ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸೀದಿ ಬಳಿ ಮೆರವಣಿಗೆ ಹೋಗಬಾರದು ಎನ್ನಲು ರಾಜ್ಯ ಇಸ್ಲಾಮಿಕ್ ರಿಪಬ್ಲಿಕ್ಕಾ?: ಅಶೋಕ

Published : 13 ಸೆಪ್ಟೆಂಬರ್ 2024, 11:17 IST
Last Updated : 13 ಸೆಪ್ಟೆಂಬರ್ 2024, 11:17 IST
ಫಾಲೋ ಮಾಡಿ
Comments

ಬೆಂಗಳೂರು: ನಾಗಮಂಗಲದಲ್ಲಿ ಮುಸ್ಲಿಂ ಮತಾಂಧರನ್ನು ಓಲೈಸಲು ಹಿಂದೂಗಳ ವಿರುದ್ಧವೇ ತಪ್ಪು ಎಫ್‌ಐಆರ್‌ ದಾಖಲಿಸಲು ಕಾರಣರಾದ ಪೊಲೀಸರನ್ನು ಕೂಡಲೇ ಅಮಾನತು ಮಾಡಬೇಕು. ಎಫ್‌ಐಆರ್‌ನಲ್ಲಿ ಕೇವಲ ಹಿಂದೂಗಳನ್ನು ಮಾತ್ರ ಟಾರ್ಗೆಟ್ ಮಾಡುವ ಹುನ್ನಾರ ಕೈ ಬಿಡದಿದ್ದರೆ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸರಣಿ ‘ಎಕ್ಸ್‌’ ಮಾಡಿರುವ ಅವರು ಸರ್ಕಾರಕ್ಕೆ ಪ್ರಶ್ನೆಗಳನ್ನೂ ಕೇಳಿದ್ದಾರೆ.

ರಾಜ್ಯದಲ್ಲಿ ಮೂಲಭೂತವಾದಿಗಳಿಗೆ ಬೆಂಬಲ ನೀಡುವ ತಾಲಿಬಾನ್ ಸರ್ಕಾರವಿದೆ. ಈ ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಮತಾಂಧರನ್ನು ಓಲೈಸಲು ಹಿಂದೂಗಳನ್ನು ಬಲಿಕೊಡಲು ಸಿದ್ಧವಿದೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು ಗಲಭೆ ಮತ್ತು ಘಟನೆಯ ನಂತರ ಗೃಹ ಸಚಿವ ಜಿ.ಪರಮೇಶ್ವರ್ ಅವರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದ ಹೇಳಿಕೆ ಗಮನಿಸಿದರೆ ರಾಜ್ಯದಲ್ಲಿ ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ತಾಲಿಬಾನ್‌ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.

ಗಣೇಶ ವಿಸರ್ಜನೆಯ ಮೆರವಣಿಗೆಗೆ ಕಾದು, ಕಲ್ಲುಗಳ, ರಾಶಿ, ಪೆಟ್ರೋಲ್ ಬಾಂಬು, ತಲ್ವಾರ್‌ಗಳನ್ನು ಸಂಗ್ರಹಿಸಿಕೊಟ್ಟುಕೊಂಡು ಸಂಪೂರ್ಣ ಪೂರ್ವ ನಿಯೋಜಿತವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದುಷ್ಕೃತ್ಯ ನಡೆಸಲಾಗಿದೆ. ಇದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಇದು ಆಕಸ್ಮಿಕ ಘಟನೆ ಎಂದು ಸರ್ಕಾರ ತಿಪ್ಪೆ ಸಾರಿಸುತ್ತಿದೆ. ಮುಸ್ಲಿಂ ಮತಾಂಧರನ್ನು ಓಲೈಕೆ ಮಾಡಲು, ಹಿಂದೂಗಳನ್ನು ಬಲಿಕೊಡಲು ಸಿದ್ಧ ಎಂದು ಸರ್ಕಾರ ನಿರ್ಧಾರ ಮಾಡಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ, ವಾಹನಗಳಿಗೆ ಬೆಂಕಿ ಹಚ್ಚುವುದು, ಶೋರೂಂಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮುಂತಾದ ದುಷ್ಕೃತ್ಯ ಎಸಗಿದ ಪುಂಡರನ್ನು ಪತ್ತೆ ಹಚ್ಚಿ, ಉತ್ತರ ಪ್ರದೇಶದ ಮಾದರಿಯಲ್ಲಿ ಅವರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಮಾಡಿದರೆ ಮಾತ್ರ ಇಂತಹವರಿಗೆ ತಕ್ಕ ಪಾಠ ಕಲಿಸಲು ಸಾಧ್ಯ. ಇಂತಹ ವಿಕೃತ ಮನಸ್ಥಿತಿಗೆ ಪೂರ್ಣವಿರಾಮ ಇಡಲು ಸಾಧ್ಯ ಎಂದು ಅಶೋಕ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT