ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವ ಉಳಿಸಲು ರಕ್ತ ಅಗತ್ಯ: ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅಭಿಮತ

*ಜಾಥಾ ಮೂಲಕ ರಕ್ತ ದಾನದ ಬಗ್ಗೆ ಜಾಗೃತಿ
Published 14 ಜೂನ್ 2024, 15:18 IST
Last Updated 14 ಜೂನ್ 2024, 15:18 IST
ಅಕ್ಷರ ಗಾತ್ರ

ಬೆಂಗಳೂರು: ‘ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತ ಅಗತ್ಯ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನದ ಮಹತ್ವ ಅರಿತು, ಇನ್ನೊಬ್ಬರಿಗೆ ನೆರವಾಗಬೇಕು’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಆರೋಗ್ಯ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಜಾಗೃತಿ ಜಾಥಾಗೆ ಚಾಲನೆ ನೀಡಿ, ಮಾತನಾಡಿದರು. 

‘ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ. ರಕ್ತದಾನ ಮಾಡುವ ಮೂಲಕವೂ ಜೀವ ಉಳಿಸಬಹುದು. ರಕ್ತದಾನದಿಂದ ಹಲವರ ಜೀವನದಲ್ಲಿ ಬದಲಾವಣೆಯನ್ನೂ ತರಬಹುದಾಗಿದೆ. ದೇಶದಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ರಕ್ತದಾನಕ್ಕೆ ನಾವೆಲ್ಲರೂ ಮುಂದಾಗಬೇಕು. ರಕ್ತದಾನ ಇತರರಿಗೆ ಮರುಜನ್ಮ ನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆ. ಯುವಜನರು ರಕ್ತದಾನದಂತಹ ಸಮಾಜಸೇವೆಗೆ ಹೆಚ್ಚಿನ ಒಲವು ತೋರಬೇಕು. ತಾವು ರಕ್ತದಾನ ಮಾಡುವುದರೊಂದಿಗೆ ಇತರರನ್ನೂ ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು’ ಎಂದು ಹೇಳಿದರು. 

‘ರಕ್ತದಾನವು ಎಷ್ಟೋ ಜನರಿಗೆ ಜೀವ ನೀಡುವ ಮಹತ್ಕಾರ್ಯವಾಗಿದೆ. 18ರಿಂದ 65 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನಕ್ಕೆ ಮುಂದೆ ಬರಬೇಕು. ದಾನಿ ನೀಡುವ ಒಂದು ಯೂನಿಟ್ ರಕ್ತವನ್ನು ನಾಲ್ಕು ಜೀವ ಉಳಿಸಲು ಬಳಸಬಹುದಾಗಿದೆ’ ಎಂದು ತಿಳಿಸಿದರು. 

‘ಅಪಘಾತಕ್ಕೆ ಒಳಗಾದವರು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು, ಕ್ಯಾನ್ಸರ್ ಪೀಡಿತರು, ಹಿಮೋಫಿಲಿಯಾ ರೋಗಿಗಳು ಸೇರಿ ರಕ್ತ ಸಂಬಂಧಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ನಿಯಮಿತವಾಗಿ ರಕ್ತ ಪೂರೈಸಬೇಕಾಗುತ್ತದೆ. ರಕ್ತದಾನದಿಂದ ಮಾತ್ರವೇ ರಕ್ತದ ಕೊರತೆ ನೀಗಲು ಸಾಧ್ಯ’ ಎಂದರು.

ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂ ಸೇವಕರು ರಕ್ತದಾನ ಮಾಡುವ ಕುರಿತು ಪ್ರತಿಜ್ಞೆ ಸ್ವೀಕರಿದರು. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT