ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ತ್ರೀ’ಗೆ ಸಿಗದ ರಾಜಕೀಯ ಪ್ರಾತಿನಿಧ್ಯ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 11 ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸಿದವರು 7 ಮಹಿಳೆಯರು, ಒಬ್ಬರೂ ಆಯ್ಕೆಯಾಗಿಲ್ಲ
Last Updated 3 ಮೇ 2019, 13:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ಈವರೆಗೆ ನಡೆದ ಚುನಾವಣೆಗಳ ಇತಿಹಾಸದ ಪುಟ ತಿರುವಿ ಹಾಕಿದರೆ, ಪುರುಷರದೇ ಪಾರುಪತ್ಯ ಢಾಳವಾಗಿ ಗೋಚರಿಸುತ್ತದೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ‘ಮರೀಚಿಕೆ’ಯಾಗಿ ಉಳಿದು ಲಿಂಗ ತಾರತಮ್ಯದ ಛಾಯೆ ದಟ್ಟವಾಗಿ ಆವರಿಸಿರುವುದು ಕಾಣುತ್ತದೆ.

ಲೋಕಸಭೆ ಹಾಗೂ ವಿಧಾನಸಭೆಯಲ್ಲೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪುರುಷ ಪ್ರಧಾನ ಸಮಾಜದಲ್ಲಿ ರಾಜಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿದ್ದರೂ ಪ್ರಬಲವಾಗಿ ಬೆಳೆಯಲು ಸಾಧ್ಯವಾಗಿಲ್ಲ. ಕ್ಷೇತ್ರದ ಭೂತಕಾಲದ ಚುನಾವಣಾ ಕಣಗಳ ಅಂಕಿಅಂಶ ಅವಲೋಕಿಸಿದರೆ ವೇದ್ಯವಾಗುತ್ತದೆ.

ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರ 2008ರಲ್ಲಿ ನೂತನ ಜಿಲ್ಲೆಯಾಗಿ ರೂಪುಗೊಂಡಿತು. ಈ ಹಿಂದೆ ಕೋಲಾರ ಮತ್ತು ಮಧುಗಿರಿ ಲೋಕಸಭಾ ಕ್ಷೇತ್ರಗಳ ಭಾಗವಾಗಿದ್ದ ಚಿಕ್ಕಬಳ್ಳಾಪುರ 1977ರಲ್ಲಿ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ರೂಪುಗೊಂಡಿತು. ಕ್ಷೇತ್ರ ಸ್ವತಂತ್ರವಾದ ಬಳಿಕ ಈವರೆಗೆ 11 ಚುನಾವಣೆಗಳು ನಡೆದಿವೆ. ಈ ಪೈಕಿ ಒಬ್ಬೇ ಒಬ್ಬ ಮಹಿಳೆ ಸಂಸತ್ತಿಗೆ ಆಯ್ಕೆಯಾದ ಉದಾಹರಣೆ ಇಲ್ಲ.

ಸೋಜಿಗದ ಸಂಗತಿ ಎಂದರೆ ಕಳೆದ 11 ಚುನಾವಣೆಗಳಲ್ಲಿ 7ರಲ್ಲಿ ಮಹಿಳೆಯರು ನಾಮಪತ್ರವನ್ನೇ ಸಲ್ಲಿಸಿಲ್ಲ. ನಾಲ್ಕು (1984, 1998, 1999, 2014) ಚುನಾವಣೆಗಳಲ್ಲಿ ತಲಾ ಒಬ್ಬರಂತೆ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ 1998ರಲ್ಲಿ ಲೋಕಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ -ಜಯಂತಿ ಎಂಬುವರು 2,04,359 ಮತಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದು ಹೊರತುಪಡಿಸಿದರೆ, ಉಳಿದ ಮೂವರ ಸ್ಪರ್ಧೆ ಅಷ್ಟಕಷ್ಟೇ ಎಂಬಂತಿದೆ.

ಈ ಬಾರಿಯ ವಿಶೇಷ ಎಂದರೆ ಮೂರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಿಪಿಎಂ ಇದೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ಸಿಪಿಎಂ ಹುರಿಯಾಳು ಆಗಿ ಎಸ್.ವರಲಕ್ಷ್ಮಿ ಅವರು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವ ಕನಕಲಕ್ಷ್ಮೀ ಮತ್ತು ಕೆ.ಎಸ್.ನಳಿನಿ ಎಂಬುವರು ಈವರೆಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಸಣ್ಣ ಕುರುಹು ಇಲ್ಲ.

ಹೋರಾಟದ ಹಿನ್ನೆಲೆಯಿಂದ ಬೆಳೆದು ಬಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಹುದ್ದೆ ಅಲಂಕರಿಸಿರುವ ಎಸ್‌.ವರಲಕ್ಷ್ಮಿ ಅವರು ಈ ರಾಜಕೀಯ ಹೋರಾಟದಲ್ಲಿ ಗೆಲುವಿನ ದಡ ಸೇರುವ ತವಕದಲ್ಲಿ ತಮ್ಮ ಪ್ರಚಾರ ಕಾರ್ಯ ತೀವ್ರಗೊಳಿಸಿದ್ದಾರೆ.

ಲಿಂಗ ತಾರತಮ್ಯ ಖಂಡಿಸುವ ಅವರು ‘ಸಮಾನತೆ ಕೇಳುವಾಗ ಹೆಣ್ಣು ಎಂಬ ಕಾರಣಕ್ಕೆ ಮೀಸಲಾತಿ ಕೇಳಬಾರದು. ನಮ್ಮ ಪಾಲಿನ ಜವಾಬ್ದಾರಿ ನಿರ್ವಹಿಸಬೇಕು’ ಎಂದು ಪ್ರತಿಪಾದಿಸುತ್ತ ಬಂದ ಕಾರಣದಿಂದಲೇ ಇವತ್ತು ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಫಲಿತಾಂಶ ಏನಾಗುವುದೋ ಕಾಯ್ದು ನೋಡಬೇಕು.

‘ನಮ್ಮ ದೇಶದಲ್ಲಿ ಚುನಾವಣೆಯಲ್ಲಿ ಮತ ಹಾಕಲು ಮಹಿಳೆಯರು ಬೇಕು. ಆದರೆ ನೀತಿ ನಿರೂಪಣೆಯಲ್ಲಿ ಮಹಿಳೆ ಬೇಕಾಗಿಲ್ಲ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಪೂರ್ಣವಾಗುತ್ತಿಲ್ಲ. ಇದರ ಅರಿವಿನ ಕೊರತೆಯೇ ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಹಿಂದೆ ಉಳಿಯಲು ಕಾರಣವಾಗಿದೆ. ಮಹಿಳೆಯೂ ಚುನಾವಣೆ ರಾಜಕೀಯಕ್ಕೆ ಸಮರ್ಥಳು ಎಂದು ಒಪ್ಪಿಕೊಳ್ಳಲು ಪುರುಷ ಅಹಂಕಾರ ಅಡ್ಡಿಯಾಗುತ್ತಿದೆ’ ಎನ್ನುತ್ತಾರೆ ವರಲಕ್ಷ್ಮಿ.

‘ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಮತ್ತು ಮಹಿಳೆಯರಲ್ಲಿರುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರನ್ನು ಕಡೆಗಣಿಸಲು ಪ್ರಮುಖವಾದ ಅಂಶವಾಗಿದೆ. ಯಾವ ರಾಜಕೀಯ ಪಕ್ಷದಲ್ಲೂ ಮಹಿಳೆಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಕಾಳಜಿ ಇಲ್ಲ. ಪರಿಣಾಮ, ರಾಜ್ಯದಲ್ಲಿ ಸಂಸತ್ತಿಗೆ ಆಯ್ಕೆಯಾದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ’ ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಸೋಮಶೇಖರ್‌.

ಸುಧಾ ರೆಡ್ಡಿ ಪ್ರಚಂಡ ಸಾಧನೆ
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ 1977ರಲ್ಲಿ ಸ್ವತಂತ್ರವಾಗಿ ರಚನೆಯಾಗುವುದಕ್ಕಿಂತಲೂ ಮೊದಲು 1952, 1957, 1962, 1967 ಚುನಾವಣೆಗಳ ಸಂದರ್ಭದಲ್ಲಿ ಕೋಲಾರ ಲೋಕಸಭೆ ಕ್ಷೇತ್ರ, 1971ರ ಚುನಾವಣೆಯಲ್ಲಿ ಮಧುಗಿರಿ ಲೋಕಸಭೆ ಕ್ಷೇತ್ರದ ಭಾಗವಾಗಿತ್ತು. ಆ ಸಂದರ್ಭದಲ್ಲಿ 1967ರಲ್ಲಿ ಮಧುಗಿರಿ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯೊಂದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಚಂಡ ಬಹುಮತದಿಂದ ಆಯ್ಕೆಯಾದ ಸುಧಾ ವಿ. ರೆಡ್ಡಿ ಅವರ ಗೆಲುವು ಈ ಭಾಗದ ರಾಜಕೀಯ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

1962ರಲ್ಲಿ ಉತ್ತರ ಪ್ರದೇಶ ಮೂಲದ ಕೇಂದ್ರದ ಮಾಜಿ ಸಚಿವ ಅಜಿತ್‌ ಪ್ರಸಾದ್‌ ಜೈನ್‌ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ ಮೂರು ವರ್ಷಗಳ ಬಳಿಕ (1965) ಜೈನ್‌ ಅವರು ತಮ್ಮ ಆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆಮೇಲೆ 1967ರಲ್ಲಿ ನಡೆದ ಇನ್ನೊಂದು ಉಪಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಲಿ ಮರಿಯಪ್ಪ ಆಯ್ಕೆಯಾದರು. ಬಳಿಕ ಅವರು ಕೆಲವೇ ತಿಂಗಳಲ್ಲಿ ನಿಧನ ಹೊಂದಿದ ಕಾರಣಕ್ಕೆ ಮತ್ತೆ ಉಪಚುನಾವಣೆ ನಡೆಯಿತು. ಆಗ ಸುಧಾ ಅವರು ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ ಅವರ ವಿರುದ್ಧ ಸ್ಪರ್ಧಿಸಿದ್ದ ನಾಲ್ಕು ಜನರೂ ಠೇವಣಿ ಕಳೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ಸುಧಾ ಅವರು ರಾಜಕಾರಣಿಗಿಂತಲೂ ಹೆಚ್ಚಾಗಿ ಬಹುಮುಖ ವ್ಯಕ್ತಿತ್ವದ ಪ್ರತಿಭೆಯಾಗಿದ್ದರು. ಸಮಾಜ ಸೇವೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು. ಹುತಾತ್ಮರಾದ ಹಾಗೂ ಅಂಗವಿಕಲ ಯೋಧರ ಕುಟುಂಬಗಳ, ಮಾನಸಿಕ ವಿಕಲತೆಗೆ ತುತ್ತಾದ ಮಕ್ಕಳು ಮತ್ತು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ನಗರವಾಸಿ ಮಹಿಳೆಯರ ಪುನರ್ವಸತಿಗಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದರು. ಗಾಯಕಿ ಮತ್ತು ಕಲಾ ಪರಿಣತೆಯೂ ಆಗಿದ್ದ ಅವರು ತಮ್ಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದರು.

ರಾಜ್ಯದಿಂದ 12 ಮಹಿಳೆಯರ ಆಯ್ಕೆ
ಕರ್ನಾಟಕದಿಂದ ಲೋಕಸಭೆ ಪ್ರವೇಶಿಸಿದ ಮಹಿಳೆಯರ ಸಂಖ್ಯೆ ಕೂಡ ತೀರಾ ‘ನಗಣ್ಯ’ ಎನ್ನುತ್ತವೆ ಅಂಕಿಅಂಶಗಳು. ದೇಶದಲ್ಲಿ 1952ರಿಂದ ಈವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಿಂದ ಆಯ್ಕೆಯಾದ ಮಹಿಳಾ ಸಂಸದರು 12 ಮಂದಿ ಮಾತ್ರ. ಇವರಲ್ಲಿ ಕಾಂಗ್ರೆಸ್‌ನಿಂದ 9, ಬಿಜೆಪಿಯಿಂದ ಇಬ್ಬರು ಹಾಗೂ ಜನತಾ ಪರಿವಾರದಿಂದ ಒಬ್ಬ ಮಹಿಳೆ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ 1962ರ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಡಾ.ಸರೋಜಿನಿ ಮಹಿಷಿ ಆಯ್ಕೆಯಾಗಿದ್ದರೆ, 2014ರಲ್ಲಿ ನಡೆದ 16ನೇ ಲೋಕಸಭೆ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರು 12ನೆಯವರಾಗಿ ಗೆದ್ದು ಸಂಸತ್ತು ಪ್ರವೇಶಿಸಿದ್ದರು.

**

ಅನೇಕ ಪಕ್ಷಗಳಲ್ಲಿನ ಪಾಳೆಯಗಾರಿಕೆ ಮನೋಭಾವ ಹೆಣ್ಣು ಮಕ್ಕಳು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ವ್ಯವಸ್ಥಿತವಾದ ಪಿತೂರಿ ಮುಂದುವರಿಸಿಕೊಂಡು ಬರುತ್ತಿದೆ.
– ಎಸ್‌.ವರಲಕ್ಷ್ಮಿ, ಸಿಪಿಎಂ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT