ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೆ ಮಹಾದೇವಿ ಕ್ರಿಯಾ ಸಮಾಧಿಗೆ ಸಿದ್ಧತೆ

Last Updated 15 ಮಾರ್ಚ್ 2019, 17:13 IST
ಅಕ್ಷರ ಗಾತ್ರ

ಕೂಡಲಸಂಗಮ (ಬಾಗಲಕೋಟೆ): ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಗುರುವಾರ ಲಿಂಗೈಕ್ಯರಾದ ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಬಸವಧರ್ಮ ಪೀಠದ ಆವರಣದ ಶರಣ ಲೋಕದಲ್ಲಿ ನಡೆಯಲಿದೆ. ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಗದಗ ತೋಂಟದಾರ್ಯ ಮಠದ ಶಾಖೆ ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ, ಇಳಕಲ್ ಗುರುಮಹಾಂತ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀ ಹಾಗೂ ಬಸವಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ ಮೇಲ್ವಿಚಾರಣೆಯಲ್ಲಿ ಶುಕ್ರವಾರ ಅಂತಿಮ ವಿಧಿವಿಧಾನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಿಂದ ಮಧ್ಯಾಹ್ನ ಹೊರಟ ಪಾರ್ಥೀವ ಶರೀರ ಹೊತ್ತ ವಾಹನ ಚಿತ್ರದುರ್ಗ ಮಾರ್ಗವಾಗಿ ರಾತ್ರಿ 9 ಗಂಟೆಗೆ ಕೂಡಲಸಂಗಮ ತಲುಪುತ್ತದೆ. ಚಾಲುಕ್ಯ ಮಹಾದ್ವಾರದಿಂದ ಬಸವೇಶ್ವರ ವೃತ್ತದ ಮೂಲಕ ಐಕ್ಯಸ್ಥಳದ ಹೊರ ಆವರಣಕ್ಕೆ ತಂದು ಅಲ್ಲಿಂದ ಮಡಿವಾಳ ಮಾಚಿದೇವರ ದ್ವಾರದ ಮೂಲಕ ಬಸವಧರ್ಮ ಪೀಠದ ಆವರಣದಲ್ಲಿ ನಿರ್ಮಿಸಲಾಗಿರುವ ವಿಶಾಲ ವೇದಿಕೆಯತ್ತ ಬರಲಿದೆ. ಅಲ್ಲಿ ಲಿಂಗಾಯತ ಕ್ರಿಯಾವಿಧಿ ನೆರವೇರಿಸಿ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ರಾಜ್ಯದ ವಿವಿಧೆಡೆ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ರಾಷ್ಟ್ರೀಯ ಬಸವದಳದ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಈ ವೇಳೆ ಹಾಜರಿರಲಿದ್ದಾರೆ. ಮಾತೆ ಮಹಾದೇವಿ ಗೌರವಾರ್ಥ 101 ಅಡಿ ಉದ್ದದ ಲಿಂಗಾಯತ ಧರ್ಮದ ಧ್ವಜ ಹಾರಿಸಲಾಗುತ್ತದೆ.

ಕ್ರಿಯಾ ಸಮಾಧಿಗೆ ಸಿದ್ಧತೆ: ಸಮಾಧಿ ಸ್ಥಳದಲ್ಲಿ 6 ಅಡಿ ಎತ್ತರ, 5 ಅಡಿ ಅಗಲದ ಇಷ್ಟಲಿಂಗ ಮಾದರಿಯ ಗೋಲ ನಿರ್ಮಿಸಿದ್ದು, ಅದರೊಳಗೆ ದೇಹ ಇಟ್ಟು, ತ್ಯಾಗಾಂಗ, ಭೋಗಾಂಗ, ಯೋಗಾಂಗಕ್ಕೆ ಅನುಗುಣವಾಗಿ ಷಟ್ಕೋನಾಕಾರದಲ್ಲಿ 12 ಸಾವಿರ ವಿಭೂತಿಗಳನ್ನು ಜೋಡಣೆ ಮಾಡಲಾಗುತ್ತದೆ. ಲಿಂಗಾಯತ ಧರ್ಮದ ಸಂವಿಧಾನಕ್ಕೆ ಅನುಗುಣವಾಗಿ ಐಕ್ಯ, ಶರಣ, ಪ್ರಾಣಲಿಂಗಿ, ಪ್ರಸಾದಿ, ಮಹೇಶ, ಭಕ್ತ ಹೀಗೆ ಷಟಸ್ಥಲಗಳ ಸೂಚಕವಾಗಿ ವಿಭೂತಿ ಧಾರಣೆ ನಡೆಯಲಿದೆ. ನಂತರ ಅಲ್ಲಿ ನೆರೆದ ಶ್ರೀಗಳಿಂದ ಅಂತಿಮ ಪ್ರಾರ್ಥನೆ ನಡೆಯಲಿದೆ ಎಂದು ಮಹಾದೇಶ್ವರ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ಸಮಾನಾಂತರ ವೇದಿಕೆ:
ಒಂದು ವೇದಿಕೆಯಲ್ಲಿ ಮಾತೆ ಮಹಾದೇವಿಯವರ ಪಾರ್ಥೀವ ಶರೀರ ಇಡಲಾಗುತ್ತದೆ. ಇನ್ನು ಎರಡರ ಪೈಕಿ ಒಂದರಲ್ಲಿ ಗಣ್ಯರಿಗೆ, ಮತ್ತೊಂದರಲ್ಲಿ ಮಠಾಧೀಶರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅಂತಿಮ ದರ್ಶನದ ವೇದಿಕೆಯ ಎದುರು ಶಾಮಿಯಾನ ಹಾಕಲಾಗಿದೆ. ನಾಲ್ಕು ಕಡೆ ಎಲ್ಇಡಿ ಪರದೆ ಹಾಕಲಾಗಿದೆ. 75 ಸಾವಿರ ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಲಾಗಿದೆ. ಆಶ್ರಮದ ಮುಖ್ಯದ್ವಾರದಿಂದ ಒಳಗೆ ಪ್ರವೇಶಿಸುವವರು ವೇದಿಕೆಯ ಬಳಿ ತೆರಳಿ ಪಾರ್ಥೀವ ಶರೀರದ ದರ್ಶನ ಪಡೆದು ಎಡ ಭಾಗದ ಮತ್ತೊಂದು ಗೇಟ್‌ನಿಂದ ಹೊರಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ನಾಡಿನ ವಿವಿಧೆಡೆಯಿಂದ ಹಿಂದಿನ ದಿನ ಬೆಳಿಗ್ಗೆಯಿಂದಲೇ ಶರಣರು, ಜಂಗಮಮೂರ್ತಿಗಳು ಆಶ್ರಮಕ್ಕೆ ಬಂದಿದ್ದು, ವಾಸ್ತವ್ಯ ಹೂಡಿದ್ದಾರೆ.

ಸಿಹಿ ಊಟದ ವ್ಯವಸ್ಥೆ!:
ಶರಣರು ಮರಣವೇ ಮಹಾನವಮಿ ಎಂದು ಹೇಳಿದ್ದಾರೆ. ಹಾಗಾಗಿ ಅಂತಿಮ ಸಂಸ್ಕಾರಕ್ಕೆ ಬರುವ ಎಲ್ಲರಿಗೂ ಮುಂಜಾನೆ ಉಪಾಹಾರ, ಮಧ್ಯಾಹ್ನ ಸಿಹಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಮಾತಾಜಿ ಅವರ ಇಚ್ಛೆಯಾಗಿತ್ತು ಎಂದು ಮಹಾದೇಶ್ವರ ಶ್ರೀ ಹೇಳಿದರು.

ಒಡತಿಗಾಗಿ ಕಾದು ಕುಳಿತ ಬೆಳ್ಳಿ..
ಎರಡು ವರ್ಷಗಳಿಂದ ಮಾತೆ ಮಹಾದೇವಿ ಕೂಡಲಸಂಗಮದ ಆಶ್ರಮದಲ್ಲಿಯೇ ಹೆಚ್ಚು ಕಾಲ ಕಳೆದಿದ್ದು, ಈ ವೇಳೆ ಅವರೊಂದಿಗೆ ಒಡನಾಟ ಹೊಂದಿದ್ದ ನಾಯಿಗಳಾದ ಬೆಳ್ಳಿ ಹಾಗೂ ರಾಜ ಒಡತಿಗಾಗಿ ಕಾದು ಕುಳಿತಿದ್ದ ನೋಟ ಮನಕಲಕಿತು.

ಬೆಳ್ಳಿ, ಮಾತೆ ವಾಸ್ತವ್ಯದ ಕೋಣೆಯ ಹೊರಗೆ ಕುಳಿತಿದ್ದು, ಅದರ ಮಗು ರಾಜ ಕ್ರಿಯಾ ಸಮಾಧಿಯ ಬಳಿ ಅತ್ತಿಂದಿತ್ತ ಓಡಾಡುತ್ತಿತ್ತು. ‘ನಿತ್ಯ ಸಂಜೆ ಮಾತಾಜಿ ವಾಕಿಂಗ್ ಹೋಗುವಾಗ ಅವರಿಗೆಬೆಳ್ಳಿ ಜೊತೆಯಾಗುತ್ತಿತ್ತು. ತಡರಾತ್ರಿವರೆಗೂ ಅವರು ಬರೆಯುತ್ತಾ ಕೂತರೆ ಕೊಠಡಿಯ ಹೊರಗೆ ಕಾವಲಿಗೆ ಕುಳಿತುಕೊಳ್ಳುತ್ತಿತ್ತು. ಅವರ ಆದೇಶಗಳನ್ನು ಚಾಚೂತಪ್ಪದೆ ಪಾಲಿಸುತ್ತಿತ್ತು. ಅದು ಬರೀ ತರಕಾರಿ ತಿನ್ನುತ್ತಿದ್ದ ಕಾರಣ ಶರಣರ ಸಂಗ ಮಾಡಿ ಬೆಳ್ಳಿ ಸಸ್ಯಾಹಾರಿಯಾಗಿದ್ದಾಳೆ ಎಂದು ಚಟಾಕಿ ಹಾರಿಸುತ್ತಿದ್ದರು’ ಎಂದು ಅವರ ಆಪ್ತ ಶ್ರೀಧರ್ ಸ್ಮರಿಸಿದರು.

ಬಿಡುವಿನ ವೇಳೆ ರಾಜನೊಂದಿಗೆ ಆಟವಾಡುತ್ತಿದ್ದರು. ಬೆಳ್ಳಿಗೆ ಕಾವಿ ಬಟ್ಟೆಯನ್ನು ಹೊಲಿಸಿದ್ದರು. ಮಾತಾಜಿ ಆಸ್ಪತ್ರೆ ಸೇರಿದ ನಂತರ ಎರಡೂ ನಾಯಿಗಳು ಮಂಕಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT