ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗದ ಈ ಬೇವು ಕಹಿಯಿಲ್ಲ!

Last Updated 30 ಮಾರ್ಚ್ 2014, 20:08 IST
ಅಕ್ಷರ ಗಾತ್ರ

ಗುಲ್ಬರ್ಗ:ನಗರ ಹೊರ­ವಲಯ­ದ­ಲ್ಲೊಂದು ಶತಮಾನಗಳಷ್ಟು ಹಳೆ­ಯ­ದಾದ ಕಹಿಯಿಲ್ಲದ ಬೇವಿನ ಮರ­ವಿದ್ದು, ಅನೇಕ ವರ್ಷಗಳಿಂದ ಜನರು ಬೇವಿನ ಎಲೆಗಳನ್ನು ಜಗಿದು ಅಚ್ಚರಿ ಪಡುತ್ತಿ­ದ್ದಾರೆ. ‘ಕಹಿ ಬಿತ್ತಿ, ಸಿಹಿ ಫಲ ಅಪೇ­ಕ್ಷಿಸ­ಬಹುದೆ’ ಎನ್ನುವ ಗಾದೆ ಮಾತಿಗೆ ಇದು ಅಪವಾದ­ವಾಗಿದೆ.

ಗುಲ್ಬರ್ಗದಿಂದ ಹುಮನಾಬಾದ್‌ ರಸ್ತೆ ಮಾರ್ಗದಲ್ಲಿ ಸ್ವಾಮಿ ಸಮರ್ಥ ಮಹಾರಾಜರ ದೇವಸ್ಥಾನದ ಗುಡ್ಡವಿದೆ. ದೇವಸ್ಥಾನದ ಅಂಗಳದಲ್ಲಿ ಅನೇಕ ಬೇವಿನ ಮರಗಳಿದ್ದರೂ ಒಂದು ಮರದ ಬೇವು ಮಾತ್ರ ಕಹಿ ಇಲ್ಲ. ಸ್ವಲ್ಪ ಒಗರಾಗಿದ್ದು, ಎಲೆಗಳನ್ನು ಜಗಿಯು­ವಾಗ ಮುಖ ಸಿಂಡರಿಸುವ ಅನುಭವ­ವಾಗು­ದಿಲ್ಲ.

ಈ ಮರಕ್ಕೆ ಆಧ್ಯಾತ್ಮಿಕ ಹಿನ್ನೆಲೆ­ಯಿದ್ದು, ಇಲ್ಲಿಗೆ ಬರುವ ಭಕ್ತರು ಅದರ ಎಲೆಗಳನ್ನು ಜಗಿದು ಧನ್ಯತಾ ಭಾವ ಹೊಂದುತ್ತಿದ್ದಾರೆ.

ಸಸ್ಯಶಾಸ್ತ್ರರ ವಿಶ್ಲೇಷಣೆಯ ಪ್ರಕಾರ ‘ಲಕ್ಷಕ್ಕೊಂದು ಬೇವಿನ ಮರ ಈ ರೀತಿ ಕಹಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಡ್ಡ ಕಸಿಯ ಪರಿಣಾಮದಿಂದ ಬೇವಿನ ಗಿಡದ ಕಹಿ ಕಡಿಮೆಯಾಗಿರುತ್ತದೆ. ಇದನ್ನು ಪವಾಡ ಎಂದು ಪರಿಗಣಿಸ­ಬಾರದು. ಬೇವಿನ ಎಲೆಗಳನ್ನು ಪರೀಕ್ಷಿ­ಸುತ್ತಾ ಹೋದರೆ, ಖಂಡಿತವಾಗಿಯೂ ಬೇರೆ ಕಡೆಗಳಲ್ಲೂ ಕಹಿಯಿಲ್ಲದ ಬೇವಿನ ಮರ ಸಿಗುತ್ತದೆ’ ಎನ್ನುತ್ತಾರೆ.

‘ಶಿರಡಿ ಸಾಯಿಬಾಬಾ ಅವರ ಸಮಕಾಲೀನ­ವ­ರಾದ ಸ್ವಾಮಿ ಸಮರ್ಥ ಮಹಾರಾಜರ ಮೂಲ ಮಹಾ­ರಾಷ್ಟ್ರದ ಅಕ್ಕಲಕೋಟ. 1858ರಲ್ಲಿ ಗುಲ್ಬರ್ಗ ಹೊರವಲಯದ ಈ ಗುಡ್ಡಕ್ಕೆ ಭೇಟಿ ನೀಡಿದ್ದರು. 1991ರ ವರೆಗೂ ಈ ಬಗ್ಗೆ ಸ್ಥಳೀಯರಿಗೆ ಯಾವುದೇ ವಿಷಯ ಗೊತ್ತಿರಲಿಲ್ಲ. ಶಂಕರ ಮಹಾ­ರಾಜ ಎನ್ನುವ ಸ್ವಾಮಿಗಳು ಸಂಚಾರ ಮಾಡುತ್ತಾ ಬಂದು, ಈ ಬೇವಿನ ಮರ­ವನ್ನು ಪೂಜಿಸಿದರು.

ಸ್ವಾಮಿ ಸಮ­ರ್ಥರು ಇಲ್ಲಿಗೆ ಭೇಟಿ ನೀಡಿದ್ದನ್ನು ಸ್ಮರಿಸಿ­ಕೊಂಡು, ಶಂಕರ ಮಹಾರಾಜರೆ ಸಮರ್ಥ ಮಹಾರಾಜರ ದೇವಸ್ಥಾನ­ವೊಂದನ್ನು ನಿರ್ಮಿಸಿದರು. ಅನಂತರ ಈ ಬೇವಿನ ಮರ ಕಹಿಯಾಗಿಲ್ಲ ಎನ್ನುವ ವಿಷಯ ಬೆಳಕಿಗೆ ಬಂತು’ ಎನ್ನು­ತ್ತಾರೆ ಶ್ರೀ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಬಸವ­ರಾಜ ಮಾಡಗಿ.

‘ಇದೊಂದು ಪವಾಡ ಎಂದು ಎಲ್ಲೂ ಪ್ರಚಾರ ಮಾಡಿಲ್ಲ. ಆದರೆ ಜನ­ರಿಂದ ವಿಷಯ ಹರಡಿದೆ. ಬಂದ ಜನ­ರೆಲ್ಲ ಬೇವಿನ ಮರದ ಎಲೆ­ಗ­ಳ­ನ್ನು ಕಡಿದು, ಈಗ ಕೈಗೆ ಬೇವಿನ ಎಲೆ­ಗಳು ನಿಲು­ಕ­­ದಷ್ಟು ಎತ್ತರಕ್ಕೆ ಹೋಗಿವೆ. ಸಸ್ಯ­ಶಾಸ್ತ್ರ­ಜ್ಞರು, ಸಂಶೋ­ಧಕರು ಕುತೂ­ಹಲ­ದಿಂದ ಬಂದು ಹೋಗಿ­ದ್ದಾರೆ. ಬೇವಿನ ಗಿಡ ಹಾಳಾಗದಂತೆ ಅದರ ಸುತ್ತ  ಕಟ್ಟೆ ನಿರ್ಮಿಸಲಾಗಿದೆ. ಬೇರೆ ಕಡೆಗೆ ಇಂತಹ ಮರ ಇದೆಯೋ ಇಲ್ಲವೋ ನಮಗೂ ಗೊತ್ತಿಲ್ಲ’ ಎಂದರು. 

ಸ್ವಾಮಿ ಸಮರ್ಥ ದೇವ­ಸ್ಥಾನಕ್ಕೆ ಮಹಾರಾಷ್ಟ್ರ­ದಿಂದ ಹೆಚ್ಚಿನ ಸಂಖ್ಯೆ­­ಯಲ್ಲಿ ಭಕ್ತರು ಬರು­ತ್ತಾರೆ. ದೇವ­­ಸ್ಥಾನಕ್ಕೆ ಯಾವುದೇ ಸ್ವಾಮಿ­­­ಗಳಿಲ್ಲ. ಆಡಳಿತ ಮಂಡಳಿ­ಯಿಂದ ದೇವ­ಸ್ಥಾನ­ವನ್ನು ನಿರ್ವಹಿಸ­ಲಾಗು­­ತ್ತದೆ. ಗೋವು ಸಾಕಾಣಿಕೆ, ಪತ್ರಿ ವನ, ರುದ್ರಾಕ್ಷಿ ವನಗಳನ್ನು ನಿರ್ಮಿಸ­ಲಾಗಿದೆ. ಮುಖ್ಯ­ವಾಗಿ ಭಕ್ತರು ಜನವರಿ ಹಾಗೂ ಎಳ್ಳ­ಮ­ವಾಸ್ಯೆ­ಯಂದು ಹೆಚ್ಚಿನ ಸಂಖ್ಯೆ­­ಯಲ್ಲಿ ಬರು­ತ್ತಾರೆ. ದೇವಸ್ಥಾನ­ದಲ್ಲಿ ಸದಾ­ಕಾಲ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

‘ದೇಶದ ಪ್ರಮುಖ ಗೋವು ತಳಿಗಳನ್ನು ಇಲ್ಲಿ ಸಂರಕ್ಷಿಸಿ ಅಭಿವೃದ್ಧಿ­ಗೊಳಿ­ಸ­ಲಾಗುತ್ತಿದೆ. ಸಾರ್ವಜನಿಕರು ನೀಡುವ ದೇಣಿಗೆ­ಯಿಂದಲೇ ಈ ಎಲ್ಲ ಅಭಿ­ವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಕೂಡಾ ಗೋವು ಸಂರ­ಕ್ಷ­ಣೆಗೆ ನೆರವು ನೀಡಿದೆ’ ಎನ್ನುತ್ತಾರೆ ಸೇವಾ ಕೇಂದ್ರದ ಪ್ರಧಾನ ಕಾರ್ಯ­ದರ್ಶಿ ಡಿ.ವಿ. ಪಾಟೀಲ್‌.

ವಿಶೇಷ: ಯುಗಾದಿ ಹಬ್ಬದ ದಿನ ಕಷ್ಟದ ಸಂಕೇತವಾಗಿ ಬೇವಿನ ಕಹಿ­ಯನ್ನು ಎಲ್ಲ ಕಡೆ­ಗಳಲ್ಲೂ ಸೇವಿಸ­ಲಾ­ಗುತ್ತದೆ.
ಆದರೆ ಗುಲ್ಬರ್ಗದ ದೇವ­ಸ್ಥಾನದಲ್ಲಿ ವರ್ಷ­­­­ವಿಡೀ ಸುಖ ಜೀವನ ಕರುಣಿಸು­ವಂ­ತೆ ಜನರು ಬೇಡಿ­ಕೊಂಡು ಕಹಿ­ಯಿ­­ಲ್ಲದ ಬೇವು ಸೇವಿಸುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT