಇನ್ನೊಂದು ಸುತ್ತಿನ ಸಭೆ ಇದೆ. ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಆಯುಷ್ ಆಸ್ಪತ್ರೆಗಳಿಗೆ ಶೀಘ್ರ ಸಿಬ್ಬಂದಿ ನೇಮಕಾತಿ’

‘ತಾಲ್ಲೂಕು ಮತ್ತು ಜಿಲ್ಲಾ ಆಯುಷ್ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿಯ ಟಿ.ಎಚ್. ಪೂಜಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಒಟ್ಟು 80 ಸರ್ಕಾರಿ ಆಯುಷ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಆ ಪೈಕಿ, 55 ಆಸ್ಪತ್ರೆಗಳಿಗೆ ಸಿಬ್ಬಂದಿಗಳಿದ್ದರೆ, 25 ಆಸ್ಪತ್ರೆಗಳಲ್ಲಿ ಕೊರತೆ ಇದೆ’ ಎಂದರು.

‘ರಾಷ್ಟ್ರೀಯ ಆಯುಷ್ ಅಭಿಯಾನದಡಿ ಇಬ್ಬರು ತಜ್ಞ ವೈದ್ಯರು ಒಳಗೊಂಡಂತೆ ಎಂಟು ಸಿಬ್ಬಂದಿಯನ್ನು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಈ ಆಸ್ಪತ್ರೆಗಳಲ್ಲಿ ಒಳರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ’ ಎಂದರು.

ಹಿಮೊಫೀಲಿಯಾ ಪತ್ತೆ ಹಚ್ಚಲು ಕ್ರಮ

‘ಹಿಮೊಫೀಲಿಯಾ ಮತ್ತು ರಕ್ತಹೀನತೆ ಸಂಬಂಧಿಸಿದ ಕಾಯಿಲೆಗಳನ್ನು ಪತ್ತೆಹಚ್ಚಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿಯ ಎಸ್. ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಎರಡೂ ಕಾಯಿಲೆಗಳು ಅನುವಂಶಿಕ ಇಲ್ಲವೇ ಹುಟ್ಟಿನಿಂದ ಬರುವ ಕಾಯಿಲೆಗಳಾಗಿವೆ. ಈ ರೋಗಕ್ಕೆ ತುತ್ತಾದವರಿಗೆ ರಾಜ್ಯ ರಕ್ತ ಕೋಶ ಕಾರ್ಯಕ್ರಮದಡಿ ಉಚಿತ ಚಿಕಿತ್ಸೆ ಮತ್ತು ಆರೈಕೆಯನ್ನು ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಗಳು ಮತ್ತು ವೈದ್ಯಕೀಯ ಆಸ್ಪತ್ರೆಗಳಲ್ಲಿ 6ರಿಂದ 8 ಹಾಸಿಗೆಗಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT