ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆ ಸೀಳಿದರೆ ಒಂದಕ್ಷರ ಇಲ್ಲದವರು, ಪಂಕ್ಚರ್‌ ಹಾಕುವವರಿಂದ ಗಲಭೆ: ತೇಜಸ್ವಿ ಸೂರ್ಯ

Last Updated 22 ಡಿಸೆಂಬರ್ 2019, 17:03 IST
ಅಕ್ಷರ ಗಾತ್ರ

ಬೆಂಗಳೂರು: ‘ಎದೆಸೀಳಿದರೆಒಂದು ಅಕ್ಷರ ಇಲ್ಲದವರು, ಪಂಕ್ಚರ್‌ ಅಂಗಡಿ ಹಾಕಿಕೊಂಡವರಿಂದ ಇಂತಹ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ಹೆಸರಲ್ಲಿ ಗಲಭೆಗಳು ನಡೆಯುತ್ತಿವೆ,’ ಎಂದು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ನಗರದ ಟೌನ್‌ಹಾಲ್‌ನಲ್ಲಿ ಭಾನುವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ವಂದೇ ಮಾತರಂ ಸಂಘಟನೆ ಹಾಗೂ ಬಂಗಾಳಿ ಸಂಘಟನೆಗಳ ಸದಸ್ಯರು ಸೇರಿದಂತೆ ನೂರಾರು ಜನಘೋಷಣೆ ಕೂಗಿದರು. ಈ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ, ಇದು ಭಾರತೀಯರಿಗೆ ಪೂರಕವಾಗಿದೆ ಎಂದು ಅವರೆಲ್ಲರೂ ಪ್ರತಿಪಾದಿಸಿದರು.

ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ‘ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೆ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಾಗುತ್ತಿದೆ. ಕಾಯ್ದೆ ಬಗ್ಗೆ ಸರಿಯಾಗಿ ಓದದೆ ತಪ್ಪಾಗಿ ಅರ್ಥೈಸಿ ಗಲಭೆಗಳಿಗೆ ಕಾರಣರಾಗುತ್ತಿದ್ದಾರೆ.ಎದೆಸೀಳಿದರೆಒಂದು ಅಕ್ಷರ ಇಲ್ಲದವರು, ಪಂಕ್ಚರ್‌ ಅಂಗಡಿ ಹಾಕಿಕೊಂಡವರಿಂದ ಇಂತಹ ಗಲಭೆಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಪ್ರಕ್ರಿಯೆ ಸಂಬಂಧ ಕಾಂಗ್ರೆಸ್ ಸಾವಿನ ರಾಜಕೀಯ ಮಾಡುತ್ತಿದೆ’ ಎಂದೂ ಅವರು ದೂರಿದರು.

‘ಈ ಕಾಯ್ದೆಯಿಂದ ಭಾರತೀಯ ಮುಸ್ಲಿಂರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ. ಇದು ಮೂರು ದೇಶಗಳ ಅಲ್ಪ ಸಂಖ್ಯಾತರಿಗೆ ಪೌರತ್ವ ಕೊಡುವ ಕಾನೂನು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆದರೆ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಈ ವಿಷಯದಲ್ಲಿ ಪಿತೂರಿ ನಡೆಸುತ್ತಿವೆ’ ಎಂದು ಅವರು ಆರೋಪಿಸಿದರು.

‘ಪೌರತ್ವ ಕಾಯ್ದೆಯನ್ನು ಜಾರಿಗೆ ತರುವಂತೆ ಮನಮೋಹನ್‌ಸಿಂಗ್ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದರು. ಆದರೆ ಈಗ ಬಿಜೆಪಿ ಅದೇ ಕಾಯ್ದೆಯನ್ನು ಜಾರಿಗೆ ತಂದರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ಕೂಡ ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಅವರಂತೆ ಪ್ರಚೋದನಕಾರಿಯಾಗಿ ಮಾತನಾಡಿ, ಜನರನ್ನು ಸೇರಿಸಿದರೆ ಅವರು ಉಳಿಯುವುದೇ ಇಲ್ಲ’ ಎಂದೂ ವಾಗ್ದಾಳಿ ನಡೆಸಿದರು.

‘ಈ ಕಾಯ್ದೆಯಂತೆ ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಹೀಗಿದ್ದರೂ ಅವರು ರಸ್ತೆಗೆ ಇಳಿದು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಕಾಂಗ್ರೆಸ್ ಹಾಗೂ ಪ್ರತಿಭಟಿಸುತ್ತಿರುವ ಇತರ ಸಂಘಟನೆಯ ಮುಖಂಡರುಗಳ ದೇಶನಿಷ್ಠೆಯನ್ನು ಪ್ರಶ್ನಿಸುವ ಕಾಲ ಪಕ್ವವಾಗಿದೆ’ ಎಂದುತೇಜಸ್ವಿಸೂರ್ಯಹೇಳಿದರು.

ಯುವ ಬ್ರಿಗೇಡ್‌ ಮುಖಂಡ ಚಕ್ರವರ್ತಿ ಸೂಲಿಬೆಲೆ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ತೀರ್ಪು ಬಂದಾಗ ನಾವ್ಯಾರೂ ಪಟಾಕಿ ಹೊಡೆಯಲಿಲ್ಲ. ಗಲಾಟೆ ಮಾಡಲಿಲ್ಲ. ಆದರೆ, ಇವರು ಪ್ರತಿಭಟನೆ ಹೆಸರಲ್ಲಿ ನಮ್ಮ ಮಕ್ಕಳು ಶಾಲೆಗೆ ಹೋಗುವ ಬಸ್‌ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಪ್ರತಿಭಟನೆ ಹೇಗೆ ಮಾಡಬೇಕು ಎಂಬುದನ್ನು ಹಿಂದೂಗಳನ್ನು ನೋಡಿ ತಿಳಿದುಕೊಳ್ಳಿ’ ಎಂದರು.

ರ‍್ಯಾಲಿ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ, ಪುರಭವನ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪುರಭವನ ಕಟ್ಟಡದ ಮೇಲೆಯೂ ಹಲವು ಪೊಲೀಸರನ್ನು ನಿಯೋಜಿಸಲಾಗಿತ್ತು.

ಪುರಭವನ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಂಕ್‌ ನೌಕರರ ವಾರ್ಷಿಕ ಸಮ್ಮೇಳನ ಆಯೋಜಿಸಲಾಗಿತ್ತು. ಆದರೆ, ಪುರಭವನದ ಎದುರು ಕಾಯ್ದೆ ಪರ ಘೋಷಣೆ, ಧ್ವನಿವರ್ಧಕ ಬಳಕೆ ಮಾಡಿದ್ದರಿಂದ ಸಮ್ಮೇಳನಕ್ಕೆ ತೊಂದರೆಯಾಯಿತು ಎಂದು ಬ್ಯಾಂಕ್‌ ನೌಕರರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT