ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ: ಹಂಪಿ ಸ್ಮಾರಕಗಳಿಗೆ ಧಕ್ಕೆ ಆತಂಕ

ಎರಡೂ ಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣ; ತಾಂತ್ರಿಕ ವರದಿಯಿಂದ ಬಹಿರಂಗ
Last Updated 17 ಜುಲೈ 2022, 19:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಅಡ್ಡಲಾಗಿ ನಿರ್ಮಿಸಿರುವ ಎರಡೂ ಸೇತುವೆಗಳು ಅವೈಜ್ಞಾನಿಕವಾಗಿದ್ದು, ಮುಂಬರುವ ವರ್ಷಗಳಲ್ಲಿ ಪ್ರವಾಹ ಬಂದುಹಂಪಿಯ ಸ್ಮಾರಕಗಳಿಗೆ ಧಕ್ಕೆಯಾಗಬಹುದು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ (ಎಎಸ್‌ಐ) ಸಲ್ಲಿಕೆಯಾಗಿರುವ ತಾಂತ್ರಿಕ ವರದಿಯಿಂದ ಗೊತ್ತಾಗಿದೆ.

ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ತಾಂತ್ರಿಕ ಸಹಾ ಯಕ ಸುಧೀರ್‌ ಸಜ್ಜನ್‌ ಅವರು ಎರಡೂ ಸೇತುವೆಗಳಿಂದ ಹಂಪಿಯಲ್ಲಾಗುವ ಸಮಸ್ಯೆ ಬಗ್ಗೆ ವರದಿ ಸಲ್ಲಿಸಿದ್ದು, ಅದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ.

1960ರಲ್ಲಿ ನಿರ್ಮಿಸಿದ್ದ ಕಂಪ್ಲಿ–ಗಂಗಾವತಿ ಹಳೆಯ ಸೇತುವೆ ಮತ್ತು 2017ರಲ್ಲಿ ಉದ್ಘಾಟನೆಗೊಂಡಿರುವ ತಾಲ್ಲೂಕಿನ ಬುಕ್ಕಸಾಗರ–ಕಡೇಬಾಗಿಲು ಸೇತುವೆಗಳನ್ನು ನದಿ ಹರಿಯುವ ವಿರುದ್ಧ ದಿಕ್ಕಿಗೆ ನಿರ್ಮಿಸಲಾಗಿದೆ. ಜಲಾಶಯದಿಂದ ನದಿಗೆ ನೀರು ಹರಿಸಿದಾಗ ಈ ಸೇತುವೆಗಳಿಂದ ಸುಗಮವಾಗಿ ಹರಿದು ಹೋಗುತ್ತಿಲ್ಲ. ಸೇತುವೆಗೆ ನೀರು ಬಂದು ವಿರುದ್ಧ ದಿಕ್ಕಿಗೆ ಹರಿಯುತ್ತಿದೆ. ಹೂಳು ಕೂಡಾ ಹಿಮ್ಮುಖವಾಗಿ ಹರಿದು ಹೋಗುತ್ತಿದೆ. ಇದರಿಂದಾಗಿ ಬರುವ ವರ್ಷಗಳಲ್ಲಿ ಸ್ಮಾರಕಗಳು ಮುಳುಗಿ ಧಕ್ಕೆಯಾಗುವ ಅಪಾಯವಿದೆ. ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ ನೀರು ಹರಿಸಿದಾಗಲೆಲ್ಲಾ ಪುರಂದರ ಮಂಟಪ ಸೇರಿದಂತೆ ಕೆಲ ಸ್ಮಾರಕಗಳು ಮುಳುಗುತ್ತಿವೆ. ಅದಕ್ಕಿಂತ ಹೆಚ್ಚಿನ ನೀರು ಹರಿಸಿದರೆ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

13ರಿಂದ 16ನೇ ಶತಮಾನದ ಮಧ್ಯೆ ಹಂಪಿಯಲ್ಲಿ ನಿರ್ಮಾಣಗೊಂಡಿರುವ ಸ್ಮಾರಕಗಳು ತುಂಗಭದ್ರಾ ನದಿ ಪಾತ್ರಕ್ಕಿಂತ 15 ಮೀಟರ್‌ ಎತ್ತರದಲ್ಲಿವೆ. ಹೀಗಾಗಿಯೇ ಅವುಸುರಕ್ಷಿತವಾಗಿವೆ. ಆದರೆ, ಈ ಸೇತುವೆಗಳಿಂದ ವಿರುದ್ಧ ದಿಕ್ಕಿನಲ್ಲಿ ನೀರು ಬಂದು, ಹೂಳಿನ ಪ್ರಮಾಣ ಹೆಚ್ಚಾಗುತ್ತಿದೆ. ಹಂಪಿಯ ತಳವಾರಘಟ್ಟವೇ ಇದಕ್ಕೆ ಸಾಕ್ಷಿ. ಅಲ್ಲಿ ನದಿ ನೆಲಕ್ಕೆ ಸಮನಾಗಿ ಹರಿಯುತ್ತಿದೆ.

ಕಂಪ್ಲಿ–ಗಂಗಾವತಿ ಸೇತುವೆ 1960ರಲ್ಲಿ ನಿರ್ಮಾಣಗೊಂಡಿದೆ. ಆದರೆ, ಆರಂಭಿಕ ವರ್ಷಗಳಲ್ಲಿ ಅದರಿಂದ ಸಮಸ್ಯೆಯಾಗಿರಲಿಲ್ಲ. ಆದರೆ, 1992ರಲ್ಲಿ 3.69 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಿದಾಗ ಪರಿಣಾಮ ಉಂಟಾಗಿತ್ತು. ಸೇತುವೆ 12 ಮೀಟರ್‌ ಎತ್ತರ ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಸಹಜ ಹರಿವಿಗೆ ತಡೆಯೊಡ್ಡಿತ್ತು. 2017ರಲ್ಲಿ ಬುಕ್ಕಸಾಗರ–ಕಡೇಬಾಗಿಲು ನಡುವೆ 487.5 ಮೀಟರ್‌ ಉದ್ದದ ಹೊಸ ಸೇತುವೆ ನಿರ್ಮಿಸಲಾಗಿದೆ. ಇದರ ಎತ್ತರ 500 ಮೀಟರ್‌ ಇದೆ. ಇದು ಕೂಡ ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ನೀರು ಸಹಜವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕಂಪ್ಲಿ–ಗಂಗಾವತಿ ಸೇತುವೆಗೆ ಪರ್ಯಾಯವಾಗಿ 2009ರಲ್ಲಿ ಹಂಪಿ ಯಲ್ಲಿ ತೂಗು ಸೇತುವೆ ನಿರ್ಮಿಸುವಾಗ ಅದು ಅರ್ಧದಲ್ಲೇ ಕುಸಿದು ಬಿದ್ದು, ಏಳು ಜನರ ಸಾವು ಸಂಭವಿಸಿತ್ತು. ಇದರ ಬಗ್ಗೆ ಯುನೆಸ್ಕೊ ಆಕ್ಷೇಪಿಸಿದ್ದರಿಂದ ಸರ್ಕಾರ ಬಳಿಕ ನಿರ್ಮಾಣ ಕೈಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT