ಬೈರೂತ್, ಲೆಬನಾನ್: ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 492ಕ್ಕೆ ಏರಿಕೆಯಾಗಿದೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
‘ಮೃತರಲ್ಲಿ 35 ಮಕ್ಕಳು ಮತ್ತು 58 ಮಹಿಳೆಯರೂ ಸೇರಿದ್ದಾರೆ. ಇಸ್ರೇಲ್ ಸೇನೆಯ ದಾಳಿಗೆ ಕಳೆದ ಒಂದು ವಾರದಲ್ಲಿ 1,645 ಮಂದಿ ಗಾಯಗೊಂಡಿದ್ದಾರೆ’ ಎಂದು ಆರೋಗ್ಯ ಸಚಿವ ಫಿರಾಸ್ ಅಬಿಯದ್ ಹೇಳಿದ್ದಾರೆ.
ಇಸ್ರೇಲ್–ಹಮಾಸ್ ಯುದ್ಧ ಆರಂಭವಾದ ಬಳಿಕ, ಇಸ್ರೇಲ್ ಸೇನೆ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವೈಮಾನಿಕ ದಾಳಿ ನಡೆಸಿದ್ದು ಇದೇ ಮೊದಲು. ದಾಳಿಯಲ್ಲಿ ಹಮಾಸ್‌ನ ಕಮಾಂಡರ್ ಮಹಮೂದ್ ಅಲ್ ನಾದರ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸೋಮವಾರದ ದಾಳಿಯೂ ಸೇರಿದಂತೆ ಹಿಜ್ಬುಲ್ಲಾ ಬಂಡುಕೋರರ 300ಕ್ಕೂ ಹೆಚ್ಚು ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ‘ಶತ್ರುವಿನ ದಾಳಿಗೆ ಪ್ರತ್ಯುತ್ತರವಾಗಿ ಹೈಫಾದಲ್ಲಿರುವ ಸೇನಾ ನೆಲೆಗಳನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದ್ದೇವೆ’ ಎಂದು ಹಿಜ್ಬುಲ್ಲಾ ಪ್ರಕಟಣೆ ತಿಳಿಸಿದೆ.
ಕಳೆದ ಮಂಗಳವಾರ ಮತ್ತು ಬುಧವಾರ ಲೆಬನಾನ್‌ನಾದ್ಯಂತ ನಡೆದ ಪೇಜರ್ ಸ್ಫೋಟದಲ್ಲಿ 39 ಮಂದಿ ಬಲಿಯಾಗಿ, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.