ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನುದಾನ ಸಿಗದಿರಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಬಸವರಾಜ ಬೊಮ್ಮಾಯಿ

Published 20 ಫೆಬ್ರುವರಿ 2024, 15:29 IST
Last Updated 20 ಫೆಬ್ರುವರಿ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯೂ ಸೇರಿ ಕೆಲವು ಯೋಜನೆಗಳಲ್ಲಿ ಕೇಂದ್ರದಿಂದ ಹಣ ಬರದೇ ಇರಲು ರಾಜ್ಯ ಸರ್ಕಾರದ ನಿರ್ಲಕ್ಷವೇ ಕಾರಣ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಮಂಗಳವಾರ ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರ ನೀಡುವಾಗ ಮಧ್ಯ ಪ್ರವೇಶಿಸಿದ ಬೊಮ್ಮಾಯಿ, ಕೇಂದ್ರದಿಂದ ಹಣ ತೆಗೆದುಕೊಳ್ಳುವುದು ಹೇಗೆ ಎನ್ನುವುದೇ ನಿಮಗೆ ಗೊತ್ತಿಲ್ಲ. ಈಗ ಅನಗತ್ಯ ಆರೋಪ ಮಾಡುತ್ತಿದ್ದೀರಿ. ರಾಜಕೀಯ ಲಾಭಕ್ಕೆ ಕೇಂದ್ರದ ವಿರುದ್ದ ಆರೋಪ ಮಾಡಿ, ರಾಜ್ಯದ ಜನತೆಗೆ ಪಂಗನಾಮ ಹಾಕುತ್ತಿದ್ದೀರಿ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗಾಗಿ ಕೇಂದ್ರ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ₹5,300 ಕೋಟಿ ಇಟ್ಟಿದೆ. ಆದರೆ, ಅದನ್ನು ಪಡೆಯಲು ನಿಗದಿತ (ಎನ್‌) ಅರ್ಜಿ ಫಾರಂ ಸಲ್ಲಿಸಬೇಕಿತ್ತು. ಆ ವಿಚಾರ ನಿಮಗೆ ಗೊತ್ತಾ? ನೀರಾವರಿ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೆ ಅಂತಹದ್ದೊಂದು ಅರ್ಜಿ ಸಲ್ಲಿಸಿದ್ದಾರಾ? ನೀವು ಅಧಿಕಾರಕ್ಕೆ ಬಂದು 9 ತಿಂಗಳು ಆಯಿತು. ಕೇವಲ ದೂರುವುದನ್ನು ಬಿಟ್ಟು ಇನ್ನೇನು ಮಾಡಿದ್ದೀರಿ. ಟೀಕೆ ಮಾಡಿದರೆ ಅಥವಾ ಕೇಂದ್ರ ಸಚಿವರು ಭೇಟಿ ಮಾಡಿ ಮನವಿ ಮಾಡಿದ ತಕ್ಷಣ ಹಣ ಬರುವುದಿಲ್ಲ. ಭದ್ರಾ ಮೇಲ್ದಂಡೆಗೆ ಹಣ ಬಂದಿಲ್ಲವಾದರೆ ಅದಕ್ಕೆ ನೀವೇ ಕಾರಣ ಎಂದು ಬೊಮ್ಮಾಯಿ ಹೇಳಿದರು. 

ಬೆಂಗಳೂರಿನ ಪೆರಿಫೆರಲ್‌ ರಸ್ತೆಗೆ ₹6,000 ಕೋಟಿ ಕೇಂದ್ರದ ಅನುದಾನ ಲಭ್ಯ ಇದೆ. ಆದರೆ ಯೋಜನೆಗೆ ಭೂಸ್ವಾಧೀನವೇ ಆಗಿಲ್ಲ. ಭೂಸ್ವಾಧೀನದ ಸಮಸ್ಯೆಯ ಕಾರಣ ಯಾರೂ ಟೆಂಡರ್‌ನಲ್ಲಿ ಭಾಗವಹಿಸಲು ಬರುತ್ತಿಲ್ಲ. ಆದ್ದರಿಂದ ಆ ಹಣ ಹಾಗೇ ಉಳಿದಿದೆ. ಈಗ ಡಿ.ಕೆ.ಶಿವಕುಮಾರ್ ಅವರು ಮತ್ತೊಮ್ಮೆ ಟೆಂಡರ್‌ ಕರೆಯುವುದಾಗಿ ಹೇಳಿದ್ದಾರೆ. ಯೋಜನೆ ಆರಂಭವಾದ ತಕ್ಷಣವೇ ಕೇಂದ್ರದಿಂದ ಅನುದಾನ ಬರುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ₹5,495 ಕೋಟಿ ಶಿಫಾರಸು ಮಾಡಿದ್ದು ನಿಜ. ಇದೇ ರೀತಿ ಹಲವು ರಾಜ್ಯಗಳಿಗೂ ಶಿಫಾರಸು ಮಾಡಿತ್ತು . ಅಂತಿಮ ವರದಿಯಲ್ಲಿ ಆಯೋಗ ಆ ಅಂಶವನ್ನು ಕೈಬಿಟ್ಟಿದ್ದರಿಂದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೂ ಹಣ ರದ್ದಾಯಿತು. ಸ್ವತಂತ್ರ ಸಂಸ್ಥೆಯಾದ ಆಯೋಗ ರದ್ದು ಮಾಡಿದ್ದಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಗೆ ಕಾರಣರಾಗುತ್ತಾರೆ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT