ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎಂ– ಡಿಸಿಎಂ ‘ನ್ಯಾಯ’ ಪರೀಕ್ಷೆ ಇಂದು

ಹೈಕೋರ್ಟ್‌ ‘ಪೀಠ‘ಗಳತ್ತ ಕುತೂಹಲದ ಚಿತ್ತ
Published : 28 ಆಗಸ್ಟ್ 2024, 23:30 IST
Last Updated : 28 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧದ ಎರಡು ಪ್ರತ್ಯೇಕ ಪ್ರಕರಣಗಳ ಭವಿಷ್ಯ ಗುರುವಾರ ನಿರ್ಧಾರವಾಗಲಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿದ ಕ್ರಮ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಅಭಯ ನೀಡಿದ್ದು, ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟಕ್ಕೂ ಸರ್ಕಾರ ಅಣಿಯಾಗಿದೆ.  ರಾಜಭವನದ ವಿರುದ್ಧ ವಿವಿಧ ಹಂತದ ಹೋರಾಟದ ಸರಣಿಯನ್ನು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ.

ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಕಾಯ್ದಿರಿಸಿದ ತೀರ್ಪು ಇಂದೇ ಪ್ರಕಟವಾಗಲಿದೆ. ಸರ್ಕಾರಕ್ಕೆ ಹೆಗಲುಕೊಟ್ಟಿರುವ ಇಬ್ಬರು ನಾಯಕರ ಕಾನೂನು ಸಮರದ ‘ನ್ಯಾಯ’ ಪರೀಕ್ಷೆ ಇಂದು ನಡೆಯಲಿದೆ. ಹೀಗಾಗಿ, ಆಡಳಿತಾರೂಢ ಪಕ್ಷಕ್ಕೆ ಇಂದು ನಿರ್ಣಾಯಕ ದಿನವಾಗಿದೆ.

ಆಸ್ತಿ ಗಳಿಕೆ: ಡಿಕೆಶಿ ವಿರುದ್ಧದ ಆರೋಪ

ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ಸಿಬಿಐಗೆ ಅನುಮತಿ ನೀಡಿದ್ದ ಆದೇಶವನ್ನು; ಕಾಂಗ್ರೆಸ್ ನೇತೃತ್ವದ ಈಗಿನ ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿ ದಾಖಲಾಗಿರುವ ಎರಡು ಪ್ರತ್ಯೇಕ ರಿಟ್‌ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿರುವ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಕಾಯ್ದಿರಿಸಿರುವ ತೀರ್ಪನ್ನು ಗುರುವಾರ (ಆ.29) ಪ್ರಕಟಿಸಲಿದೆ.

ಈ ಸಂಬಂಧ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್‌ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ಪೂರೈಸಿ ತೀರ್ಪು ಕಾಯ್ದಿರಿಸಿದೆ. ಶಿವಕುಮಾರ್ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ ವಕೀಲ ಕಪಿಲ್‌ ಸಿಬಲ್‌, ಯತ್ನಾಳ ಪರ ವೆಂಕಟೇಶ್‌ ಪಿ.ದಳವಾಯಿ ಮತ್ತು ಸಿಬಿಐ ಪರ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

ರಾಜ್ಯ ಸರ್ಕಾರದ ಸಂಪುಟದ ನಿರ್ಣಯ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಈ ಅರ್ಜಿಯಲ್ಲಿ, ‘ತನಿಖೆಗೆ ನೀಡಲಾಗಿರುವ ಅನುಮತಿ ಹಿಂಪಡೆದಿರುವುದು ತಪ್ಪು. ಅನುಮತಿ ಹಿಂಪಡೆದಿರುವುದರಿಂದ ತನಿಖೆಗೆ ಯಾವುದೇ ತೊಂದರೆ ಇಲ್ಲ’ ಎಂಬುದು ಸಿಬಿಐ ಪ್ರತಿಪಾದನೆ. 

ಒಂದು ವೇಳೆ ಶಿವಕುಮಾರ್ ಮನವಿಗೆ ವಿರುದ್ಧವಾದ ತೀರ್ಪು ಬಂದರೆ ಅವರು ಸು‍ಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಸಿಬಿಐ ವಾದವನ್ನು ತಳ್ಳಿ ಹಾಕಿದರೆ ಆಗ ಸಿಬಿಐ ತನ್ನ ನಿರ್ಧಾರ ಕೈಗೊಳ್ಳಲಿದೆ. 

‘ಒಂದು ವೇಳೆ ಇದರಲ್ಲಿ ಭಿನ್ನ ತೀರ್ಪು ಪ್ರಕಟ ವಾದರೆ ಏನು’ ಎಂಬ ಜಿಜ್ಞಾಸೆ ನ್ಯಾಯಾಂಗದ ವಲಯದಲ್ಲಿ ಕುತೂಹಲ ಕೆರಳಿಸಿದೆ. ‘ಒಂದು ವೇಳೆ ಭಿನ್ನ ತೀರ್ಪು ಹೊರಬಂದರೆ ಈ ತೀರ್ಪನ್ನು ಏಕಸದಸ್ಯ ನ್ಯಾಯಪೀಠ ಮರು ವಿಚಾರಣೆ ನಡೆಸಲಿದೆ’ ಎನ್ನುತ್ತಾರೆ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ. 

ಸಿಎಂ ವಿರುದ್ಧದ ‘ಮುಡಾ’ ಪ್ರಕರಣ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮಕ್ಕೆ ಸಂಬಂಧಿಸಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತು ತೀರ್ಮಾನ ಗುರುವಾರ ಹೊರಬೀಳುವ ಸಂಭವ ಇದೆ.

‘ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನನಗೆ ನೀಡಿದ್ದ ಷೋಕಾಸ್‌ ನೋಟಿಸ್‌ಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ 2024ರ ಆಗಸ್ಟ್ 1ರಂದು ಸಲಹೆಯೊಂದನ್ನು ನೀಡಿತ್ತು. ಅದನ್ನು ಧಿಕ್ಕರಿಸಿರುವ ರಾಜ್ಯಪಾಲರು, ನನ್ನ ವಿರುದ್ಧದ ತನಿಖೆಗೆ ಅನುಮತಿ ನೀಡಿದ್ದಾರೆ. ಈ ನಿರ್ಧಾರ ಅಸಾಂವಿಧಾನಿಕವಾಗಿದ್ದು, ಕಾನೂನಿನ ಎಲ್ಲಾ ಅಂಶಗಳನ್ನೂ ಗಾಳಿಗೆ ತೂರಿರುವ ಇಂತಹ ಆದೇಶವನ್ನು ವಜಾ ಮಾಡಬೇಕು’ ಎಂದು  ಸಿದ್ದರಾಮಯ್ಯ ಕೋರಿದ್ದಾರೆ.

ಈ ಸಂಬಂಧ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದು, ‘ಅರ್ಜಿಯ ಅರ್ಹತೆ ಮೇಲಿನ ವಿಚಾರಣೆ ಆಲಿಸಿ ಆ.29ರಂದೇ ಅರ್ಜಿ ವಿಲೇವಾರಿ ಮಾಡಲಾಗುವುದು’ ಎಂದು ಮೌಖಿಕವಾಗಿ ತಿಳಿಸಿದ್ದರು.

‘ಒಂದು ವೇಳೆ ಸಿದ್ದರಾಮಯ್ಯ ಅವರ ಅರ್ಜಿ ತಿರಸ್ಕೃತಗೊಂಡರೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅಥವಾ ಇಲ್ಲೇ ರಿಟ್‌ ಅಪೀಲು ಸಲ್ಲಿಸುವುದಕ್ಕೂ ಅವಕಾಶವಿದೆ. ಅದೇ ರೀತಿ ನ್ಯಾಯಪೀಠವು ರಾಜ್ಯಪಾಲರಿಗೆ, ನಿಮ್ಮ ಆದೇಶವನ್ನು ಮರು ಪರಿಶೀಲಿಸಿ ಎಂದು ನಿರ್ದೇಶಿಸಲೂ ಸಾಧ್ಯತೆ ಇದೆ’ ಎಂಬುದು ಹೈಕೋರ್ಟ್‌ನ ಹಿರಿಯ ವಕೀಲರ ಅಭಿಪ್ರಾಯ.

ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ಪ್ರತಿವಾದಿಗಳಾದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಎಸ್.ತುಷಾರ್ ಮೆಹ್ತಾ, ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಫಿರ್ಯಾದುದಾರರಾದ ಎಸ್‌.ಪಿ.ಪ್ರದೀಪ್‌ ಕುಮಾರ್‌ ಪರ ಹಿರಿಯ ವಕೀಲರಾದ ಪ್ರಭುಲಿಂಗ ಕೆ.ನಾವದಗಿ ಮತ್ತು ಎಂ.ಎಚ್‌.ಪ್ರಕಾಶ್‌, ಸ್ನೇಹಪ್ರಿಯ ಕೃಷ್ಣ ಪರ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್‌, ಕೆ.ಜಿ.ರಾಘವನ್‌, ಸಿ.ವಿ.ನಾಗೇಶ್‌ ಮತ್ತು ವಸಂತ ಕುಮಾರ್, ಟಿ.ಜೆ.ಅಬ್ರಹಾಂ ಪರ ಆರ್.ಆರ್‌.ರಂಗನಾಥ ರೆಡ್ಡಿ ಹಾಜರಿದ್ದರು.

‘ಏನೇ ತೀರ್ಪು ಬಂದರೂ ಸಿ.ಎಂ ಜೊತೆ ಹೈಕಮಾಂಡ್’

‘ಮುಡಾ ನಿವೇಶನ ಹಂಚಿಕೆ ಪ್ರಕರಣ ದಲ್ಲಿ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರದಲ್ಲಿ ನ್ಯಾಯಾಲಯ ಏನೇ ತೀರ್ಪು ನೀಡಿದರೂ, ಹೈಕಮಾಂಡ್ ಮತ್ತು ನಾವೆಲ್ಲರೂ ಮುಖ್ಯಮಂತ್ರಿ ಬೆನ್ನಿಗೆ ನಿಲ್ಲುತ್ತೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

‘ರಾಜ್ಯಪಾಲರ ನಿರ್ಣಯವನ್ನು ಕೋರ್ಟ್ ಪರಿಗಣಿಸುವುದಿಲ್ಲ ಎಂಬ ನಿರೀಕ್ಷೆಯಿದೆ‌. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಹಿ, ಯಾವುದೇ ರೀತಿಯ ಪುರಾವೆಗಳು ಇಲ್ಲ. ನೋಂದಣಿಯಲ್ಲಿಯೂ ಅವರ ಹೆಸರು ಉಲ್ಲೇಖವಾಗಿಲ್ಲ. ಅದೆಲ್ಲವನ್ನು ಗಮನಿಸಿ ನ್ಯಾಯಾಲಯ ಆದೇಶ ಕೊಡುವ ನಿರೀಕ್ಷೆಯಿದೆ’ ಎಂದರು.

‘ಬಿಜೆಪಿ ಆಡಳಿತ‌ ನಡೆಸುತ್ತಿರುವ ಸರ್ಕಾರಗಳು, ಕೇಂದ್ರ ಸರ್ಕಾರದ ಮೇಲೆಯೂ ಭ್ರಷ್ಟಚಾರದ ಆರೋಪಗಳಿಲ್ಲವೇ? ನಮ್ಮ ಸರ್ಕಾರದ ಮೇಲೆ ಬಂದಿರುವ ಆರೋಪಗಳು ನಿರಾಧಾರ ಎಂಬುದನ್ನು ನಾವು ಸಾಬೀತುಪಡಿಸುತ್ತೇವೆ. ನ್ಯಾಯಾಲಯದ ಆದೇಶ ಬಂದ ಬಳಿಕ ರಾಷ್ಟ್ರಪತಿಯನ್ನು ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದೂ ಹೇಳಿದರು.

ಮೈತ್ರಿ ಪಕ್ಷಗಳ ನಾಯಕರ ಪ್ರಾಸಿಕ್ಯೂಷನ್‌ಗೆ ಒತ್ತಾಯಿಸಿ ರಾಜಭವನ ಚಲೊ ಹಮ್ಮಿಕೊಂಡಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ, ‘ರಾಜ್ಯಪಾಲರ ನಡೆಯ ಬಗ್ಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಪಕ್ಷದ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆಯನ್ನೂ ಹಮ್ಮಿಕೊಳ್ಳುತ್ತೇವೆ. ನ್ಯಾಯಾಲಯದ ಆದೇಶ ಬಂದ ಬಳಿಕ ರಾಷ್ಟ್ರಪತಿಯನ್ನು ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದೂ ಹೇಳಿದರು.

‘ಬಿಜೆಪಿಯವರು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದಾದರೆ, ನಾವು ಕೂಡಾ ರಾಷ್ಟ್ರಮಟ್ಟದಲ್ಲೇ ಮಾಡಬೇಕಲ್ಲವೇ? ನಮ್ಮ ಪಕ್ಷ ಮಾತ್ರ ಹೋರಾಟ ಮಾಡಲಿದೆಯೇ ಅಥವಾ ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಪಕ್ಷಗಳನ್ನೂ ಸೇರಿಸಿ ಮಾಡಬೇಕೇ ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ’ ಎಂದರು.

‘ರಾಹುಲ್ ಗಾಂಧಿ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದ್ದು ನಿಜ. ಪಕ್ಷದ ವಿಚಾರದಲ್ಲಿ ಅವರು ನನಗೆ ಏನು ಹೇಳಬೇಕೊ ಅದನ್ನು ಹೇಳಿದ್ದಾರೆ. ಅದು ಬಿಟ್ಟು ಬೇರೆ ಏನೂ ಮಾತನಾಡಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT