ಫ್ಲಾರಿಡಾ: ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್‌ನಿಂದ ಹಮ್ಮಿಕೊಂಡಿದ್ದ ‘ಪೋಲಾರಿಸ್ ಡಾನ್ ಮಿಷನ್’ ಬಾಹ್ಯಾಕಾಶ ನಡಿಗೆ (ಸ್ಪೇಸ್‌ವಾಕ್) ಮತ್ತೆ ವಿಳಂಬವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೆನಡಾದಲ್ಲಿರುವ ನಾಸಾದ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನಗೊಳ್ಳಬೇಕಿದ್ದ ‘ಪೋಲಾರಿಸ್ ಡಾನ್ ಮಿಷನ್’ ಹೀಲಿಯಂ ಅನಿಲ ಸೋರಿಕೆ ಮತ್ತು ಫ್ಲೋರಿಡಾದ ಕರಾವಳಿಯಲ್ಲಿ ಪ್ರತಿಕೂಲ ಹವಾಮಾನದ ಮುನ್ಸೂಚನೆಯಿಂದಾಗಿ ವಿಳಂಬವಾಗಿದೆ ಎಂದು ಸ್ಪೇಸ್‌ಎಕ್ಸ್ ಕಂಪನಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ಪೋಲಾರಿಸ್ ಡಾನ್ ಮಿಷನ್’ ಯಶಸ್ವಿ ಉಡ್ಡಯನಕ್ಕಾಗಿ ತಜ್ಞರ ತಂಡವು ಹವಾಮಾನ ಬದಲಾವಣೆ ಸಂಬಂಧಿಸಿದ ಮೇಲ್ವಿಚಾರಣೆ ಮುಂದುವರಿಸಿದೆ ಎಂದು ಕಂಪನಿ ತಿಳಿಸಿದೆ.
Due to unfavorable weather forecasted in Dragon’s splashdown areas off the coast of Florida, we are now standing down from tonight and tomorrow’s Falcon 9 launch opportunities of Polaris Dawn. Teams will continue to monitor weather for favorable launch and return conditions
— SpaceX (@SpaceX) August 28, 2024
ಸ್ಪೇಸ್‌ಎಕ್ಸ್ ನಡೆಸುತ್ತಿರುವ ಬಾಹ್ಯಾಕಾಶ ನಡಿಯನ್ನು (ಸ್ಪೇಸ್‌ವಾಕ್) ತೀರಾ ಅಪಾಯಕಾರಿ ಎಂದೇ ಪರಿಗಣಿಸಲಾಗಿದೆ. ಇದಕ್ಕಾಗಿ ತೆಳುವಾದ ಸ್ಪೇಸ್ ಸೂಟ್ ಹಾಗೂ ಏರ್‌ಲಾಕ್ ಇಲ್ಲದ ಕ್ಯಾಬಿನ್ ಬಳಸಲಾಗುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಡ್ರ್ಯಾಗನ್ ನೌಕೆ ಮೂಲಕ ‘ಪೋಲಾರಿಸ್ ಡಾನ್ ಮಿಷನ್’ ಉಡ್ಡಯನ ನಡೆಯಲಿದೆ. ಗಗನಯಾತ್ರಿಗಳು ಕೇವಲ 20 ನಿಮಿಷಗಳಲ್ಲಿ 700 ಕಿ.ಮೀ. ತಲುಪಲಿದ್ದಾರೆ ಎಂದು ವರದಿಯಾಗಿದೆ. ಈವರೆಗೂ ಭೂಮಿಯಿಂದ 400 ಕಿ.ಮೀ. ದೂರದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸರ್ಕಾರಿ ಗಗನಯಾತ್ರಿಗಳು ಮಾತ್ರ ಇಂಥ ನಡಿಗೆ ಕೈಗೊಂಡಿದ್ದರು.
ಸ್ಪೇಸ್‌ಎಕ್ಸ್‌ನ ಈ ಐದು ದಿನಗಳ ಯೋಜನೆಯಲ್ಲಿ ಗಗನಯಾನಿಗಳು ಅಂಡಾಕಾರದ ಕಕ್ಷೆಯಲ್ಲಿ ಸಂಚರಿಸಲಿದ್ದು, ಭೂಮಿಗೆ ಅತ್ಯಂತ ಸಮೀಪ 190 ಕಿ.ಮೀ. ಹಾಗೂ ಅತಿ ದೂರವೆಂದರೆ 1,400 ಕಿ.ಮೀ.ವರೆಗೂ ತಲುಪಲಿದ್ದಾರೆ. 1972ರಲ್ಲಿ ಅಮೆರಿಕ ಕೈಗೊಂಡ ಅಪೊಲೊ ಯೋಜನೆಯಲ್ಲಿ ಚಂದ್ರನ ಅಂಗಳಕ್ಕಿಳಿದ ನಂತರ ಕೈಗೊಳ್ಳುತ್ತಿರುವ ಅತಿ ದೂರದ ಬಾಹ್ಯಾಕಾಶ ಕಾರ್ಯಕ್ರಮ ಇದಾಗಿದೆ ಎಂದು ಸ್ಪೇಸ್‌ಎಕ್ಸ್ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.