ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಮಧುಬಲೆ (ಹನಿ ಟ್ರ್ಯಾಪ್) ಪ್ರಕರಣ ಭಾರಿ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬುಧವಾರ ಇಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗಾಗಿ ರಾಷ್ಟ್ರ ರಾಜಧಾನಿಗೆ ಬಂದಿರುವ ಜಾರಕಿಹೊಳಿ ಅವರು ಸಂಸತ್ ಭವನದಲ್ಲಿ ಕುಮಾರಸ್ವಾಮಿ ಜತೆಗೆ ಸುಮಾರು 40 ನಿಮಿಷ ಚರ್ಚಿಸಿದರು. ಇದೇ ವೇಳೆ, ದೇವೇಗೌಡರನ್ನು ಭೇಟಿ ಮಾಡಿ ಸಮಾಲೋಚಿಸಿದರು.

ಮಧುಬಲೆ ಪ್ರಕರಣ ಸಂಬಂಧ ರಾಷ್ಟ್ರೀಯ ನಾಯಕರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಜಾರಕಿಹೊಳಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದರು. ಅದರ ಬೆನ್ನಲ್ಲೇ, ಜೆಡಿಎಸ್ನ ಉನ್ನತ ನಾಯಕರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

‘ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಹಲವು ಪ್ರಸ್ತಾವಗಳು ಕೇಂದ್ರದಲ್ಲಿ ಅನುಮೋದನೆಗೆ ಬಾಕಿ ಉಳಿದಿವೆ. ಕಳೆದ 20 ತಿಂಗಳಲ್ಲಿ ಹತ್ತು ಬಾರಿ ಗಡ್ಕರಿ ಅವರನ್ನು ಭೇಟಿ ಮಾಡಿದ್ದೇನೆ. 11 ಯೋಜನೆಗಳ ಅನುಷ್ಠಾನಕ್ಕೆ ಇದ್ದ ತೊಡಕುಗಳನ್ನು ಬಗೆಹರಿಸಲಾಗಿದೆ. ಶಿರಾಡಿ ಸುರಂಗ ಮಾರ್ಗ ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ಕೊಡಿಸಲು ಸಹಕಾರ ನೀಡಬೇಕು’ ಎಂದು ಜಾರಕಿಹೊಳಿ ಮನವಿ ಮಾಡಿದರು. ‘ಅಭಿವೃದ್ಧಿ ವಿಷಯಗಳಲ್ಲಿ ರಾಜಕೀಯ ಬೆರೆಸುವುದಿಲ್ಲ. ಸಚಿವರ ಮೇಲೆ ಒತ್ತಡ ಹೇರುತ್ತೇನೆ’ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಮಧುಬಲೆ ಪ್ರಕರಣದ ಬಗ್ಗೆ ಜಾರಕಿಹೊಳಿ ಪ್ರಸ್ತಾಪಿಸಿ, ‘ಪ್ರಭಾವಿ ನಾಯಕರ ರಾಜಕೀಯ ಜೀವನ ಮುಗಿಸಲು ಈ ಷಡ್ಯಂತ್ರ ನಡೆಸುತ್ತಿರುವುದು ಕಳವಳಕಾರಿ’ ಎಂದರು. ಆಗ ಕುಮಾರಸ್ವಾಮಿ, ‘ಇದೊಂದು ನೀಚ ತಂತ್ರ. ಇತ್ತೀಚಿನ ವರ್ಷಗಳಲ್ಲಿ ಈ ಕುತಂತ್ರ ಜಾಸ್ತಿ ಆಗಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅಭಿಪ್ರಾಯಪಟ್ಟರು ಎಂಬುದಾಗಿ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಭೇಟಿ ಬಗ್ಗೆ ಇಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿಗೆ ಮರಳಿದ ಬಳಿಕ ವಿಸ್ತೃತವಾಗಿ ಮಾತನಾಡುತ್ತೇನೆ
ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.