ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಉದ್ಯಮಿ ಜಯಸುಧಾ ‘ಸ್ವಾವಲಂಬನೆ’ ಯಶೋಗಾಥೆ

Published : 29 ಆಗಸ್ಟ್ 2024, 22:30 IST
Last Updated : 29 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಬೆಂಗಳೂರು: ಒಂದೆಡೆ ದಿನದ ಬದುಕು ದೂಡಬೇಕಾದ ಅನಿವಾರ್ಯತೆ. ಇನ್ನೊಂದೆಡೆ ಬೆಳೆದು ನಿಂತ ಮೂವರು ಮಕ್ಕಳಿಗೆ ಭವಿಷ್ಯ ಕಟ್ಟಿಕೊಡಬೇಕಾದ ಹೊಣೆಗಾರಿಕೆ. ಕುಟುಂಬದ ದೈನಂದಿನ ಅಗತ್ಯಗಳಿಗೆ ಹಣ ಒದಗಿಸಲೂ ಒದ್ದಾಡುತ್ತಿದ್ದ ಹೆಣ್ಣುಮಗಳೀಗ ನಾಲ್ಕಾರು ಮಂದಿಗೆ ಕೆಲಸ ನೀಡಿರುವ ಉದ್ಯಮಿ. . .

ಕೋಲಾರದ ಜಯಸುಧಾ ಅವರು ಉದ್ಯಮಿಯಾಗಿ ಬದುಕು ಕಟ್ಟಿಕೊಂಡ ಬಗೆ ಸ್ಫೂರ್ತಿದಾಯಕವಾದುದು. ದಿನಗೂಲಿ ಎಂದು ಕಷ್ಟಪಡುತ್ತಿದ್ದ ಜಯಸುಧಾಗೆ ಸರ್ಕಾರದ ‘ಸ್ವಾವಲಂಬನೆ’ ಯೋಜನೆಯ ಮಾತು ಕಿವಿಗೆ ಬಿದ್ದಿತ್ತು. ತಮ್ಮೂರಿನ ಸ್ವಸಹಾಯ ಗುಂಪನ್ನು ಎಡತಾಕಿದ ಅವರು, ಉದ್ಯಮಿಯಾಗುವ ಕನಸು ಕಂಡರು. ಕರ್ನಾಟಕ ಜೀವನೋಪಾಯ ಇಲಾಖೆಯ ಸ್ವಾವಲಂಬನೆ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಮತ್ತು ಆರ್ಥಿಕ ನೆರವು ಪಡೆದ ಅವರು, ಉದ್ಯಮ ಆರಂಭಿಸಿಯೇಬಿಟ್ಟರು.

ತಾವೇ ರೂಪಿಸಿದ ಅಡುಗೆ ಸಾಮಗ್ರಿಗಳನ್ನು ಪೊಟ್ಟಣಕ್ಕೆ ತುಂಬಿ ಮಾರಾಟ ಮಾಡಲಾರಂಭಿಸಿದರು. ಒಂದೆರಡು ಉತ್ಪನ್ನಗಳಿಂದ ಆರಂಭವಾದ ಉದ್ಯಮ, ಹತ್ತಾರು ಉತ್ಪನ್ನಗಳಿಗೆ ವಿಸ್ತರಿಸಿತು. ರಾಗಿ, ಸಿರಿಧಾನ್ಯ ಹಾಗೂ ಮಿಶ್ರಧಾನ್ಯಗಳ ಹಿಟ್ಟು... ಹೀಗೆ ಅವರ ಉತ್ಪನ್ನಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ವೈಯಕ್ತಿಕ ಆರೋಗ್ಯ ನಿರ್ವಹಣೆಯ ಉತ್ಪನ್ನಗಳನ್ನೂ ತಯಾರಿಸಿ ಮಾರಾಟ ಮಾಡುವ ಜಯಸುಧಾ ಅವರ ಉದ್ಯಮದ ವಾರ್ಷಿಕ ವಹಿವಾಟು ಈಗ ಎರಡು ಲಕ್ಷ ರೂಪಾಯಿ ದಾಟುತ್ತದೆ.

ಜೀವನೋಪಾಯ ಇಲಾಖೆಯು ಬೆಂಗಳೂರಿನಲ್ಲಿ ಗುರುವಾರ ಆಯೋಜಿಸಿದ್ದ ‘ಗ್ರಾಮೀಣ ಪ್ರದೇಶದ ಉದ್ಯಮಶೀಲ ಮಹಿಳೆಯರ ರಾಷ್ಟ್ರೀಯ ಸಮಾವೇಶ’ದಲ್ಲಿ ಜಯಸುಧಾ ಅವರು ತೆರೆದಿಟ್ಟ ಯಶೋಗಾಥೆಯ ವಿವರಗಳಿವು. ಅವರೊಬ್ಬರೇ ಅಲ್ಲ, ಅಂತಹ 150 ಮಹಿಳಾ ಉದ್ಯಮಿಗಳು ಸ್ವಾವಲಂಬಿ ಕಾರ್ಯಕ್ರಮದ ಮೂಲಕ ತಾವು ಉದ್ಯಮಿಗಳಾದ ಬಗೆಯನ್ನು ಸಮಾವೇಶದಲ್ಲಿ ವಿವರಿಸಿದರು. ಅವರೆಲ್ಲರನ್ನೂ ಗೌರವಿಸಲಾಯಿತು.

ಸ್ವಾವಲಂಬನೆ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಅನುದಾನ ಮತ್ತು ಸಾಲದ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ಜತೆಗೆ ಲೆಕ್ಕಪತ್ರ ನಿರ್ವಹಣೆ, ವ್ಯಾಪಾರ–ವಹಿವಾಟಿನ ರೂಪುರೇಷೆಗಳು, ಬ್ರ್ಯಾಂಡಿಂಗ್‌, ಮಾರಾಟ ಮತ್ತು ಮಾರಾಟಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.

ಜಿಲ್ಲಾಮಟ್ಟಕ್ಕೆ ವಿಸ್ತರಣೆ: ಶರಣ ಪ್ರಕಾಶ್ ‘ಸ್ವಾವಲಂಬನೆ ಕಾರ್ಯಕ್ರಮವನ್ನು ಜಿಲ್ಲಾಮಟ್ಟಕ್ಕೆ ವಿಸ್ತರಿಸಲಾಗುತ್ತದೆ’ ಎಂದು ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ ಹೇಳಿದರು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಆರಂಭದಲ್ಲಿ 150 ಮಹಿಳಾ ಸ್ವಸಹಾಯ ಗುಂಪುಗಳಿಗೆ ಈ ಯೋಜನೆ ತಲುಪಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಗುರಿಯನ್ನೂ ಮೀರಿ ಯೋಜನೆ ಯಶಸ್ವಿಯಾಗಿದೆ. 40000 ಮಹಿಳೆಯರು ನೆರವಿಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದರು. ಯೋಜನೆ ಅಡಿ ತಯಾರಿಸಲಾದ ಉತ್ಪನ್ನಗಳ ಮಾರಾಟಕ್ಕೆ ‘ಸಂಜೀವಿನಿ’ ಎಂಬ ಇ–ಮಾರುಕಟ್ಟೆ ಪೋರ್ಟಲ್‌ ಅನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT