ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಹೋರಾಟದ ಫೋಟೊಗೆ ’ಫ್ರೆಂಚ್ ಕ್ರಾಂತಿ’ ಚಿತ್ರದ ಹೋಲಿಕೆ

Last Updated 25 ಅಕ್ಟೋಬರ್ 2018, 12:07 IST
ಅಕ್ಷರ ಗಾತ್ರ

ರಣರಂಗದಂತಹ ವಾತಾವರಣ, ಯುವಕನ ಬಿಗಿ ಹಿಡಿತದಲ್ಲಿ ರಾರಾಜಿಸುತ್ತಿರುವ ಪ್ಯಾಲೆಸ್ಟೀನ್‌ ಬಾವುಟ, ಆತನ ಮತ್ತೊಂದು ಕೈಯಲ್ಲಿ ತಿರುಗುತ್ತಿರುವ ತೂರುವ ಅಸ್ತ್ರ. ಈ ಚಿತ್ರವನ್ನು ಫ್ರೆಂಚ್‌ ಕ್ರಾಂತಿಯ ಪ್ರಸಿದ್ಧ ವರ್ಣಚಿತ್ರದೊಂದಿಗೆ ಹೋಲಿಸಲಾಗುತ್ತಿದೆ.

ಟರ್ಕಿಯ ಮಾಧ್ಯಮ ಏಜೆನ್ಸಿ ಎಎ(Anadolu Agency)ನ ಮುಸ್ತಫಾ ಹಸ್ಸೌನಾ ಅಕ್ಟೋಬರ್‌ 22ರಂದು ಈ ಚಿತ್ರ ಸೆರೆಹಿಡಿದಿದ್ದಾರೆ. ಇಸ್ರೇಲ್‌ ದಿಗ್ಬಂಧನವನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿಕಾಣಿಸಿಕೊಂಡಿರುವ20 ವರ್ಷ ವಯಸ್ಸಿನ ಪ್ಯಾಲೆಸ್ಟೀನ್‌ ಯುವಕ ಆಈದ್‌ ಅಬು ಆಮ್ರೋ ಚಿತ್ರ ವೈರಲ್‌ ಆಗಿದೆ.

ಬೆಂಕಿ ಹೊತ್ತಿದ ಟೈರ್‌ಗಳಿಂದ ಆವರಿಸುವ ದಟ್ಟ ಹೊಗೆ, ಹಿಂಬದಿಯಲ್ಲಿ ರಕ್ಷಣಾ ಜಾಕೆಟ್‌ಗಳನ್ನು ತೊಟ್ಟು ಓಡಾಡುತ್ತಿರುವ ಪತ್ರಕರ್ತರು, ಮೇಲಂಗಿ ತೆಗೆದು ಹೋರಾಟದಲ್ಲಿ ನಿರತನಾಗಿರುವ ಯುವಕ. ಬಗೆಬಗೆಯ ವರ್ಣನೆಗಳೊಂದಿಗೆ ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾವಿರಾರು ಬಾರಿ ಈ ಚಿತ್ರವನ್ನು ಮರುಹಂಚಿಕೆ ಮಾಡಿಕೊಳ್ಳಲಾಗಿದೆ.

ಎಸ್‌ಒಎಎಸ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಮಂಗಳವಾರ ಟ್ವಿಟರ್‌ನಲ್ಲಿ ಫೋಟೊ ಹಂಚಿಕೊಂಡಿದ್ದು, ಗಾಜಾ ದಿಗ್ಬಂಧನ ತೆರವುಗೊಳಿಸಲು 13ನೇ ಪ್ರಯತ್ನ ಎಂದು ಬರೆದುಕೊಂಡಿದ್ದರು. ಇದರೊಂದಿಗೆ ಫ್ರಾನ್ಸ್‌ನ 1830ರ ಜುಲೈರ ಕ್ರಾಂತಿಯನ್ನು ನೆನಪಿಸುವ ವರ್ಣಚಿತ್ರವನ್ನು ಹಂಚಿಕೊಂಡಿದ್ದಾರೆ. ಯುಗೀನ್‌ ಡಿಲಾಕ್ರೋರಚಿಸಿದ ಫ್ರೆಂಚ್‌ ಕ್ರಾಂತಿಯ ಚಿತ್ರದಲ್ಲಿ ಸ್ವತಂತ್ರ ದೇವತೆ ಜನರ ಹೋರಾಟದಲ್ಲಿ ಮುಂದಾಳತ್ವ ವಹಿಸಿರುತ್ತಾಳೆ. ಫ್ರೆಂಚ್‌ ಕ್ರಾಂತಿಯಿಂದಾಗಿರಾಜಾ 10ನೇ ಚಾರ್ಲ್ಸ್‌ನ ಆಡಳಿತ ಕೊನೆಯಾಯಿತು.

ಸ್ವತಂತ್ರವನ್ನು ಪ್ರತಿನಿಧಿಸುತ್ತಿರುವ ಮಹಿಳೆ ಫ್ರೆಂಚ್‌ ಕ್ರಾಂತಿಯ ತ್ರಿವರ್ಣ ಧ್ವಜವನ್ನು ಹಿಡಿದಿದ್ದಾಳೆ. ಮುಂದೆ ಅದೇ ತ್ರಿವರ್ಣ ಧ್ವಜ ಫ್ರಾನ್ಸ್‌ನ ರಾಷ್ಟ್ರೀಯ ಧ್ವಜವಾಯಿತು. ಈ ಚಿತ್ರದೊಂದಿಗೆ ಗಾಜಾ ಪಟ್ಟಿಯಲ್ಲಿನ ಹೋರಾಟಗಾರನ ಚಿತ್ರವನ್ನು ಹೋಲಿಕೆ ಮಾಡಿರುವುದಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಡೇವಿಡ್‌ ವರ್ಸಸ್‌ ಗೊಲಿಯಾತ್‌ ಮತ್ತು ಗ್ರೀಕರ ಸಮುದ್ರ ದೇವತೆ ಪೊಸಿಡಾನ್‌ ಚಿತ್ರಗಳಿಗೂ ಹೋಲಿಕೆ ಕಲ್ಪಿಸಿದ್ದಾರೆ.

ಗಾಜಾ ನಗರದ ಸಮೀಪ ವಾಸಿಸುತ್ತಿರುವ ಯುವಕ ಅಬು ಆಮ್ರೋ ಪ್ರತಿ ಶುಕ್ರವಾರ ಮತ್ತು ಸೋಮವಾರ ಸ್ನೇಹಿತರೊಂದಿಗೆ ಜತೆಯಾಗಿ ಇಸ್ರೇಲ್‌ ದಿಗ್ಬಂಧನವನ್ನು ಪ್ರತಿಭಟಿಸುತ್ತಿದ್ದಾನೆ. ‘ವಾರದ ಲೆಕ್ಕಾಚಾರದಲ್ಲಿ ನಾನು ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ಕೆಲವು ಬಾರಿ ಇನ್ನೂ ಹೆಚ್ಚಿನ ದಿನಗಳ ಹೋರಾಟದಲ್ಲಿ ನಿರತನಾಗುತ್ತೇನೆ. ಹೋರಾಟದಲ್ಲಿದ್ದಾಗ ತೆಗೆದಿರುವ ನನ್ನ ಚಿತ್ರ ವೈರಲ್‌ ಆಗಿರುವುದು ಆಶ್ಚರ್ಯ ತಂದಿದೆ. ಆಗ ನನ್ನ ಸಮೀಪವೇ ಫೋಟೊಗ್ರಾಫರ್‌ ಇದ್ದರೆಂಬ ಅರಿವೂ ನನಗಿರಲಿಲ್ಲ’ ಎಂದು ಅಬು ಆಮ್ರೋ ‘ಅಲ್‌ ಜಝೀರಾ’ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾನೆ.

‘ಚಿತ್ರ ತೆಗೆದುಕೊಳ್ಳುವ ಸಲುವಾಗಿ ನಾನು ಪ್ರತಿಭಟನೆಯಲ್ಲಿ ಭಾಗಿಯಾಗುವುದಿಲ್ಲ. ಆದರೆ ಈ ಚಿತ್ರ ವೈರಲ್‌ ಆಗಿರುವುದು ನನ್ನ ಕಾರ್ಯವನ್ನು ಮುಂದುವರಿಸಲು ಪ್ರೇರಣೆ ನೀಡಿದೆ. ಎಲ್ಲ ಪ್ರತಿಭಟನೆಯಲ್ಲಿಯೂ ಇದೇ ಬಾವುಟವನ್ನೇ ಬಳಸುತ್ತಿದ್ದೇನೆ. ಒಂದು ಕೈಯಲ್ಲಿ ಬಾವುಟ ಹಿಡಿದು ಮತ್ತೊಂದು ಕೈಯಲ್ಲಿ ಕಲ್ಲು ತೂರುವುದು ಕಷ್ಟ, ಬಾವುಟ ಇಲ್ಲದೆಯೇ ಕಲ್ಲು ತೂರುವುದು ಸುಲಭವೆಂದು ಸ್ನೇಹಿತರು ಹೇಳುತ್ತಾರೆ. ಆದರೆ, ನನಗೆ ಬಾವುಟ ಹಿಡಿದೇ ಹೋರಾಡುವುದು ರೂಢಿಯಾಗಿದೆ’ ಎಂದು ವಿವರಿಸಿದ್ದಾನೆ.

‘ಪ್ರತಿಭಟನೆ ಸಂದರ್ಭದಲ್ಲಿ ನಾನು ಮೃತಪಟ್ಟರೆ, ಅದೇ ಬಾವುಟದಲ್ಲಿ ನನ್ನ ದೇಹವನ್ನು ಮುಚ್ಚಬೇಕು. ನಮ್ಮ ಹಕ್ಕುಗಳಿಗಾಗಿ, ಘನತೆಗಾಗಿ ಹಾಗೂ ಮುಂದಿನ ಜನಾಂಗದ ಘನತೆಯ ಉಳಿವಿಗಾಗಿ ಹೋರಾಡುತ್ತಿದ್ದೇವೆ’ ಎಂದಿದ್ದಾನೆ.

70 ವರ್ಷಗಳ ಹಿಂದೆ ಇಸ್ರೇಲಿಗಳು ಮನೆಗಳು ಹಾಗೂ ಭೂಮಿಯನ್ನು ವಶಕ್ಕೆ ಪಡೆದು ಅಲ್ಲಿನ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದರು. ಏಳು ತಿಂಗಳಿಂದ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೀನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. 11 ವರ್ಷಗಳಿಂದ ಇಸ್ರೇಲ್‌ ವಿಧಿಸಿರುವ ದಿಗ್ಬಂಧನವನ್ನು ತೆರವುಗೊಳಿಸುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಮಾರ್ಚ್‌ 30ರಂದು ಬೃಹತ್‌ ಪ್ರತಿಭಟನೆ ಪ್ರಾರಂಭವಾದಾಗಲಿಂದ ಇಸ್ರೇಲ್‌ ಪಡೆಗಳು ಕರಾವಳಿ ಭಾಗದಲ್ಲಿ ಕನಿಷ್ಠ 205 ಮಂದಿ ಪ್ಯಾಲೆಸ್ಟೀನಿಯರ ಹತ್ಯೆ ಮಾಡಿವೆ. ಹತ್ಯೆಯಾದವರಲ್ಲಿ ಪತ್ರಕರ್ತರು ಹಾಗೂ ವೈದ್ಯ ಸಹಾಯಕರೂ ಸೇರಿದ್ದು, 18,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT