ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು ಜಿಲ್ಲೆಯ ವಸಂತ ನರಸಾಪುರದಲ್ಲಿ ಟೌನ್‌ಶಿಪ್‌: ಪ್ರಕ್ರಿಯೆಗೆ ಸೂಚನೆ

Published 12 ಜೂನ್ 2024, 14:23 IST
Last Updated 12 ಜೂನ್ 2024, 14:23 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ಜಿಲ್ಲೆ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ನಗರಾಭಿವೃದ್ಧಿ ಇಲಾಖೆಯಿಂದ ಸಂಯೋಜಿತ ಟೌನ್‌ಶಿಪ್‌ ನಿರ್ಮಾಣ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು, ಕಳೆದ ಮೂರು ತಿಂಗಳಲ್ಲಿ ನಡೆದಿರುವ ಕಾಮಗಾರಿಗಳು ಮತ್ತು ಕೈಗೊಂಡಿರುವ ಯೋಜನೆಗಳ ಪ್ರಗತಿಯ ವಿವರ ಪಡೆದರು.

ವಸಂತನರಸಾಪುರದ ಬಳಿ ಸುಮಾರು 500 ಎಕರೆ ಪ್ರದೇಶದಲ್ಲಿ ಸಂಯೋಜಿತ ಟೌನ್‌ಶಿಪ್‌ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಭಾಷಣದಲ್ಲಿ ಘೋಷಿಸಿದ್ದರು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿತ್ತು. ನೀತಿ ಸಂಹಿತೆ ಮುಕ್ತಾಯ ಆಗಿರುವುದರಿಂದ ಇನ್ನು ಟೌನ್‌ಶಿಪ್‌ ನಿರ್ಮಾಣದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.

ಹಾಸನ, ಚಿಕ್ಕಮಗಳೂರು, ಬೆಳಗಾವಿ ಮತ್ತು ಕೋಲಾರ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ರಸ್ತೆಗೆ ಡಾಂಬರೀಕರಣ, ರಸ್ತೆ ನಿರ್ಮಾಣ ಹಾಗೂ ರಿಂಗ್ ರಸ್ತೆ ನಿರ್ಮಾಣ ಮಾಡಲು ಕೆಲ ಅಡೆತಡೆಗಳು ಎದುರಾಗಿವೆ. ಮತ್ತೆ ಅಲ್ಪಾವಧಿಯ ಮರು ಟೆಂಡರ್‌ ಕರೆಯುವಂತೆ ಅವರು ನಿರ್ದೇಶನ ನೀಡಿದರು.

ಮಹಾನಗರ ಪಾಲಿಕೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚು ಇದ್ದರೆ, ಕಡಿಮೆ ಮಾನವ ಸಂಪನ್ಮೂಲ ಇರುವ ಜಾಗಕ್ಕೆ ನಿಯೋಜನೆ ಮಾಡಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸಿ ಎಂದು ಇಲಾಖಾ ಕಾರ್ಯದರ್ಶಿಯವರಿಗೆ ಸುರೇಶ್‌ ಸೂಚಿಸಿದರು.

ಎರವಲು ಸೇವೆ ಪಡೆಯಲು ಸಲಹೆ:

ಸಹಾಯಕ ಎಂಜಿನಿಯರ್‌ಗಳು, ಕಿರಿಯ ಎಂಜಿನಿಯರ್‌ಗಳು ಸೇರಿ ತಾಂತ್ರಿಕ ಸಿಬ್ಬಂದಿಯನ್ನು ಎರವಲು ಸೇವೆ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಬಾಕಿ ಉಳಿದಿರುವ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.

ಅಮೃತ್‌ 2.0 ಯೋಜನೆಯಡಿ ರಾಜ್ಯದ ನಗರ ಪ್ರದೇಶಗಳಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ತಗಲುವ ಹಣದ ವೆಚ್ಚ ಕುರಿತಂತೆ ಕ್ರಿಯಾ ಯೋಜನೆ ರೂಪಿಸುವಂತೆಯೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದರು.

ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶರತ್‌.ಬಿ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮೀಕಾಂತ ರೆಡ್ಡಿ  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT