ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಫಾದಲ್ಲಿ ಇಸ್ರೇಲ್ ದಾಳಿ: ಭಾರತ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

Published 14 ಮೇ 2024, 3:37 IST
Last Updated 14 ಮೇ 2024, 3:37 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಗಾಜಾದಲ್ಲಿ ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಸಿಬ್ಬಂದಿಯೊಬ್ಬರು ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ರಫಾದಲ್ಲಿ ಭಾರತೀಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆದಿದ್ದು, ಅವರು ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿ ‌ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ವಿಭಾಗದ (DSS ) ಸದಸ್ಯರಾಗಿದ್ದರು. ಅವರ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಅವರು ಭಾರತೀಯ ಸೇನೆಯ ಮಾಜಿ ಸಿಬ್ಬಂದಿ ಎಂದು ಮೂಲಗಳು ಖಚಿತಪಡಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ಅಕ್ಟೋಬರ್ 7ರಂದು ಆರಂಭವಾದ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಕೊಲ್ಲಲ್ಪಟ್ಟ ಮೊದಲ ಭಾರತೀಯ ವಿಶ್ವಸಂಸ್ಥೆ ಸಿಬ್ಬಂದಿ ಇವರಾಗಿದ್ದಾರೆ.

ಘಟನೆಯಲ್ಲಿ ಮತ್ತೊಬ್ಬ ಡಿಎಸ್ಎಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ರಫಾದಲ್ಲಿನ ಯುರೋಪಿಯನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

'ರಫಾದಲ್ಲಿ ವಿಶ್ವಸಂಸ್ಥೆಯ ವಾಹನವನ್ನು ಹೊಡೆದುರುಳಿಸಲಾಗಿದೆ. ಘಟನೆಯಲ್ಲಿ ನಮ್ಮ ಸಹೋದ್ಯೋಗಿಯೊಬ್ಬರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದಾರೆ' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಕ್ಸ್‌ ಪೋಸ್ಟ್‌ ನಲ್ಲಿ ಹೇಳಿದ್ದಾರೆ. ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಗಾಜಾದಲ್ಲಿ ಈವರೆಗೆ ಸುಮಾರು 190ಕ್ಕೂ ಹೆಚ್ಚು ವಿಶ್ವಸಂಸ್ಥೆ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂದೂ ಅವರು ಹೇಳಿದ್ದಾರೆ.

ವಿಶ್ವಸಂಸ್ಥೆ ಸಿಬ್ಬಂದಿ ಮೇಲಿನ ದಾಳಿಗಳನ್ನು ಗುಟೆರೆಸ್ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಅವರು ತನಿಖೆಗೆ ಆದೇಶಿಸಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯ ಉಪ ವಕ್ತಾರ ಫರ್ಹಾನ್ ಹಕ್ ಅವರು ಹೇಳಿಕೆ ನೀಡಿದ್ದಾರೆ.

ಗಾಜಾದಲ್ಲಿ ನಾಗರಿಕರ ಪ್ರಾಣ ಹಾನಿ ಮುಂದುವರಿದಿದೆ. ತಕ್ಷಣ ಕದನ ವಿರಾಮ ಘೋಷಿಸಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಪ್ರಧಾನ ಕಾರ್ಯದರ್ಶಿ ತಮ್ಮ ತುರ್ತು ಮನವಿಯನ್ನು ಪುನರುಚ್ಚರಿಸಿದ್ದಾರೆ ಎಂದು ಹಕ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT