ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಹೋರಾಟಕ್ಕೆ ಬ್ರಿಟನ್ ಸಂಸದರ ಬೆಂಬಲ

Last Updated 5 ಡಿಸೆಂಬರ್ 2020, 14:48 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ, ಭಾರತದ ಮೂಲದವರೂ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು 36 ಸಂಸದರು ಇಂಗ್ಲೆಂಡ್‌ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದಿದ್ದಾರೆ. ರೈತರ ವಿಚಾರವಾಗಿ ಭಾರತದೆದುರು ದನಿ ಎತ್ತಬೇಕು ಎಂದು ಒತ್ತಾಯಿಸಿದ್ದಾರೆ.

ಲೇಬರ್‌ ಪಕ್ಷದ ಸಂಸದ ತನ್‌ಮನ್‌ಜೀತ್‌ ಸಿಂಗ್ ಧೇಸಿ ಅವರು, ಈ ಪತ್ರವು ರಾಬ್‌ ಅವರೊಂದಿಗಿನ ತುರ್ತು ಸಭೆಯನ್ನು ಬಯಸುತ್ತದೆ ಎಂದು ತಿಳಿಸಿದ್ದಾರೆ.

ಲೇಬರ್‌, ಕನ್ಸರ್ವೇಟಿವ್‌ ಹಾಗೂ ಸ್ಕಾಟಿಷ್ ನ್ಯಾಷನಲ್‌ ಪಕ್ಷದ ಸಂಸದರೂ ಸೇರಿದಂತೆ, ಮಾಜಿ ನಾಯಕರಾದ ಜೆರೆಮಿ ಕೋರ್ಬಿನ್‌, ವಿರೇಂದ್ರ ಶರ್ಮಾ, ಸೀಮಾ ಮಲ್ಹೋತ್ರಾ, ವಲೇರಿಯೆ ವಾಝ್, ನಾದಿಯಾ ವಿಟ್ಟೋಮ್, ಪೀಟರ್‌ ಬಾಟಮ್‌ಲೇ, ಜಾನ್‌ ಮೆಕ್‌ಡೊನ್‌ವೆಲ್‌, ಮಾರ್ಟಿನ್‌ ಡೊಚೆರ್ಟಿ–ಹ್ಯೂಸ್‌ ಮತ್ತು ಅಲಿಸನ್‌ ಥೆವ್ಲಿಸ್‌ ಅವರು ಪತ್ರದಲ್ಲಿ ಸಹಿ ಮಾಡಿದ್ದಾರೆ.

‘ಇದು ನಿರ್ದಿಷ್ಟವಾಗಿ ಇಂಗ್ಲೆಂಡ್‌ನಲ್ಲಿರುವ ಸಿಖ್‌ ಜನಾಂಗದವರಿಗೆ ಮತ್ತು ಪಂಜಾಬ್‌ನೊಂದಿಗೆ ನಂಟು ಹೊಂದಿರುವವರ ಕಾಳಜಿಯ ವಿಚಾರವಾಗಿದೆಯಾದರೂ ಭಾರತದ ಇತರ ರಾಜ್ಯಗಳ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಅನೇಕ ಬ್ರಿಟೀಷ್‌ ಸಿಖ್ಖರು, ಪಂಜಾಬಿಗಳು ತಮ್ಮ ಕುಟುಂಬ ಹಾಗೂ ಪೂರ್ವಜರ ಭೂಮಿಯೊಂದಿಗೆ ನೇರ ಸಂಬಂಧ ಹೊಂದಿರುವುದರಿಂದ ಈ ವಿಚಾರವನ್ನು ತಮ್ಮ ಸಂಸದರ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಜೊತೆಗೆ, ಭಾರತದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳಿಂದ ಭಾರತದ ಮೇಲಾಗುವ ಪರಿಣಾಮಗಳ ಕುರಿತು ಕೆಲವು ಸಂಸದರು ಭಾರತದ ಹೈಕಮಿಷನ್‌ಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ ಎಂದೂ ಉಲ್ಲೇಖಿಸಲಾಗಿದ್ದು, ಅವರು (ಹೈಕಮಿಷನ್‌) ‘ರೈತರನ್ನು ಶೋಷಣೆಯಿಂದ ರಕ್ಷಿಸಲು ಮತ್ತು ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಲು’ ವಿಫಲರಾಗಿದ್ದಾರೆ’ ಎಂದು ಟೀಕಿಸಲಾಗಿದೆ.

ಬ್ರಿಟನ್‌ ಸಂಸದರೂ ಸೇರಿದಂತೆ ವಿವಿಧ ದೇಶಗಳ ರಾಜಕೀಯ ನಾಯಕರು ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT