ದಾವಣಗೆರೆ: ‘ಹೊಸ ಪಿಂಚಣಿ ವ್ಯವಸ್ಥೆ (ಎನ್.ಪಿ.ಎಸ್) ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ (ಒ.ಪಿ.ಎಸ್) ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹೋರಾಟ ನಡೆಸಲಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಇಲ್ಲಿನ ಬಂಟರ ಭವನದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಏಳನೇ ವೇತನ ಆಯೋಗ ಹಾಗೂ ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸಂಘ ಮುಂದಿಟ್ಟ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ನೌಕರರು ಆಬಾರಿಯಾಗಿದ್ದೇವೆ. ಹೊಸ ಪಿಂಚಣಿ ವ್ಯವಸ್ಥೆ ನಾಲ್ಕೈದು ತಿಂಗಳಲ್ಲಿ ರದ್ದಾಗುವ ನಿರೀಕ್ಷೆ ಇದೆ. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ಎಲ್ಲ ನೌಕರರು ಒಗ್ಗೂಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಪಟ್ಟು ಹಿಡಿಯಲಾಗುವುದು’ ಎಂದು ಹೇಳಿದರು.
‘ಹೊಸ ಪಿಂಚಣಿ ವ್ಯವಸ್ಥೆಗೆ ವ್ಯಕ್ತವಾದ ವಿರೋಧವನ್ನು ಪರಿಗಣಿಸಿದ ರಾಜ್ಯ ಸರ್ಕಾರ, ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ನೀಡುವ ಸಾಧ್ಯತೆ ಇದೆ. ಸರ್ಕಾರದ ಅಧಿಕಾರವಧಿ ಇನ್ನೂ ನಾಲ್ಕು ವರ್ಷ ಇರುವುದರಿಂದ ಪಿಂಚಣಿ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ’ ಎಂದು ಹೇಳಿದರು.