ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್ಐ ಪರೀಕ್ಷೆ ಮುಂದೂಡಿಕೆ ಬಗ್ಗೆ ಗೃಹ ಮಂತ್ರಿ ಪರಮೇಶ್ವರ ಏನಂದ್ರು?

Published : 10 ಸೆಪ್ಟೆಂಬರ್ 2024, 14:42 IST
Last Updated : 10 ಸೆಪ್ಟೆಂಬರ್ 2024, 14:42 IST
ಫಾಲೋ ಮಾಡಿ
Comments

ಬೆಂಗಳೂರು: ‘ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್‌ (ಪಿಎಸ್‌ಐ) 402 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ 22ರಂದು ನಡೆಸಲು ಉದ್ದೇಶಿಸಿರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸದಾಶಿವನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಬಿಜೆಪಿ ಶಾಸಕರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಧೀರಜ್ ಮುನಿರಾಜ್ ನೇತೃತ್ವದ ನಿಯೋಗದಿಂದ‌ ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಪಿಎಸ್‌ಐ ಪರೀಕ್ಷೆ ಬರೆಯಬೇಕಾದ 100ಕ್ಕೂ ಹೆಚ್ಚು ಆಕಾಂಕ್ಷಿಗಳು, ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಬರೆಯುತ್ತಿದ್ದಾರೆ. ಹೀಗಾಗಿ, ಪರೀಕ್ಷಾ ದಿನ ಮುಂದೂಡುವಂತೆ ಮನವಿ ಸಲ್ಲಿಸಿದ್ದಾರೆ. ಯುಪಿಎಸ್‌ಸಿ ನಮಗೆ ಮುಖ್ಯವಲ್ಲ. ಇಲಾಖೆಯಲ್ಲಿ ಸಾವಿರ ಪಿಎಸ್ಐ ಹುದ್ದೆಗಳು ಖಾಲಿ ಇವೆ. ಈ ಕಾರಣಕ್ಕೆ ನಿಯಮ 32 ಅಡಿ ಎಎಸ್‌ಐಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ ನೀಡಲಾಗಿದೆ. ಬೀದಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಬೇಕಾದ ಪಿಎಸ್ಐ ಇಲ್ಲದೇ ಇದ್ದರೆ ಇಲಾಖೆ ಮುನ್ನಡೆಸುವುದು‌ ಹೇಗೆ’ ಎಂದು ಪರಮೇಶ್ವರ ಪ್ರಶ್ನಿಸಿದರು.

‘ಬಿಜೆಪಿ ಆಡಳಿತದ ಅವಧಿಯಲ್ಲಿ 545 ಪಿಎಸ್ಐ ಹುದ್ದೆಗಳ ಭರ್ತಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದ ಕಾರಣ ನೇಮಕಾತಿ ನಡೆದಿಲ್ಲ. ಎಲ್ಲ ಗೊಂದಲಗಳ ನಡುವೆಯೂ ನ್ಯಾಯಾಲಯದಿಂದ ಅನುಮತಿ ಪಡೆದು ಮರು ಪರೀಕ್ಷೆ ನಡೆಸಲಾಗಿದೆ‌. ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಹಂತದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಅಂತಿಮ‌ ಪಟ್ಟಿ ಪ್ರಕಟಿಸಲು ವಿಳಂಬವಾಗುತ್ತಿದೆ’ ಎಂದರು.

‘ನಾಲ್ಕು ವರ್ಷಗಳಿಂದ ಪಿಎಸ್ಐ ನೇಮಕಾತಿ ನಡೆದಿಲ್ಲ. ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲು‌ ಕನಿಷ್ಠ ಒಂದು ವರ್ಷ ಬೇಕು. ಎರಡು ವರ್ಷ ಪ್ರೊಬೇಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪರಿಸ್ಥಿತಿಯಲ್ಲಿ, 402 ಪಿಎಸ್‌ಐ ಹುದ್ದೆಗಳಿಗೆ ಆದಷ್ಟು ಬೇಗ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಮುಂದೆ 600 ಪಿಎಸ್ಐ ಹುದ್ದೆಗಳ ಭರ್ತಿಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ’ ಎಂದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT