ಕಠ್ಮಂಡು: ನೇಪಾಳ ರಾಜಧಾನಿ ಕಠ್ಮಂಡುವಿನ ವಾಯವ್ಯ ಭಾಗದಲ್ಲಿನ ಪರ್ವತಗಳ ಬಳಿ ಹೆಲಿಕಾಪ್ಟರ್‌ವೊಂದು ಬುಧವಾರ ಪತನಗೊಂಡ ಪರಿಣಾಮ ಐವರು ಮೃತಪಟ್ಟಿದ್ದಾರೆ.
ಏರ್ ಡೈನಾಸ್ಟಿ ಎಂಬ ಸಂಸ್ಥೆಗೆ ಸೇರಿದ ‘9ಎನ್–ಎಜೆಡಿ’ ಎಂಬ ಹೆಲಿಕಾಪ್ಟರ್ ಕಠ್ಮಂಡುವಿನಿಂದ ರಸುವ ಎಂಬಲ್ಲಿಗೆ ಸಂಚರಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
‘ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದರು, ಅದರಲ್ಲಿ ನಾಲ್ವರು ಚೀನಿ ಪ್ರವಾಸಿಗರಿದ್ದರು’ ಎಂದು ನೇಪಾಳದ ನಾಗರಿಕ ವಿಮಾನಯಾನ ಸಂಸ್ಥೆ (ಸಿಎಎಎನ್) ತಿಳಿಸಿದೆ.
‘ಮಹಿಳೆ ಸೇರಿದಂತೆ ಮೂವರು ಪ್ರಯಾಣಿಕರು ಮತ್ತು ಪೈಲಟ್ ಮೃತದೇಹಗಳನ್ನು ಗುರುತಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ 1.54 ಗಂಟೆಗೆ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೆಕ್‌ಆಫ್ ಆಗಿದ್ದ ಹೆಲಿಕಾಪ್ಟರ್, ಮೂರು ನಿಮಿಷಗಳ ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಜುಲೈ 24ರಂದು ಕಠ್ಮಂಡುವಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಖರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ವಿಮಾನವೊಂದು ಪತನಗೊಂಡಿತ್ತು. ವಿಮಾನದಲ್ಲಿದ್ದ 19 ಮಂದಿಯಲ್ಲಿ 18 ಮಂದಿ ಮೃತಪಟ್ಟಿದ್ದರು. ವಿಮಾನದ ಪೈಲಟ್ ಮಾತ್ರವೇ ಬದುಕುಳಿದಿದ್ದು, ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ನೇಪಾಳದ ದೇಶೀಯ ವಿಮಾನಯಾನ ಸಂಸ್ಥೆ ಸೂರ್ಯ ಏರ್‌ಲೈನ್ಸ್‌ನ ವಿಮಾನವು ಟೇಕ್ ಆಫ್ ಆಗುತ್ತಿದ್ದಂತೆಯೇ ಪತನಗೊಂಡಿತ್ತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ರನ್‌ವೇ ಸಮೀಪ ಅಪ್ಪಳಿಸಿತ್ತು. ಘಟನೆಯಲ್ಲಿ 15 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೂವರು ಮೃತಪಟ್ಟಿದ್ದರು.