ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಮೂರು ದಿನಗಳ ‘ಜಾಗತಿಕ ಶಿಕ್ಷಣ ಸಮಾವೇಶ’ಕ್ಕೆ ಚಾಲನೆ
Last Updated 24 ಮೇ 2019, 16:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶುಕ್ರವಾರ ಮೂರು ದಿನಗಳ ‘ಜಾಗತಿಕ ಶಿಕ್ಷಣ ಸಮಾವೇಶ’ಕ್ಕೆ ಚಾಲನೆ ದೊರೆಯಿತು.

ಸತ್ಯಸಾಯಿ ಪ್ರೇಮಾಮೃತಮ್ ಸಭಾಂಗಣದಲ್ಲಿ ಮೇ 26ರ ವರೆಗೆ ನಡೆಯುವ ಈ ಸಮಾವೇಶದಲ್ಲಿ ದೇಶ ಮಾತ್ರವಲ್ಲದೇ ಸುಮಾರು 15 ದೇಶಗಳಿಂದ ಶಿಕ್ಷಕರು, ಶಿಕ್ಷಣ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ.

ಸಮಾವೇಶ ಉದ್ಘಾಟಿಸಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ‘ಶಿಕ್ಷಣ ಯಾವತ್ತೂ ಮೌಲ್ಯಾಧಾರಿತವಾಗಿರಬೇಕು. ಆದರೆ ಇವತ್ತು ನಮ್ಮ ಶಿಕ್ಷಣ ವ್ಯವಸ್ಥೆ ಭೌತಿಕಮಯವಾಗಿದೆ. ಹೀಗಾಗಿಯೇ ಅದು ಮನಸು ಮತ್ತು ಹೃದಯ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಭಗವಾನ್ ಸತ್ಯಸಾಯಿ ಬಾಬಾ ಅವರು ರೂಪಿಸಿದ ಮೌಲ್ಯಾಧಾರಿತ ಶಿಕ್ಷಣದ ಪರಿಕಲ್ಪನೆಯನ್ನು ನಾವೆಲ್ಲ ಅಳವಡಿಸಿಕೊಂಡು, ಪಾಲಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ಕೋಲ್ಕತ್ತಾದ ರಾಮಕೃಷ್ಣ ಮಿಷನ್ ವಿವೇಕಾನಂದ ವಿಶ್ವವಿದ್ಯಾಲಯದ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದ ಮಾತನಾಡಿ, ‘ಇಂದು ಬಹು ಚರ್ಚಿತವಾಗಿರುವ ಮೌಲ್ಯ ಎಂಬ ಪದವನ್ನು ನಾವು ಪಾಶ್ಚಾತ್ಯರಿಂದ ಎರವಲು ಪಡೆದಿದ್ದೇವೆ. ಆದರೆ ಅವುಗಳನ್ನು ಬಹು ಹಿಂದೆಯೇ ನಮ್ಮ ವಿವೇಕಶಾಲಿಗಳಾದ ಶಿಕ್ಷಣ ತಜ್ಞರು ಪುರುಷಾರ್ಥಗಳು ಎಂದು ವಿವರಿಸಿದ್ದಾರೆ’ ಎಂದು ತಿಳಿಸಿದರು.

‘ಜಾಗತಿಕ ಕಾರುಣ್ಯವನ್ನು ಸೇವೆಯ ಮೂಲಕ ವ್ಯಕ್ತಪಡಿಸುವುದೇ ಪ್ರೇಮ. ಸರ್ವ ಜನರ ಸುಖವನ್ನು, ಹಿತವನ್ನು ನಿಜವಾದ ಅರ್ಥದಲ್ಲಿ ಕೈಗೂಡಿಸುವುದು ಶಿಕ್ಷಣದಲ್ಲಿ ಅಗತ್ಯವಾಗಿ ಸೇರ್ಪಡೆಯಾಗಬೇಕಾದ ಮೌಲ್ಯವಾಗಿದೆ. ಮೌಲ್ಯ ರಹಿತ ಶಿಕ್ಷಣವು ಶಿಕ್ಷಣವಲ್ಲ. ಮನುಷ್ಯನನ್ನು ನಿಜ ಮಾನವನನ್ನಾಗಿ ಮಾಡುವುದೇ ಶಿಕ್ಷಣದ ಗುರಿ. ಆ ಗುರಿ ಸಾಧಿತವಾಗಬೇಕಾದರೆ ಮೌಲ್ಯಗಳ ಕುರಿತಾದ ಜಾಗೃತಿ ಅಗತ್ಯ’ ಎಂದು ಪ್ರತಿಪಾದಿಸಿದರು.

ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ನಾವು ಕಲಿತ ಸದ್ವಿಚಾರ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸುವುದೇ ನಿಜವಾದ ಶಿಕ್ಷಣದ ಗುರಿಯಾಗಬೇಕಾಗಿದೆ. ಇದನ್ನು ಪ್ರಾಯೋಗಿಕವಾಗಿ ಸಾಧಿಸುವ ದಿಸೆಯಲ್ಲಿ ಈ ಸಮಾವೇಶ ಏರ್ಪಡಿಸಲಾಗಿದೆ. ಇದರಲ್ಲಿ ಶಿಕ್ಷಣ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ’ ಎಂದು ಹೇಳಿದರು.

ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಶಶಿಧರ್ ಪ್ರಸಾದ್, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್‌, ಸಾಯಿಬಾಬಾ ಅವರ ಸಂದೇಶ ವಾಹಕ ಮಧುಸೂಧನ್ ನಾಯ್ಡು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT